ಹೊಸದಿಲ್ಲಿ : ‘ಕೇಂದ್ರ ಸರಕಾರ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ರೈತರನ್ನು ಸಿರಿವಂತರಿಗಿಂತ ಕೀಳಾಗಿ ಕಾಣುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದು ಆರೋಪಿಸಿದರು.
ಲೋಕಸಭೆಯಲ್ಲಿ ರೈತರ ಆತ್ಮಹತ್ಯೆ ವಿಷಯವನ್ನು ಎತ್ತಿ ಮಾತನಾಡಿದ ರಾಹುಲ್ ಗಾಂಧಿ, ‘ದೇಶಾದ್ಯಂತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
2019-20ರ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ರೈತರ ಉದ್ಧಾರಕ್ಕಾಗಿ ಪ್ರಬಲ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪ್ರಧಾನಿ ನರೇಂದ್ರ ಮೋದಿ ಸರಕಾರ ರೈತರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಕೇವಲ 4.3 ಲಕ್ಷ ಕೋಟಿ ರೂ.ಗಳ ತೆರಿಗೆ ವಿನಾಯಿತಿಯನ್ನು ಬಜೆಟ್ ನಲ್ಲಿ ನೀಡುವ ಮೂಲಕ ಕೇಂದ್ರ ಸರಕಾರ ಕೃಷಿಕರನ್ನು ಕಡೆಗಣಿಸಿದೆ ಎಂದು ರಾಹುಲ್ ಆರೋಪಿಸಿದರು.