ಹುಮನಾಬಾದ: 6 ದಶಕಗಳ ಹಿಂದೆ ನಿರ್ಮಿಸಲಾದ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿತ್ಯ ಆತಂಕದಲ್ಲೇ ಪಾಠ ಆಲಿಸುವ ಪರಿಸ್ಥಿತಿ ನಿರ್ಮಣವಾಗಿದೆ.
1954ರಲ್ಲಿ ನಿರ್ಮಿಸಲಾದ ಈ ಕಾಲೇಜು ಕಟ್ಟಡ ಈ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ರಾಜಶೇಖರ ಪಾಟೀಲ ಸೇರಿದಂತೆ ಈಗ ಉನ್ನತ ಸ್ಥಾನದಲ್ಲಿರುವ ಹಲವು ಗಣ್ಯರಿಗೆ ಅಕ್ಷರಜ್ಞಾನ ನೀಡಿದ ಖ್ಯಾತಿ ಹೊಂದಿದೆ. ಕಟ್ಟಡ ಬಹುತೇಕ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಎರಡು ದಶಕದಿಂದ ಕಟ್ಟಡದ ಸ್ಥಿತಿ ದಯನೀಯವಾಗಿದೆ.
ಮಳೆಗಾಲ ಬಂತೆಂದರೆ ಸಾಕು ಮಕ್ಕಳು ಜಲಾವೃತಗೊಂಡ ಕೊಠಡಿಯಲ್ಲಿ ಕುಳಿತು ಪಾಠ ಕೇಳುವಾಗ ಮೈಮೇಲೆ ಬಿದ್ದರೇ ಹೇಗೆ ಎಂಬ ಆತಂಕದಿಂದ ಛಾವಣಿ ದಿಟ್ಟಿಸುತ್ತಲೇ ಕುಳಿತಿರುತ್ತಾರೆ. ಎರಡು ದಶಕದಿಂದ ದುರುಸ್ತಿ, ನೂತನ ಕಟ್ಟಡ ಇತ್ಯಾದಿ ಸಂಬಂಧ ಸರ್ಕಾರಕ್ಕೆ ಬರೆಯಲಾದ ಪತ್ರಗಳ ಕಡತಗಳು ಧೂಳು ತಿನ್ನುತ್ತಿವೆ. ಆದರೇ ದುರುಸ್ತಿ ಮಾತ್ರ ಆಗಿಲ್ಲ. ಸರ್ಕಾರ ರಾಜ್ಯದ ಜನತೆಗೆ ಸರ್ಕಾರ ವಿವಿಧ ಭಾಗ್ಯಗಳ ಹೆಸರಲ್ಲಿ ಅನುದಾನ ಬಿಡುಗಡೆಗೊಳಿಸಿ ಸೌಲಭ್ಯ ಕಲ್ಪಿಸುತ್ತಿದೆ. ಆದರೇ ಈ ಕಾಲೇಜಿಗೆ ಹೊಸ ಕಟ್ಟಡ ದೂರದ ಮಾತು, ಕನಿಷ್ಟ ದುರಸ್ತಿ ಭಾಗ್ಯವೂ ಸಿಕ್ಕಿಲ್ಲ.
ಪದವಿಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಸದ್ಯ 101ಉರ್ದು ವಿದ್ಯಾರ್ಥಿಗಳು. 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಉರ್ದು ವಿಭಾಗದವರಿಗೆ 3, ಕನ್ನಡ ವಿಭಾಗ-3 ಸೇರಿ 6 ವರ್ಗಕೋಣೆ, 1ಪ್ರಾಚಾರ್ಯರ ಕೋಣೆ, 1ಸಿಬ್ಬಂದಿ ವರ್ಗದ ಕೋಣೆ ಅಡುಗೆ ಸೇರಿ ಕನಿಷ್ಟ 9 ಕೋಣೆಗಳ ಅಗತ್ಯವಿದೆ. ಬೇಡಿಕೆಯನ್ನು ಗಭೀರ ಪರಿಗಣಿಸಿದ ಸರ್ಕಾರ ಉರ್ದು ವಿಭಾಗಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2014ರಲ್ಲಿ 55ಲಕ್ಷ ರೂ. ಬಿಡುಗಡೆ ಮಾಡಿದೆ. ನಿರ್ಮಾಣ ಕಾಮಗಾರಿ ಜವಬ್ದಾರಿ ಹೊತ್ತ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ಬುನಾದಿ ಹಂತಕ್ಕೆ ನಿಲ್ಲಿಸಿದ್ದರಿಂದ ಸಮಸ್ಯೆ
ಸಮಸ್ಯೆಯಾಗಿಯೇ ಉಳಿದಿದೆ.
ನೂರಾರು ಗಣ್ಯರು ಮಾತ್ರವಲ್ಲದೇ ವಿಶೇಷವಾಗಿ ಈ ಕ್ಷೇತ್ರದ ಶಾಸಕರಿಗೆ ಅಕ್ಷರಜ್ಞಾನ ನೀಡಿರುವ ಶಾಲೆಯೂ ಇದಾಗಿರುವುದರಿಂದ ಶಿಥಿಲಾವಸ್ಥೆ ತಲುಪಿರುವ ಈ ಕಟ್ಟಡ ಅಭಿವೃದ್ಧಿಗೆ ಈ ಕ್ಷೇತ್ರದ ಶಾಸಕರು ಹಾಗೂ ಸಚಿವ ರಾಜಶೇಖರ ಪಾಟೀಲ ಅವರು ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಕಾಲೇಜು ಅಭಿವೃದ್ಧಿಪಡಿಸುವ ಮೂಲಕ ಅಕ್ಷರಜ್ಞಾನ ನೀಡಿದ ಶಾಲೆ ಋಣ ತೀರಿಸಬೇಕು ಎನ್ನುವುದು ಸಾರ್ವಜನಿಕರು ಮತ್ತು ಪಾಲಕರ ಒತ್ತಾಸೆ. ಪಾಲಕರ, ವಿದ್ಯಾರ್ಥಿಗಳ ಬೇಡಿಕೆಗೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಷ್ಟರ ಸ್ಪಂದಿಸುತ್ತಾರೋ ಕಾದು ನೋಡಬೇಕಿ¨
ಕಾಲೇಜಿನ ಕಟ್ಟಡದ ಸ್ಥಿತಿಗತಿ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಯನ್ನು ಪತ್ರದ ಮೂಲಕ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಬೇಸಿಗೆ, ಚಳಿಗಾಲದಲ್ಲಿ ಹೇಗೋ ಸಹಿಸಿಕೊಂಡು ಬರುತ್ತಿದ್ದೇವೆ. ಆದರೆ ಮಳೆಗಾದಲ್ಲಿ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕೇಳಬೇಕು. ವಿದ್ಯಾರ್ಥಿಗಳಿಗೆ ಅಪಘಾತವಾದರೆ ಯಾರು ಹೊಣೆ. ಮೇಲಧಿಕಾರಿಗಳು ಸಕಾರಾತ್ಮಕ ಸ್ಪಂದಿಸದ ಕಾರಣ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ.
ಕಾಶಿನಾಥ ಕೂಡ್ಲಿ , ಉಪ ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು
ವಿಷಯ ಗಮನಕ್ಕಿಲ್ಲ. ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಆಲಿಸುವುದು ಆತಂಕಕಾರಿ ಬೆಳವಣಿಗೆ. ಕಟ್ಟಡ ಕಾಮಗಾರಿ ಯಾವ ಕಾರಣಕ್ಕಾಗಿ ಸ್ಥಗಿತಗೊಂಡಿದೆ ಎನ್ನುವ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ. ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದರೂ ಬಗೆಹರಿಸಿ, ಸಾಧ್ಯವಾದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು.
ಡಾ| ಎಚ್.ಆರ್. ಮಹಾದೇವ, ಜಿಲ್ಲಾಧಿಕಾರಿಗಳು
ಶಶಿಕಾಂತ ಕೆ.ಭಗೋಜಿ