ಸಿಂಧನೂರು: ಕಾರ್ಮಿಕರ ಏಳಿಗೆಗಾಗಿ ಸರಕಾರ ಪ್ರತ್ಯೇಕ ಅನುದಾನ ತೆಗೆದಿರಿಸಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ರಾಯಚೂರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ಮತ್ತು ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಡಾ| ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಶ್ರಮ ಸಾಮರ್ಥಯ ಶೀರ್ಷಿಕೆಯಡಿ ಕಾರ್ಮಿಕರಿಗೆ ತರಬೇತಿ ಮತ್ತು ಟೂಲ್ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣ ಯೋಜನೆಯನ್ನು 1996ರಲ್ಲಿ ಕೇಂದ್ರ ಸರಕಾರ ಪ್ರಾರಂಭಿಸಿತ್ತು. ಆ ಹಿನ್ನೆಲೆಯಲ್ಲಿ 2006ರಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಲಾಯಿತು. ಅಲ್ಲಿಂದ ಇಲ್ಲಿವರೆಗೂ ಕಾರ್ಮಿಕರ ಏಳಿಗೆಗೆ ಸರ್ಕಾರ ಶ್ರಮಿಸುತ್ತಿದೆ. 30 ದಿನಗಳ ಕಾಲ ತರಬೇತಿ ಪಡೆದ ಕಾರ್ಮಿಕರಿಗೆ ನಾನಾ ರೀತಿಯ ಟೂಲ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಕಾರ್ಮಿಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ಕುಟುಂಬ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದರು ಕಾರ್ಮಿಕ ಇಲಾಖೆ ಸಂಯೋಜಕ ಬಾಲಚಂದ್ರ ರಾಯಚೂರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ರಾಜ್ಯದ 21 ಕ್ಷೇತ್ರದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಥಮ ಬಾರಿಗೆ ಸಿಂಧನೂರು ಕ್ಷೇತ್ರದಲ್ಲಿ ಟೂಲ್ ಕಿಟ್ ವಿತರಿಸಲಾಗುತ್ತಿದೆ. ಕಾರ್ಮಿಕರ ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ ಇಲಾಖೆ ಇಂತಹ ಯೋಜನೆ ಜಾರಿಗೊಳಿಸಿದೆ ಎಂದರು. ಕಾರ್ಮಿಕ ನಿರೀಕ್ಷಕ ಜನಾರ್ದನಕುಮಾರ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ನಗರಸಭೆ ಸದಸ್ಯ ಎಸ್.ಬಿ. ಟೇಲರ್, ಹನುಮೇಶ ಕುರುಕುಂದಿ, ಅಶೋಕಗೌಡ ಗದ್ರಟಗಿ, ಕಾರ್ಮಿಕ ಮುಖಂಡ ಶೇಕ್ಷಾ ಖಾದ್ರಿ, ಅನ್ವರ್ ಬಾಷಾ, ವೆಂಕಟೇಶ, ನಜೀರ, ಲಿಂಗಪ್ಪ ಪೂಜಾರ, ಬಾಲಚಂದ್ರ ಮತ್ತಿತರರು ಇದ್ದರು.
ಅಸಂಘಟಿತ ಕಾರ್ಮಿಕರನ್ನು ಗುರುತಿಸುವ ಕೆಲಸ ಸರ್ಕಾರ ಮಾಡಿದೆ.ಕಾರ್ಮಿಕರಿಗೆ ಸರ್ಕಾರದಿಂದಲೇ ತರಬೇತಿ ನೀಡಿ ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ. ಒಳ್ಳೆಯ ತರಬೇತಿ ಪಡೆದ ಕಾರ್ಮಿಕರಿಗೆ ಸರಕಾರದಡಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವ