Advertisement

ಸರಕಾರಿ ಕಾಲೇಜುಗಳಲ್ಲಿ ಈ ವರ್ಷದಿಂದಲೇ ಸಂಜೆ ಕಾಲೇಜು

12:02 AM Sep 03, 2021 | Team Udayavani |

ಬೆಂಗಳೂರು: ಉದ್ಯೋಗದ ಜತೆಗೆ ಪದವಿ ಶಿಕ್ಷಣ ಮಾಡಲು ಇಚ್ಛಿಸುವವರ ಅನುಕೂಲಕ್ಕಾಗಿ ರಾಜ್ಯ ಸರಕಾರ ಪ್ರಸಕ್ತ ಸಾಲಿನಿಂದಲೇ 11 ಮಹಾನಗರಗಳಲ್ಲಿ ಸರಕಾರಿ ಸಂಜೆ ಕಾಲೇಜುಗಳನ್ನು ಆರಂಭಿಸಲಿದೆ.

Advertisement

ಸಂಧ್ಯಾ ಶಕ್ತಿ ಯೋಜನೆಯಡಿಯಲ್ಲಿ  ಬೆಂಗಳೂರು, ಮಂಗಳೂರು, ಬೆಳಗಾವಿ, ತುಮಕೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ, ವಿಜಯಪುರ ಕಲಬುರಗಿ ಹಾಗೂ ಬಳ್ಳಾರಿಯಲ್ಲಿ ಈ ವರ್ಷವೇ ಸಂಜೆ ಕಾಲೇಜು ಆರಂಭ ಮಾಡಲಿದೆ.

ರಾಜ್ಯದಲ್ಲಿ ಈವರೆಗೂ ಅನುದಾ ನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಮಾತ್ರವೇ ಸಂಜೆ ಕಾಲೇಜು ನಡೆಸುತ್ತಿದ್ದವು. ಈಗ  11 ಮಹಾನಗರಗಳಲ್ಲಿ 11 ಸರಕಾರಿ ಕಾಲೇಜುಗಳಲ್ಲಿ ಸಂಜೆ ಕಾಲೇಜು ಆರಂಭಕ್ಕೆ ಇಲಾಖೆ ಒಪ್ಪಿಗೆ ನೀಡಿದೆ. ಜತೆಗೆ ಪ್ರತ್ಯೇಕ ಪ್ರಾಂಶುಪಾಲರು, 7 ಬೋಧಕ ಸಿಬಂದಿ,  ಆಡಳಿತಾತ್ಮಕ ಕಾರ್ಯಕ್ಕಾಗಿ ಇಬ್ಬರು ಸಿಬಂದಿ ಹಾಗೂ ಮೂವರು ಬೋಧಕೇತರ ಸಿಬಂದಿ ಸೇರಿ 13 ಮಂದಿಯನ್ನು  ನಿಯೋಜನೆ ಮಾಡಲಿದೆ. ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಪ್ರಾಧ್ಯಾಪಕರೇ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಇಲಾಖೆಯ ಉನ್ನತ ಮೂಲ ಉದಯವಾಣಿಗೆ ಖಚಿತಪಡಿಸಿದೆ.

ಯಾವ್ಯಾವ ಕೋರ್ಸ್‌ಗಳು :

ಆಯಾ  ಕಾಲೇಜಿನ ಮೂಲ ಸೌಕರ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುವ ಹಾಗೂ ಉದ್ಯೋಗಾವಕಾಶಕ್ಕೆ ಅನುಕೂಲ ವಾಗುವ ಕೋರ್ಸ್‌ಗಳನ್ನೇ ಸಂಜೆ ಕಾಲೇಜಿನಲ್ಲಿ ಆರಂಭಿಸಲಾಗುತ್ತದೆ. ಬಿ.ಕಾಂ. ಬಿಸಿಎ, ಬಿಎಸ್ಸಿ ಮೊದಲಾದ ಕೋರ್ಸ್‌ಗೆ ಆದ್ಯತೆ ಹೆಚ್ಚಿರಲಿದೆ. ಹಾಗೆಯೇ ಸ್ಥಳೀಯವಾಗಿ ವಿದ್ಯಾರ್ಥಿ ಗಳ ಬೇಡಿಕೆಗೆ ಅನುಗುಣವಾಗಿ ಸಂಪನ್ಮೂಲದ ಲಭ್ಯತೆ ಆಧಾರದಲ್ಲಿ ಕೆಲವು ಕೋರ್ಸ್‌ಗಳನ್ನು ತೆರೆಯ ಲಿದ್ದೇವೆ ಎಂದು ವಿವರ ನೀಡಿದರು.

Advertisement

ಎಲ್ಲೆಲ್ಲಿ ಸಂಜೆ ಕಾಲೇಜು :

ಬೆಂಗಳೂರಿನ ಸರಕಾರಿ ಆರ್‌.ಸಿ. ಕಾಲೇಜು, ಬೆಳಗಾವಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ತುಮಕೂರಿನ ಬಿ.ಎಚ್‌.ರಸ್ತೆಯಲ್ಲಿರುವ ಸ. ಪ್ರ. ದರ್ಜೆ ಕಾಲೇಜು, ಮೈಸೂರಿನ ಕುವೆಂಪು ನಗರದ ಸ. ಪದವಿ ಕಾಲೇಜು,  ಶಿವಮೊಗ್ಗ ನಗರದ ಸ. ಪದವಿ ಕಾಲೇಜು, ದಾವರಣಗೆರೆಯಲ್ಲಿ ಎಂಸಿಸಿ ಬ್ಲಾಕ್‌ನಲ್ಲಿರುವ ಸರಕಾರಿ ಕಾಲೇಜು, ಮಂಗಳೂರಿನಲ್ಲಿ ರಥಬೀದಿಯಲ್ಲಿರುವ ಸರಕಾರಿ ಪದವಿ ಕಾಲೇಜು, ಧಾರವಾಡದ ಕುಮಾರೇಶ್ವರ ನಗರದಲ್ಲಿರುವ ಸರಕಾರಿ ಪದವಿ ಕಾಲೇಜು, ವಿಜಯಪುರದ ನವಬಾಗ್‌ ಖಾಜಾ ಕಾಲನಿಯ ಸರಕಾರಿ ಪದವಿ ಕಾಲೇಜು, ಕಲಬುರಗಿಯ ಸೇಡಂ ರಸ್ತೆಯ ಸರಕಾರಿ ಕಾಲೇಜು ಹಾಗೂ ಬಳ್ಳಾರಿಯ  ಸರಳಾದೇವಿ ಸತೀಶ್ಚಂದ್ರ ಅಗರವಾಲ್‌ ಸ. ಪದವಿ ಕಾಲೇಜಿನಲ್ಲಿ ಸಂಜೆ ಕಾಲೇಜು ತೆರೆಯಲು ಸರಕಾರ ನಿರ್ಧರಿಸಿದೆ.

ಆಯಾ ವಿಶ್ವವಿದ್ಯಾಲಯಗಳು ಅರ್ಹ ಕಾಲೇಜುಗಳಿಗೆ ಮಾನ್ಯತೆ ನೀಡಿವೆ. ಮಾನ್ಯತೆ ಸಿಕ್ಕ ಬಳಿಕ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಜೆ ಕಾಲೇಜು ಆರಂಭಿಸಲು ಅನುಮತಿ ಸಿಕ್ಕಿದೆ. ಈ ಸಂಬಂಧ ಶೀಘ್ರವೇ ಅಧಿಸೂಚನೆಯನ್ನು ಹೊರಡಿಸಲಾಗುವುದು.ಪ್ರೊ| ಎಸ್‌.ಮಲ್ಲೇಶ್ವರಪ್ಪ,  ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next