ನವದೆಹಲಿ:ಆಧಾರ್ ಸಂಬಂಧಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಸ್ವಾಗತಿಸುತ್ತದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿ ತೀರ್ಪು ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೇಟ್ಲಿ, ಆಧಾರ್ ಯೋಜನೆಯನ್ನು ವಿರೋಧಿಸುತ್ತಿದ್ದವರು ಯಾವತ್ತೂ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳದೆ ಟೀಕಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು. ಮುಖ್ಯವಾಹಿನಿ ಬದಲಾವಣೆಯನ್ನು ಸ್ವೀಕರಿಸಿದೆ. ಆದರೆ ಯಾರು ಆಧಾರ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿಲ್ಲವೋ ಅವರು ಮಾತ್ರ ವಿರೋಧಿಸುತ್ತಿದ್ದರು ಎಂದರು.
ಏತನ್ಮಧ್ಯೆ ಆಧಾರ್ ಕುರಿತಂತೆ ಕಾಂಗ್ರೆಸ್ ಪಕ್ಷದ ಟೀಕೆಯನ್ನು ಜೇಟ್ಲಿ ಅಲ್ಲಗಳೆದಿದ್ದು, ದೇಶದ ಅತ್ಯಂತ ಹಳೇಯ ಪಕ್ಷವೇ ಆಧಾರ್ ಯೋಜನೆಯನ್ನು ದೇಶಕ್ಕೆ ಪರಿಚಯಿಸಿತ್ತು. ಆದರೆ ಅದರಿಂದ ಏನು ಮಾಡಬಹುದು ಎಂಬುದನ್ನು ತಿಳಿದುಕೊಂಡಿಲ್ಲ ಎಂದು ಹೇಳಿದರು.
ಆಧಾರ್ ನಿಂದ 90 ಸಾವಿರ ಕೋಟಿ ಲಾಭ:
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಆಧಾರ್ ನಿಂದಾದ ಲಾಭದ ಬಗ್ಗೆ ಜೇಟ್ಲಿ ಈ ಸಂದರ್ಭದಲ್ಲಿ ವಿವರಿಸಿದ್ದು, ಆಧಾರ್ ನಿಂದಾಗಿ ಪ್ರತಿವರ್ಷ 90 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಆಧಾರ್ ಯೋಜನೆ ಉತ್ತಮ ಆಡಳಿತಕ್ಕೊಂದು ಉದಾಹರಣೆಯಾಗಿದೆ. ಅಷ್ಟೇ ಅಲ್ಲ ಆಧಾರ್ ನಿಂದ ದೇಶದ ಬಡ ಜನರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದರು.