Advertisement
ರಾಜ್ಯದಲ್ಲಿ ಒಟ್ಟು 2,326 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳಿಗೆ ಅನುದಾನಕ್ಕೊಳಪಟ್ಟಂದಿನಿಂದ ಹಿರಿಯ ಪ್ರಾಥಮಿಕ ಶಾಲೆಗಳಿಗೆ 12 ಸಾವಿರ ರೂ. ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ 5 ಸಾವಿರ ರೂ. ನಿರ್ವಹಣ ವೆಚ್ಚವನ್ನು ಸರಕಾರ ನೀಡುತ್ತಿತ್ತು. ಆದರೆ, ಮೂರು ವರ್ಷಗಳಿಂದ ಈ ನಿರ್ವಹಣ ವೆಚ್ಚ ನೀಡುವುದನ್ನು ನಿಲ್ಲಿಸಲಾಗಿದೆ. ಅಲ್ಲದೆ, ಆಡಳಿತ ಮಂಡಳಿಗೆ ನೀಡುತ್ತಿದ್ದ ಒಟ್ಟು ಸಿಬಂದಿ ಒಟ್ಟು ವೇತನದ ಶೇ. 5ರಷ್ಟು ಹಣವನ್ನು ಕೂಡ ಎಂಟು ವರ್ಷಗಳಿಂದ ನಿಲ್ಲಿಸಲಾಗಿದೆ.
ಶಾಲೆಯ ಪೀಠೊಪಕರಣಗಳ ದುರಸ್ತಿ, ಸುಣ್ಣ ಬಳಿಯುವುದು, ಪೈಂಟಿಂಗ್, ಬೆಂಚ್, ಡೆಸ್ಕ್, ತರಗತಿ ಅಗತ್ಯಗಳಿಗೆ ಬೇಕಾದ ಇತರ ವಸ್ತುಗಳ ಖರೀದಿ ಸಹಿತ ಶಾಲೆಯ ಸಣ್ಣಪುಟ್ಟ ಆವಶ್ಯಕತೆಗಳನ್ನು ಪೂರೈಸಲು ಈ ನಿರ್ವಹಣ ವೆಚ್ಚವನ್ನು ಅನುದಾನಿತ ಶಾಲೆಗಳಿಗೆ ನೀಡಲಾಗುತ್ತಿತ್ತು. ಆದರೆ ಇದೀಗ ಸರಕಾರ ಅನುದಾನಿತ ಶಾಲೆಗಳಿಗೆ ನಿರ್ವಹಣ ವೆಚ್ಚವನ್ನು ನೀಡದೇ ಇರುವುದರಿಂದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ತಮ್ಮ ಕೈಯಿಂದ ಹಣವನ್ನು ಭರಿಸಿ ಶಾಲೆಗೆ ಬೇಕಾದ ಅವಶ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಆಡಳಿತ ಮಂಡಳಿ ಅಥವಾ ಸ್ಥಳೀಯ ದಾನಿಗಳು ಭರಸುತ್ತಿದ್ದಾರೆ. ಸಮವಸ್ತ್ರ, ಶೂ ಇಲ್ಲ
ಸರಕಾರಿ ಶಾಲೆಗಳ ನಿಯಮಗಳೇ ಅನುದಾನಿತ ಶಾಲೆಗಳಿಗೂ ಅನ್ವಯ ವಾಗುತ್ತದೆ. ಆದರೆ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇರುವ ಸಮವಸ್ತ್ರ, ಶೂ ಭಾಗ್ಯ, ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯ ಅನುದಾನಿತ ಶಾಲೆಗಳ ಮಕ್ಕಳಿಗಿಲ್ಲ. ಸರಕಾರದ ಮೇಲೆ ಸತತ ಒತ್ತಡ ಹೇರಿದ ಪರಿಣಾಮ ಮಧ್ಯಾಹ್ನದ ಬಿಸಿಯೂಟ ಮತ್ತು ಉಚಿತ ಪುಸ್ತಕ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಎನ್ನುತ್ತಾರೆ ಅನುದಾನಿತ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಶೆಟ್ಟಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ.
Related Articles
ಅನುದಾನಿತ ಶಾಲೆಗಳಿಗೆ ಸರಕಾರದಿಂದ ಮೂರುವರ್ಷಗಳ ಹಿಂದಿನವರೆಗೂ ನಿರ್ವಹಣ ವೆಚ್ಚ ನೀಡಲಾಗುತ್ತಿತ್ತು ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಹೇಳಿದರೆ, ಇತ್ತ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಸರಕಾರಿ ಶಾಲೆಗಳಿಗೆ ಮಾತ್ರ ಅಂತಹ ಅನುದಾನ ನೀಡಲಾಗುತ್ತದೆ. ಅನುದಾನಿತ ಶಾಲಾ ಶಿಕ್ಷಕರಿಗೆ ಸರಕಾರವೇ ಸಂಬಳ ನೀಡುವುದರಿಂದ ಪ್ರತ್ಯೇಕ ನಿರ್ವಹಣ ವೆಚ್ಚವನ್ನು ಈ ಹಿಂದಿನಿಂದಲೇ ನೀಡುತ್ತಿಲ್ಲ ಎಂಬುದು ಅಧಿಕಾರಿಗಳ ಮಾತು. ಆದರೆ, ಸಾಕಷ್ಟು ಬಾರಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಅನುದಾನಿತ ಶಾಲೆಗಳಿಗೆ ಈ ಹಿಂದೆ ಬರುತ್ತಿದ್ದ ನಿರ್ವಹಣ ವೆಚ್ಚವನ್ನು ಮತ್ತೆ ನೀಡಬೇಕು ಎಂಬುದಾಗಿ ಅನುದಾನಿತ ಶಾಲಾ ಶಿಕ್ಷಕರ ಸಂಘದ ಪ್ರಮುಖರು ಮನವಿ ಮಾಡಿದ್ದಾರೆ.
Advertisement
ಸರಕಾರಿ ಶಾಲೆಗೆ ಮಾತ್ರಅನುದಾನಿತ ಶಾಲೆಗಳಿಗೆ ಸರಕಾರದಿಂದ ನೇಮಕವಾದ ಶಿಕ್ಷಕರಿಗೆ ಸರಕಾರ ಸಂಬಳ ನೀಡುತ್ತದೆ. ಅಂತಹ ಶಾಲೆಗಳಿಗೆ ನಿರ್ವಹಣ ವೆಚ್ಚ ನೀಡುವುದಿಲ್ಲ. ಸರಕಾರಿ ಶಾಲೆಗಳಿಗೆ ಮಾತ್ರ ನೀಡುತ್ತದೆ.
- ಪುರುಷೋತ್ತಮ, ಕಾರ್ಯಕ್ರಮಾಧಿಕಾರಿ, ಸರ್ವ ಶಿಕ್ಷಾ ಅಭಿಯಾನ, ಬೆಂಗಳೂರು ರಾಜ್ಯ ಸರಕಾರದಿಂದ ಬಿಡುಗಡೆಯಾಗಿಲ್ಲ
ಅತಿಥಿ ಶಿಕ್ಷಕರಿಗೆ ವೇತನ ರಾಜ್ಯ ಸರಕಾರದಿಂದ ಇನ್ನೂ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಕೂಡಲೇ ಅತಿಥಿ ಶಿಕ್ಷಕರ ಖಾತೆಗೆ ಜಮೆ ಮಾಡಲಾಗುವುದು.
– ವಾಲ್ಟರ್ ಡಿ’ಮೆಲ್ಲೊ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು - ಧನ್ಯಾ ಬಾಳೆಕಜೆ