Advertisement

ಸರಕಾರಿ ಅಂಗನವಾಡಿ ಶಾಲೆಯ ನವೀಕರಣ

09:47 AM Oct 08, 2017 | Team Udayavani |

ಮಹಾನಗರ: ಅಂಗನವಾಡಿ ಮಕ್ಕಳಿಗೆ ಪೂರಕ ವಾತಾವರಣವಿದ್ದರೆ ಕಲಿಕೆಯೂ ಸಾಂಗವಾಗುತ್ತದೆ. ಇದೇ ಉದ್ದೇಶವನ್ನಿಟ್ಟುಕೊಂಡು ಇಎಲ್‌ಸಿ/ ಸಿಎಫ್‌ಎಎಲ್‌ ಸಂಸ್ಥೆಯು ಸರಕಾರಿ ಅಂಗನವಾಡಿ ಶಾಲೆಯೊಂದನ್ನು ನವೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

Advertisement

ಗಾಂಧಿ ಜಯಂತಿ ಅಂಗವಾಗಿ ಅರ್ಲಿ ಲರ್ನಿಂಗ್‌ ಸೆಂಟರ್‌ (ಇಎಲ್‌ಸಿ ಕಿಂಡರ್‌ ಗಾರ್ಟನ್‌) ಮತ್ತು ಸೆಂಟರ್‌ ಫಾರ್‌ ಎಡ್ವಾನ್ಸ್‌ಡ್‌ ಲರ್ನಿಂಗ್‌ (ಸಿಎಫ್‌ಎಎಲ್‌) ಕೊಟ್ಟಾರ ಕ್ರಾಸ್‌ನಲ್ಲಿರುವ ಅಂಗನವಾಡಿಯನ್ನು ನವೀಕರಿಸಿ, ಪೂರಕ ಸೌಲಭ್ಯ ಒದಗಿಸಿಕೊಡುವ ಕೆಲಸಕ್ಕೆ ಮುಂದಾಗಿದೆ.ಇದಕ್ಕಾಗಿ ಅ. 8ರಂದು ಬೆಳಗ್ಗೆ 10ರಿಂದ 12. 30ರ ತನಕ ಬಿಜೈ-ಕಾಪಿಕಾಡ್‌ನ‌ಲ್ಲಿರುವ ತನ್ನ ಕ್ಯಾಂಪಸ್‌ನಲ್ಲಿ ಸಂಗ್ರಹಣ ಅಭಿಯಾನ ಆಯೋಜಿಸಿದ್ದು, ಆಸಕ್ತ ಸಾರ್ವಜನಿಕರು ದೇಣಿಗೆ ಸಹಿತ ಅಂಗನವಾಡಿ ಮಕ್ಕಳಿಗೆ ಉಪಯೋಗವಾಗುವಂತಹ ಯಾವುದೇ ವಸ್ತುಗಳನ್ನು ನೀಡಬಹುದು ಎಂದು ಸಂಸ್ಥೆಯ ಸಿಬಂದಿ ತಿಳಿಸಿದ್ದಾರೆ.

ಸ್ವಯಂ ಶಿಕ್ಷಣ ಸೇವೆಗೆ ಅವಕಾಶ
ನವೀಕರಣದ ಅನಂತರ ಅಲ್ಲಿ ಕಲಿಯುವ ಮಕ್ಕಳಿಗೆ ಸಂಸ್ಥೆಯ ಶಿಕ್ಷಕರಿಂದ ಕಲಿಕಾ ಸೌಲಭ್ಯ ಒದಗಿಸುವ ಕಾರ್ಯಕ್ಕೂ ಸಂಸ್ಥೆ ಮುಂದಾಗಿದೆ. ಅಲ್ಲದೆ, ಕಲಿಕೆಯ ಆಸಕ್ತಿ ಹೊಂದಿದವರು ವಾರದಲ್ಲಿ ಒಂದು ಗಂಟೆ ಸ್ವಯಂ ಶಿಕ್ಷಣ ಸೇವೆ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಕಲಿಕಾ ಸಾಮಗ್ರಿ, ಆಟದ ಸಾಮಗ್ರಿ, ಪುಸ್ತಕ, ಮಕ್ಕಳು ಉಪಯೋಗಿಸಬಹುದಾದ ಬಟ್ಟೆ ಬರೆ ಅಥವಾ ಸಣ್ಣ ರೂಪದ ವಂತಿಗೆಯನ್ನು ಸಹ ನೀಡಬಹುದು ಎಂದು ಸಂಸ್ಥೆಯ ಪ್ರಾಂಶುಪಾಲೆ ಸೆವೆರಿನ್‌ ರೊಜಾರಿಯೋ ತಿಳಿಸಿದ್ದಾರೆ.

ಬೆಂಗಳೂರಿನ ಇಂಡಿಯನ್‌ ಮೊಂಟೆನ್ಸರಿ ಸೆಂಟರ್‌ನ ಅಧ್ಯಯನ ಮಂಡಳಿಯ ನಿರ್ದೇಶಕಿ ಗೀತಾ ನಿತ್ಯಾನಂದ ಅವರಿಂದ ಈ ವೇಳೆ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, 150 ರೂ. ಪ್ರವೇಶ ಶುಲ್ಕ ಪಾವತಿಸಬೇಕು. ಈ ಚಂದಾ ಹಣವನ್ನು ಅಂಗನವಾಡಿ ನವೀಕರಣ ಯೋಜನೆಗೆ ಉಪಯೋಗಿಸಲಾಗುವುದು. ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿಯುಳ್ಳ ಹೆತ್ತವರು, ಶಿಕ್ಷಕರು ಮತ್ತು ಸಾರ್ವಜನಿಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಸರಕಾರಿ ಶಾಲೆಗೆ ಉಚಿತ ಎವಿ ಕೊಠಡಿ
ಪ್ರಸ್ತುತ ವರ್ಷ ಸ.ಪ.ಪೂ. ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ಇಲ್ಲಿ ಉಚಿತ ಜೆಇಇ / ಸಿಇಟಿ ಪ್ರವೇಶಾತಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಕೊಟ್ಟಾರದಲ್ಲಿರುವ ಜಿ.ಪಂ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ / ಆಡಿಯೋ-ವೀಡಿಯೊ ಕೊಠಡಿ, ಕಂಪ್ಯೂಟರ್‌, ಪ್ರಿಂಟರ್‌, ಪ್ರೊಜೆಕ್ಟರ್‌ ಮತ್ತು ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ, ಜತೆಗೆ ಓದುವ, ಕುತೂಹಲಕಾರಿ  ವಿಚಾರಾತ್ಮಕ ಆಲೋಚನೆ ಬೆಳೆಸುವ ನಿಟ್ಟಿನಲ್ಲಿ ನೂರಾರು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಒದಗಿಸಲಾಗಿದೆ. ಡಾ| ಸುಗತಮಿತ್ರ ಅಭಿವೃದ್ಧಿಪಡಿಸಿದ ಸ್ವ ಆಯೋಜಿತ ಕಲಿಕಾ ಪರಿಸರದೊಂದಿಗೆ ಕಂಪ್ಯೂಟರ್‌ ಅಳವಡಿಸಲಾಗಿದೆ. ಓದುವ ಕೊಠಡಿ ಮತ್ತು ಕಂಪ್ಯೂಟರ್‌ ಕೊಠಡಿ ‘ಮಕ್ಕಳು ನಿರ್ದೇಶಿತ ಕಲಿಕೆ’ ಆಧಾರದಲ್ಲಿ ಆರಂಭಿಸಲಾಗಿದ್ದು, ಮಕ್ಕಳು ಪ್ರಾಜೆಕ್ಟ್ ಅಥವಾ ಕಾರ್ಯ ಚಟುವಟಿಕೆಗಳನ್ನು ಸ್ವ ಸಹಾಯದಿಂದಲೇ ನಡೆಸಲು ಶಕ್ತರಾಗಬಹುದು ಎನ್ನುತ್ತಾರೆ ಸೆವೆರಿನ್‌ ರೊಸಾರಿಯೊ. 

Advertisement
Advertisement

Udayavani is now on Telegram. Click here to join our channel and stay updated with the latest news.

Next