ಬೆಂಗಳೂರು: ಕೋಳಿ ಸಾಕಾಣಿಕೆಯಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದ ಕುಕ್ಕುಟ ಉದ್ಯಮವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಕುಕ್ಕುಟೋದ್ಯಮ ಅಭಿವೃದ್ದಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಭಯ ನೀಡಿದರು.
ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ ಮತ್ತು ಕೋಳಿ ರೋಗ ನಿರ್ಣಯ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಧಾನ್ಯಗಳನ್ನು ಉಪಯೋಗಿಸಿಕೊಂಡು ಪೌಷ್ಠಿಕ ಮಾಂಸ ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ ಪ್ರಥಮ ಸ್ಥಾನದಲ್ಲಿದೆ. ದೇಶದಲ್ಲಿ ಕೋಳಿ ಉತ್ಪಾದನೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮವಾಗಿದೆ. ಕೃಷಿ ಬೆಳೆ ಬೆಳೆಯುವ ಜತೆಗೆ ಕುಕ್ಕುಟೋದ್ಯಮ ಆರಂಭಿಸಿದರೆ, ನಷ್ಟ ಸಂಭವಿಸುವುದನ್ನು ತಡೆಗಟ್ಟಿ, ಲಾಭ ಗಳಿಸಲು ಸಹಕಾರಿಯಾಗಲಿದೆ ಎಂದು ಪ್ರಭು ಚವ್ಹಾಣ್ ಅಭಿಪ್ರಾಯಪಟ್ಟರು.
ಕೊರೋನಾ ಸಂದರ್ಭದಲ್ಲಿ ಕೋಳಿ ತಿನ್ನಬಾರದು ಅನ್ನೋ. ವದಂತಿ ಇದ್ದಾಗ ಸರ್ಕಾರದಿಂದ ಅದನ್ನು ಸರಿಪಡಿಸಿ ಮಾಹಿತಿ ನೀಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೋಳಿ ಸಾಕಾಣಿಕೆ ಮತ್ತು ಮಾಂಸ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ಸಚಿವ ಪ್ರಭು ಚವ್ಹಾಣ್ ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಕುಕ್ಕುಟ ಉದ್ಯಮಕ್ಕೆ ನೆರವಾಗಿದ್ದನ್ನು ಸ್ಮರಿಸಿದರು.
ಕೋಳಿ ಸಾಕಾಣೆಯು ಕೆಲವು ಕೃಷಿ ಕಚ್ಚಾ ವಸ್ತುಗಳನ್ನು ಬಳಸಿ, ಸಂಸ್ಕರಿಸಿ ಮತ್ತು ಹೊಸ ಉತ್ಪನ್ನವನ್ನು ತಯಾರಿಸುವ ಉತ್ಪಾದನಾ ಪ್ರಕ್ರಿಯೆಯಾಗಿರದೇ ಕೃಷಿ ಚಟುವಟಿಕೆಯ ಭಾಗವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಿಂದ ಕುಕ್ಕುಟ ಸಾಕಾಣಿಕೆಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಪ್ರಭು ಚವ್ಹಾಣ್ ಪುನರುಚ್ಛರಿಸಿದರು.
ನಮ್ಮ ಸರ್ಕಾರವು ಪ್ರಾಣಿ ರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆಮ ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ ಸ್ಥಾಪನೆ, ಗೋಹತ್ಯೆ ನಿಷೇಧ ಕಾಯ್ದೆ, 100 ಗೋಶಾಲೆಗಳ ಸ್ಥಾಪನೆ, ಪಶುಸಂಜೀವಿನಿ, ಪುಣ್ಯಕೋಟಿ ದತ್ತು ಯೋಜನೆ, ಗೋಮಾತಾ ಸಹಕಾರ ಸಂಘ, ಪಶು ವೈದ್ಯರು ಮತ್ತು ಪಶು ವೈದ್ಯಕೀಯ ಕಿರಿಯ ಸಹಾಯಕರ ನೇಮಕಾತಿ ಪ್ರಕ್ರಿಯೆ, ಇಲಾಖೆಯಲ್ಲಿ ಮುಂಬಡ್ತಿ, ಆತ್ಮನಿರ್ಭರ ಗೋಶಾಲೆಗಳು, ಪಶುಲೋಕ ಹೀಗೇ ಅನೇಕ ಯೋಜನೆಗಳನ್ನು ಜಾರಿಗೆ ತಂದು ಮೂಕಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ವಿವಿ ಕುಲಪತಿ ಡಾ.ವೀರಣ್ಣ, ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, KPFBA ಅಧ್ಯಕ್ಷ ಡಾ.ಸುಶಾಂತ್ ಸೇರಿದಂತೆ ಹಲವರಿದ್ದರು.