ಹಾನಗಲ್ಲ: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವ ಸಂದರ್ಭಗಳಲ್ಲಿ ಹಾನಗಲ್ಲಿನ ಸರ್ಕಾರಿ ಪ.ಪೂ ಕಾಲೇಜು ಪರೀಕ್ಷೆ ಭಯ ಮುಕ್ತಗೊಳಿಸಿ, ನಕಲು ತೊಡೆದು ಹಾಕಿ, ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಬದುಕಿನ ಶಿಕ್ಷಣ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ.
ಹೌದು, ಈ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಶಿಸ್ತು, ಶಾಂತಿ, ಧ್ಯಾನ ಅಧ್ಯಯನಕ್ಕೆ ಪ್ರೇರಣೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ. ಯೋಗ, ಧ್ಯಾನ, ಕಲೆ, ಸಂಸ್ಕೃತಿ, ಕೃಷಿ, ಸಾಹಿತ್ಯ ವಿಚಾರ ಮಂಥನ ಇಲ್ಲಿನ ವಿಶೇಷಗಳು. ಆರೋಗ್ಯ, ಅಪರಾಧರಹಿತ ಬದುಕಿಗೆ ಬೇಕಾಗುವ ವಿಶೇಷ ತರಬೇತಿಗಳು ಇಲ್ಲಿ ನಡೆಯುತ್ತವೆ. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಪ್ರತಿ ದಿನ ವರ್ಗಗಳ ಆರಂಭಕ್ಕೂ ಮೊದಲು 15 ನಿಮಿಷಗಳ ಕಾಲ ಧ್ಯಾನಸ್ಥರಾಗುತ್ತಾರೆ. ಇವರಿಗೆ ಯಾವುದೇ ಸೂಚನೆಗಳ ಅಗತ್ಯ ಇರುವುದಿಲ್ಲ.
ಸದ್ದು ಗದ್ದಲವಿಲ್ಲ: ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭವಾದ ಧ್ಯಾನದ ಪ್ರಕ್ರಿಯೆ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಉತ್ತಮ ಪರಿಣಾಮ ಬೀರಿದೆ. ಸದ್ದು ಗದ್ದಲವಿಲ್ಲದೇ ವಿದ್ಯಾರ್ಥಿಗಳು ಓದಿನತ್ತ ಲಕ್ಷ್ಯ ವಹಿಸುತ್ತಾರೆ. ಶಾಲಾ ಪಾಠದೊಂದಿಗೆ ಬದುಕಿನ ಶಾಲೆಯಲ್ಲಿ ಪಾಸಾಗಲು ಬೇಕಾಗುವ ಮಾರ್ಗದರ್ಶನ ಕೂಡ ಇಲ್ಲಿ ನೀಡಲಾಗುತ್ತಿದೆ. ಕನ್ನಡ ಹಬ್ಬ, ಕಾನೂನು ತಿಳಿವಳಿಕೆ, ಕೃಷಿ ವಿಚಾರ ಸಂಕಿರಣ, ಸಾಹಿತ್ಯ ವಿಚಾರ ಸಂಕಿರಣಗಳು, ವೈದ್ಯಕೀಯ ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಚಟುವಟಿಕೆಗಳು, ಹಿರಿಯ ಸಾಹಿತಿಗಳೊಂದಿಗೆ ಸಂವಾದ, ಹೀಗೆ ಹಲವು ವೈಚಾರಿಕ ಜ್ಞಾನಾರ್ಥ ಸಂಗತಿಗಳನ್ನು ವಿದ್ಯಾಥಿಥಗಳಿಗೆ ನೀಡಲಾಗುತ್ತದೆ.
ವರ್ಲಿ ಚಿತ್ರ: ಸ್ವಚ್ಛತೆ ಇಲ್ಲಿನ ಮೊದಲ ಆದ್ಯತೆ. ಇಡೀ ವರಾಂಡ ಶುಚಿಯಾಗಿಟ್ಟುಕೊಂಡಿರುವುದು ಮಾತ್ರವಲ್ಲ, ಮಾರ್ಗದರ್ಶಕ ಬರಹಗಳು, ಗಮನ ಸೆಳೆಯುವ ಕಲಾತ್ಮಕ ವರ್ಲಿ ಚಿತ್ರಗಳ ಮೂಲಕ ಆವರಣ ಪ್ರವೇಶಿಸುತ್ತಿದ್ದಂತೆ ಹೃದಯವನ್ನು ಜಾಗೃತಗೊಳಿಸುತ್ತವೆ. ಕಾಲೇಜಿನ ವರಾಂಡದ ಒಳ ಭಾಗದ ಗೋಡೆಗಳು ಹಲವು ಬರಹಗಳು, ವರ್ಲಿ ಕಲೆಯ ಚಿತ್ರಗಳನ್ನು ಹೊತ್ತು ನಿಂತಿವೆ. ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರ ವಿಶೇಷ ಕಾಳಜಿಯಿಂದಾಗಿ ಇಡೀ ಕಾಲೇಜು ವರಾಂಡ ಸ್ವತ್ಛ-ಶುದ್ಧ ಶಾಂತ ವಾತಾವರಣಕ್ಕೆ ಸಾಕ್ಷಿಯಾಗಿದೆ. ಪ.ಪೂ ಕಾಲೇಜು ಹಾವೇರಿ ಜಿಲ್ಲಾ ಉಪನಿರ್ದೇಶಕ ಎಸ್.ಸಿ. ಪೀರಜಾದೆ, ಕಾಲೇಜಿನ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ಮಾರುತಿ ಶಿಡ್ಲಾಪುರ, ಉಪನ್ಯಾಸಕರಾದ ಎಸ್.
ಎಸ್.ನಿಸ್ಸೀಮಗೌಡರ, ಎಚ್.ಎಸ್. ಬಾರ್ಕಿ, ಕೆ.ಈಶ್ವರ, ಸುಮಂಗಲಾ ನಾಯನೇಗಲಿ, ರೂಪಾ ಹಿರೇಮಠ, ಎಸ್.ವಿ. ರಶ್ಮಿ, ಗೀತಾ ನಾಯ್ಕ, ವೀಣಾ ದೇವರಗುಡಿ, ಆಯಿಷಾ, ಬಸವರಾಜ ಹರಿಜನ ಅವರ ಶ್ರಮ, ಬೋಧಕೇತರ ಸಿಬ್ಬಂದಿ ಮಂಜು ಸುಣಗಾರ ಎಲ್ಲರ ಒಟ್ಟು ಪರಿಶ್ರಮ ಇಷ್ಟೆಲ್ಲ ಬದಲಾವಣೆ ಮಾಡಿದೆ.
ಮಕ್ಕಳಿಗೆ ನಾವು ಏನನ್ನು ಕೊಡುತ್ತೇವೆಯೋ ಅದನ್ನು ಪ್ರಾಂಜಲವಾಗಿ ಸ್ವೀಕರಿಸುವ ಮನಸ್ಸು ಅವರದು. ಹೀಗಾಗಿ ಒಳ್ಳೆಯದನ್ನು ನೀಡುವ ಉದ್ದೇಶ ನಮ್ಮದು. ಅದು ಸಫಲವಾಗಿದೆ. ಪರೀಕ್ಷೆ, ಅಂಕ, ಆಟ-ಪಾಠಗಳ ಜೊತೆಗೆ ಸಾಂಸ್ಕೃತಿಕ ವಾತಾವರಣ ನಿರ್ಮಿಸಿ ಕೊಟ್ಟಿದ್ದೇವೆಂಬ ಸಮಾಧಾನವಿದೆ.
–ಪ್ರೊ| ಎಚ್.ಎಸ್. ಬಾರ್ಕಿ, ಉಪನ್ಯಾಸಕರು
-ರವಿ ಲಕ್ಷ್ಮೇಶ್ವರ