Advertisement

ಸರ್ಕಾರಿ ಕಾಲೇಜು ಕಿತ್ಕೊಂಡ ಸಿಎಂ

11:08 AM Jun 18, 2019 | Team Udayavani |

ಚಿತ್ರದುರ್ಗ: ಎಚ್.ಡಿ. ಕುಮಾರಸ್ವಾಮಿಯವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ. ಇದು ಜಿಲ್ಲೆಯ ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

Advertisement

ಎಂತಹ ವಿಚಿತ್ರ ನೋಡಿ. ಆಗ-ಈಗ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ. ಕಾಲೇಜು ಆರಂಭವಾದಾಗ ಹಿಂದುಳಿದ ಸಮುದಾಯದವರು ಸೇರಿದಂತೆ ಜವನಗೊಂಡಹಳ್ಳಿ ಹಾಗೂ ಸುತ್ತಮುತ್ತಲಿನ ಜನರು ಖುಷಿ ಪಟ್ಟಿದ್ದರು. ಆದರೆ 12 ವರ್ಷಗಳ ಬಳಿಕ ಸ್ವತಃ ತಾವೇ ಮಂಜೂರು ಮಾಡಿದ್ದ ಸರ್ಕಾರಿ ಕಾಲೇಜನ್ನು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ ಎನ್ನುವ ನೆಪವೊಡ್ಡಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಸ್ಥಳಾಂತರ ಮಾಡಿರುವುದು ಆಕ್ರೋಶ ಮಡುಗಟ್ಟುವಂತೆ ಮಾಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿಯಿಂದ ಶಿರಾ ಘಟಕವನ್ನು ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ. ಈಗ ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿದ್ಯಾರ್ಥಿಗಳ ಕನಸು ಭಗ್ನ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಂದು ಕೈಯಲ್ಲಿ ಕೊಟ್ಟು ಮತ್ತೂಂದು ಕೈಯಿಂದ ಕಿತ್ತು ಕೊಳ್ಳುವ ಮೂಲಕ ಉನ್ನತ ಶಿಕ್ಷಣ ಕಲಿಯಬೇಕೆಂಬ ಹಿಂದುಳಿದ ವರ್ಗಗಳು, ಎಸ್ಸಿ-ಎಸ್ಟಿ ಸಮುದಾಯಗಳ ವಿದ್ಯಾರ್ಥಿಗಳ ಕನಸನ್ನು ಭಗ್ನಗೊಳಿಸಿದ್ದಾರೆ. ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ 60 ಕಿಮೀ, ತಾಲೂಕು ಕೇಂದ್ರದಿಂದ 20 ಕಿಮೀ ದೂರದಲ್ಲಿರುವ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರ ಸ್ಥಾನ. ರಾಷ್ಟ್ರೀಯ ಹೆದ್ದಾರಿ-4 ಈ ಗ್ರಾಮದಲ್ಲಿ ಹಾದು ಹೋಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಇಂತಹ ಪ್ರದೇಶಕ್ಕೆ ಪದವಿ ಕಾಲೇಜಿನ ಅಗತ್ಯ ಕಂಡು ಬಂದಿದ್ದರಿಂದ ಅಂದು ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದ ಡಿ. ಮಂಜುನಾಥ್‌, ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಒತ್ತಡ ಹೇರಿ 2007-08ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಕಾರಣರಾಗಿದ್ದರು.

ಹಿರಿಯೂರು ತಾಲೂಕಿನ ಗಡಿ ಭಾಗದ ಜವನಗೊಂಡನಹಳ್ಳಿ, ಓಬಳಾಪುರ, ಓಣಿಹಟ್ಟಿ, ಗಾಯತ್ರಿಪುರ, ಆನೆಸಿದ್ರಿ, ಕಾಟನಾಯಕನಹಳ್ಳಿ, ಕರಿಯಾಲ, ಕೋಲಾಟದಹಟ್ಟಿ, ಮೂರುಮನೆಹಟ್ಟಿ, ಜೂಲಯ್ಯನಹಟ್ಟಿ ಸೇರಿದಂತೆ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಐದಾರು ಕಿಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ.

ಜಿಲ್ಲೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಿದ್ದು, ಪೋಷಕರು ಮಕ್ಕಳನ್ನು ಹೊರಗಡೆ ಓದಿಸಲು ಹಿಂಜರಿಯುತ್ತಿದ್ದಾರೆ. ಅಂಥದ್ದರಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಪೋಷಕರ ಮನವೊಲಿಸಿ ಜವನಗೊಂಡನಹಳ್ಳಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಈಗ ಕಾಲೇಜು ಸ್ಥಳಾಂತರಗೊಂಡಿರುವುದರಿಂದ ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲ ಕಮರುತ್ತಿದೆ.

Advertisement

ಕಾಲೇಜು ಸ್ಥಳಾಂತರ ಮಾಡದಂತೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಥಳಾಂತರ ಆದೇಶವನ್ನು ಸರ್ಕಾರ ಹಿಂಪಡೆಯಲು ಮನಸ್ಸು ಮಾಡಬೇಕಿದೆ.

ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡಿರುವುದು ಸರ್ಕಾರದ ತೀರ್ಮಾನ. ಹತ್ತು ವರ್ಷಗಳಿಂದ ದಾಖಲಾತಿ ಕಡಿಮೆ ಇತ್ತು. ಹೀಗಾಗಿ ಆ ಭಾಗದ ಸುತ್ತ ಮುತ್ತಲಿನ ಹಳ್ಳಿಗಳ ಮಕ್ಕಳು ಪದವಿ ವ್ಯಾಸಂಗಕ್ಕೆ ಶಿರಾ ಅಥವಾ ಹಿರಿಯೂರಿಗೆ ಹೋಗುತ್ತಿದ್ದಾರೆ. ಜವನಗೊಂಡನಹಳ್ಳಿಯಲ್ಲೇ ಓದುವಂತೆ ಅವರ ಮನವೊಲಿಕೆ ಮಾಡಬಹುದಿತ್ತು. ಅಲ್ಲೊಂದು ಸ್ನಾತಕೋತ್ತರ ಕೇಂದ್ರ ಆರಂಭಿಸಿ ಬೇರೆ ಕಡೆ ಇಲ್ಲದ ಕೋರ್ಸ್‌ ಗಳನ್ನು ನೀಡಿದ್ದರೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವೂ ಹೆಚ್ಚುತ್ತಿತ್ತು.•ಕೆ. ಪ್ರಸಾದ್‌, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ.

2007-08ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾದಾಗ ಮೊದಲ ವರ್ಷ ಬಿಎ ಪದವಿಗೆ 34 ಹಾಗೂ ಬಿಬಿಎಂಗೆ 22 ವಿದ್ಯಾರ್ಥಿಗಳಿದ್ದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಏರುಮುಖದಲ್ಲಿ ಸಾಗಿತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 16 ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಪ್ರವೇಶಕ್ಕೆ ಕಾಲಾವಕಾಶ ಇರುವುದರಿಂದ ಪ್ರವೇಶ ಸಂಖ್ಯೆ 50 ಮೀರಲಿದೆ ಎನ್ನುವ ವಿಶ್ವಾಸವನ್ನು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹೊಂದಿದ್ದಾರೆ. 9.36 ವಿಶಾಲವಾದ ಜಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಸಜ್ಜಿತವಾದ ಸ್ವಂತ ಕಟ್ಟಡವಿದೆ. ಗ್ರಂಥಾಲಯ, ಕ್ರೀಡಾಂಗಣ ಸೇರಿದಂತೆ ಅಗತ್ಯ ಸೌಲಭ್ಯ ಇದ್ದು, ಉಪನ್ಯಾಸಕರ ಕೊರತೆ ಇಲ್ಲ. ವಾಸ್ತವ ಹೀಗಿದ್ದರೂ ಸರ್ಕಾರ ಕಾಲೇಜು ಸ್ಥಳಾಂತರಕ್ಕೆ ಏಕೆ ನಿರ್ಧಾರ ಕೈಗೊಂಡಿತು ಎಂಬುದು ಯಕ್ಷ ಪ್ರಶ್ನೆ.
•ಹರಿಯಬ್ಬೆ ಹೆಂಜಾರಪ್ಪ
Advertisement

Udayavani is now on Telegram. Click here to join our channel and stay updated with the latest news.

Next