Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿಗಳ ಆಪ್ತರೊಬ್ಬರು ನೀರಾವರಿ ಇಲಾಖೆ ಗುತ್ತಿಗೆದಾರರನ್ನು ಕರೆದು ಸಭೆ ಮಾಡಿದ್ದಾರೆ. ಅವರೇನು ರಾಜಕಾರಣಿಗಳಲ್ಲ. ಯಾರಿಗೂ ಅಧಿಕಾರ ಕೊಡದೆ ಎಲ್ಲ ಇಲಾಖೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಒಳಮರ್ಮವೇ ಬೇರೆ ಎಂದು ಲೇವಡಿ ಮಾಡಿದರು.
Related Articles
Advertisement
ತನಿಖೆಯಾಗಲಿ: ಮೋಡ ಬಿತ್ತನೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅನುಮಾನವಿದ್ದರೆ ತನಿಖೆಯಾಗಲಿ ಎಂದು ಸವಾಲೆಸೆದರು. ಹುಬ್ಬಳ್ಳಿಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಪಸಂಖ್ಯಾತ, ದಲಿತರ ಪ್ರದೇಶಗಳಿಗೆ ಸ್ಥಳೀಯ ಬಿಜೆಪಿ ಶಾಸಕರು ಭೇಟಿ ನೀಡದಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜ್ಯ ಸರಕಾರದಿಂದ ಎಲ್ಲರೂ ಒಂದೇ ಎಂಬ ಮಾನವೀಯತೆ ಮೇಲೆ ಪರಿಹಾರ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ನೆರೆ ಪೀಡಿತ ಪ್ರದೇಶಗಳಿಗೆ ದಿನೇಶ ಭೇಟಿ: ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಶನಿವಾರ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಹುಬ್ಬಳ್ಳಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ನೆರೆ ಸಂತ್ರಸ್ತರ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಕ್ಷಿಸುವ ಜವಾಬ್ದಾರಿಯುತ ಕಾರ್ಯವನ್ನು ವಿಪಕ್ಷವಾಗಿ ಕಾಂಗ್ರೆಸ್ ಮಾಡುತ್ತಿದೆ. ಈಗಾಗಲೇ ಕೆಪಿಸಿಸಿಯ ಎರಡು ತಂಡಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರಕಾರದಿಂದ ಆಗಬೇಕಾದ ಕಾರ್ಯಗಳ ಕುರಿತು ಅಧ್ಯಯನ ಮಾಡಲಾಗುತ್ತಿದೆ ಎಂದರು.
ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ನೆರೆ ಉಂಟಾಗಿ ಸಾಕಷ್ಟು ನಷ್ಟವಾಗಿದೆ. ಕೂಡಲೇ ಸರಕಾರ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು. ಮನೆ, ಬೆಳೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗಿದೆ. ನಿಮ್ಮ ಪರ ಧ್ವನಿಯಾಗಿ ಕಾಂಗ್ರೆಸ್ ಪಕ್ಷವಿದೆ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ: ಪ್ರವಾಹ ಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳೆಲ್ಲವನ್ನು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ. ಅಧಿಕಾರಿಗಳೇ ನೋಡಿಕೊಳ್ಳುವುದಾದರೆ ಮಂತ್ರಿಮಂಡಲ ಯಾಕೆ ಬೇಕು? ಮುಖ್ಯಮಂತ್ರಿಯೊಬ್ಬರಿಂದಲೇ ಸರಕಾರದ ಆಡಳಿತ ನಡೆಯಲಿ. ಸಚಿವರು ಇಲ್ಲದ ಕಾರಣ ಏಕವ್ಯಕ್ತಿಯ ಸರಕಾರದಲ್ಲಿ ಎಲ್ಲ ದಂಧೆಗಳು ಭರ್ಜರಿಯಾಗಿ ನಡೆಯುತ್ತಿವೆ. ಅತೃಪ್ತ ಶಾಸಕರನ್ನು ತೃಪ್ತಿಪಡಿಸುವುದಕ್ಕಾಗಿಯೇ ಸಚಿವ ಸಂಪುಟ ರಚನೆಗೆ ಕಾಯುತ್ತಿರಬಹುದು ಎಂದೆನ್ನಿಸುತ್ತಿದೆ ಎಂದು ಆರೋಪಿಸಿದರು.
•41 ಲಕ್ಷ ದೇಣಿಗೆ: ಕೆಪಿಸಿಸಿಯಿಂದ ಸಂಗ್ರಹಿಸಿದ 41 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಹಾರ ನಿಧಿಗೆ ನೀಡಿದ್ದೇವೆ ಎಂದರು.
ಹಳೇ ಹುಬ್ಬಳ್ಳಿಯಲ್ಲಿ ನೆರೆ ಪೀಡಿತ ಗೌಸಿಯಾ ನಗರ, ಸದರಸೋಫಾ, ಕುಂಬಾರ ಓಣಿಗೆ ಭೇಟಿಕೊಟ್ಟು ಪರಿಶೀಲಿಸಿದರು. ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ಹೊದಿಕೆ ವಿತರಿಸಿದರು.