Advertisement

ತಲಾಖ್‌ ನಿಷೇಧಕ್ಕೆ ಸಂಪುಟ ಅಸ್ತು; ಮೂರು ವರ್ಷ ಜೈಲುಶಿಕ್ಷೆ

06:00 AM Dec 16, 2017 | Team Udayavani |

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್‌ ನಿಷೇಧ ಪ್ರಸ್ತಾಪದ ಕರಡು ವಿಧೇಯಕಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಅದಕ್ಕೆ “ಮುಸ್ಲಿಂ ಮಹಿಳೆಯರ (ಮದುವೆ ಹಕ್ಕಿನ ರಕ್ಷಣೆ )ವಿಧೇಯಕ 2017′ ಎಂದು ಹೆಸರಿಸಲಾಗಿದ್ದು, ಅದನ್ನು ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದೆ.

Advertisement

ಆ.22ರಂದು ಸುಪ್ರೀಂಕೋರ್ಟ್‌ ನೀಡಿದ್ದ ಮಹತ್ವದ ತೀರ್ಪಿನಲ್ಲಿ ತ್ರಿವಳಿ ತಲಾಖ್‌ಗೆ ನಿಷೇಧ ಹೇರಲಾಗಿತ್ತು. ಅದು ಸಂವಿಧಾನದ 14ನೇ ವಿಧಿ ಅಂದರೆ ಸಮಾನತೆಯ ಹಕ್ಕನ್ನು ಉಲ್ಲಂ ಸುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಕರಡು ವಿಧೇಯಕದಲ್ಲಿ ಏನಿದೆ?: ಕರಡು ವಿಧೇಯಕದಲ್ಲಿ ಮುಸ್ಲಿಂ ಮಹಿಳೆಯ ಪತಿ ಮೂರು ಬಾರಿ “ತಲಾಖ್‌’ ಎಂದು ಹೇಳಿದರೆ ಆತನಿಗೆ ಮೂರು ವರ್ಷ ಕಾಲ ದಂಡ ಸಹಿತ ಜೈಲು ಶಿಕ್ಷೆ ವಿಧಿಸಲು ಅವಕಾಶ ಉಂಟು. ಅದನ್ನು ಗುರುತರ ಮತ್ತು ಗುರುತರವಲ್ಲದ ಅಪರಾಧ (ಕಾಗ್ನಿಜಬಲ್‌ ಆ್ಯಂಡ್‌ ನಾನ್‌ ಕಾಗ್ನಿಜಬಲ್‌ ಅಫೆನ್ಸ್‌)ಎಂದು ವಿಭಾಗಿಸಲು ಅವಕಾಶ ಕಲ್ಪಿಸಲಾಗಿದೆ. ಪತ್ನಿಗೆ ಜೀವನಾಂಶ ಕೇಳುವ ಹಕ್ಕು ಕಲ್ಪಿಸಿಕೊಡಲಾಗಿದೆ. ಜತೆಗೆ ಮಕ್ಕಳು ಪ್ರಾಪ್ತ ವಯಸ್ಕರಲ್ಲದೇ ಇದ್ದಲ್ಲಿ ಅವರ ರಕ್ಷಣೆ ಹೊಣೆಯನ್ನು ತಾಯಿಗೆ ವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಲಿಖೀತ, ಮಾತಿನಲ್ಲಿ ಮತ್ತು ಇಲೆಕ್ಟ್ರಾನಿಕ್‌ ಮಾಧ್ಯಮ ಮೂಲಕ ತಲಾಖ್‌ (ತಲಾಖ್‌-ಇ-ಬಿದ್ದತ್‌) ನೀಡುವುದಕ್ಕೆ ನಿಷೇಧ ಹೇರಲಾಗಿದೆ. ತ್ರಿವಳಿ ತಲಾಖ್‌ ನೀಡಿದ ಪತಿಯ ವಿರುದ್ಧ ಪತ್ನಿ ಕೋರ್ಟ್‌ ಮೊರೆ ಹೋಗಬಹುದಾಗಿದ್ದು. ಮಕ್ಕಳು ಹಾಗೂ ತನಗೆ ಪತಿಯಿಂದ ಜೀವನಾಂಶಕ್ಕೆ ಆಗ್ರಹಿಸಬಹುದು.

ವಿಧೇಯಕದ ಪ್ರಮುಖ ಅಂಶಗಳು
– ಕಾನೂನು ಜಾರಿಯಾದಲ್ಲಿ ತ್ರಿವಳಿ ತಲಾಖ್‌ ನಿಷೇಧ
– ತ್ರಿವಳಿ ತಲಾಖ್‌ ನೀಡುವ ಪತಿಗೆ ಮೂರು ವರ್ಷ ಜೈಲು
– ಜೀವನಾಂಶ ಆಗ್ರಹಿಸಿ ಕೋರ್ಟ್‌ ಮೊರೆ ಹೋಗಲು ಪತ್ನಿಗೆ ಅವಕಾಶ
– ಮಕ್ಕಳು ಅಪ್ರಾಪ್ತರಾಗಿದ್ದರೆ ಅವರ ರಕ್ಷಣೆ ಹೊಣೆ ತಾಯಿ ಹೆಗಲಿಗೆ
– ಯಾವುದೇ ಮಾಧ್ಯಮದ ಮೂಲಕ ತಲಾಖ್‌ ಹೇಳಿದರೂ ಅಪರಾಧ

Advertisement

ಲಿಂಗ ಸಮಾನತೆಯನ್ನು ನಾವು ಗೌರವಿಸಬೇಕು. ನಾವು 21ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ತ್ರಿವಳಿ ತಲಾಖ್‌ ನಿಷೇಧಿಸಿ ಕೇಂದ್ರ ಸರ್ಕಾರ ಅನುಮೋದಿಸಿರುವ ಮಸೂದೆಯನ್ನು ನಾವು ಬೆಂಬಲಿಸುತ್ತೇವೆ.
– ಶ್ರೀ ಶ್ರೀ ರವಿಶಂಕರ್‌, ಆಧ್ಯಾತ್ಮ ಗುರು

ತ್ರಿವಳಿ ತಲಾಖ್‌ ಎಂಬುದು ಇಸ್ಲಾಂ ಧರ್ಮದ ಆಂತರಿಕ ವಿಷಯ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. ಇದನ್ನು ನಾವು ಬೆಂಬಲಿಸುವುದಿಲ್ಲ.
– ಅಸಾದುದ್ದೀನ್‌ ಒವೈಸಿ, ಎಂಐಎಂ ಮುಖಂಡ

ಕೇಂದ್ರ ಸಂಪುಟದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಹಿಂದಿನ ಸರ್ಕಾರಗಳಂತೆ ಹಾಲಿ ಸರ್ಕಾರವೂ ಮುಸ್ಲಿಂ ಸಮುದಾಯದ ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಈ ವಿಧೇಯಕ ಅಂಗೀಕಾರಕ್ಕೆ ಎಲ್ಲ ಪಕ್ಷಗಳು ಬೆಂಬಲ ನೀಡಬೇಕು.
– ಶಾಹಿಸ್ತಾ ಅಂಬಾರ್‌, ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next