Advertisement

ಖಾಸಗಿ ಶಾಲೆ ಮೀರಿಸಿದ ಮದನಮಟ್ಟಿ ಶಾಲೆ: ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೆ ಒತ್ತು

01:17 PM Dec 02, 2020 | sudhir |

ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಮದನಮಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಯನ್ನೂ ಮೀರಿಸುವಂತೆ ಅಭಿವೃದ್ಧಿ ಸಾಧಿಸಿದೆ. ಮದನಮಟ್ಟಿ ಅಂದಾಜು ಒಂದು ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ. 1ರಿಂದ 8ನೇ
ತರಗತಿಯವರೆಗೆ ಒಟ್ಟು 243 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಇಲ್ಲಿ ಓದುತ್ತಿರುವ ಮಕ್ಕಳಿಗೆ ನಗರ ಪ್ರದೇಶದಲ್ಲಿ ಓದುವ ಭಾಗ್ಯ ಸಿಗಲಿಲ್ಲ ಎಂಬ ಕೊರಗಿಲ್ಲ. ಕಾರಣ ಎಲ್ಲ ಸೌಲಭ್ಯಗಳನ್ನೂ ಶಾಲೆ ಹೊಂದಿದೆ.

Advertisement

ಬಹುತೇಕ ಎಲ್ಲ ಸರ್ಕಾರಿ ಶಾಲೆಗಳು ಬೆಳಗ್ಗೆ 10ಕ್ಕೆ ಆರಂಭವಾಗುತ್ತವೆ. ಆದರೆ ಇಲ್ಲಿಯ ಶಾಲೆ ಬೆಳಗ್ಗೆ 9ಕ್ಕೆ ಆರಂಭವಾಗುತ್ತದೆ. ಶಿಕ್ಷಕರು ಒಂದು ಗಂಟೆಯ ಅವಧಿಯಲ್ಲಿ ಮಕ್ಕಳಿಗೆ ಚಟುವಟಿಕೆ ನೀಡುತ್ತಿರುವುದು ವಿಶೇಷ.

ವಿದ್ಯಾರ್ಥಿಗಳಲ್ಲಿ ವೇದಿಕೆ ಮೇಲೆ ನಿಂತು ಮಾತನಾಡಲು ಪ್ರೋತ್ಸಾಹಿಸಲಾಗುತ್ತದೆ. ಶಾಂತಿ ಮಂತ್ರ, ದಿನದ ಸುದ್ದಿ ಸಮಾಚಾರ, ರಸಪ್ರಶ್ನೆ ಕೇಳುವುದು, ಕನ್ನಡ, ಹಿಂದಿ, ಇಂಗ್ಲಿಷ್‌ ಪಾಠ ಓದುವುದು, ವಚನ ಓದಿ ಅದರ ಸಾರಾಂಶ ತಿಳಿಸುವುದು, ಐದು
ಕನ್ನಡ ವ್ಯಾಕರಣಾಂಶಗಳನ್ನು ಕೇಳುವುದು, ಗಾದೆ ಮಾತು ವಿಸ್ತರಿಸಿ ಹೇಳುವುದು ಹೀಗೆ ಪ್ರತಿ ದಿನ 30 ವಿದ್ಯಾರ್ಥಿಗಳು ವೇದಿಕೆ
ಮೇಲೆ ಬಂದು ತಮಗೆ ಬಂದ ಚಟುವಟಿಕೆ ನಡೆಸಿಕೊಡುತ್ತಿದ್ದಾರೆ. ಪ್ರತಿ ನಿತ್ಯ ಒಬ್ಬ ಪಾಲಕರು ಬಂದು ದಿನ ನಿತ್ಯದ ಚಟುವಟಿಕೆ ವೀಕ್ಷಿಸಿ ನಂತರ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸುತ್ತಿರುವುದು ವಿಶೇಷ.

ಇದನ್ನೂ ಓದಿ :ಯೋಗೇಶ್ವರ್ ನನ್ನು ಮಂತ್ರಿ ಮಾಡಲು ಸಿಎಂಗೆ ಆತುರ ಯಾಕೆ? ವಿಶ್ವನಾಥ್ ಪ್ರಶ್ನೆ

Advertisement

ಶಾಲೆ ಸುಂದರ ಹಸಿರು ಪರಿಸರದಿಂದ ಕೂಡಿದ್ದು, ಶಾಲೆಯ ಸುತ್ತಮುತ್ತ ಗಿಡ ಮರ ನೆಡಲಾಗಿದೆ. ಉತ್ತಮ ರೀತಿಯ ಪ್ರತ್ಯೇಕ ಶೌಚಾಲಯ ಹೊಂದಿದೆ. ಐದು ಮತ್ತು ಎಂಟನೆಯ ತರಗತಿಗಳಿಗೆ ಪ್ರೊಜೆಕ್ಟರ್‌ ಬಳಸಿಕ ಮಕ್ಕಳಿಗೆ ಪಾಠ ಮಾಡಲಾಗುತ್ತದೆ.
ಎಲ್ಲ ವರ್ಗ ಕೋಣೆಗಳಿಗೆ ಆಧುನಿಕ ಬೋರ್ಡ್‌ ಅಳವಡಿಸಲಾಗಿದೆ. ಗ್ರಾಮಸ್ಥರ ಸಹಾಯದಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಶಾಲೆ ಒಟ್ಟು 18 ಗಣಕ ಯಂತ್ರ, ಗ್ರಂಥಾಲಯ ಕೂಡಾ ಶಾಲೆ ಹೊಂದಿದೆ. ಶಾಲೆಗೆ ಇನ್ಫೋಸಿಸ್‌ ಸಂಸ್ಥೆಯವರು ಐದು ಕಂಪ್ಯೂಟರ್‌ಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಶಿಕ್ಷಕರಿಗಾಗಿ ಬಯೋ ಮೆಟ್ರಿಕ್‌ ವ್ಯವಸ್ಥೆ ಕೂಡಾ
ಅಳವಡಿಸಲಾಗಿದೆ.

ಕಲಿಕೆಯಲ್ಲೂ ಈ ಶಾಲೆಯ ಮಕ್ಕಳು ಮುಂದೆ ಇದ್ದಾರೆ. ಈ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿ ಸ್ಫೂರ್ತಿ ನಂದೆಪ್ಪನವರ 36ರವರೆಗೆ ಮಗ್ಗಿ ಹೇಳುವುದರ ಜತೆಗೆ ಅವುಗಳನ್ನು ರಿವರ್ಸ್‌ ಪದ್ಧತಿಯಲ್ಲೂ ಹೇಳುತ್ತಿರುವುದು ವಿಶೇಷತೆ.
ಈ ಶಾಲೆಗೆ ಎರಡು ವರ್ಷಗಳ ಕಾಲ ಅಜಿಂ ಪ್ರೇಮ್‌ ಜಿಯವರು ನಡೆಸುವ ಕಲಿಕಾ ಖಾತ್ರಿ ಪ್ರಶಸ್ತಿ, ಮೂರು ವರ್ಷಗಳ ಕಾಲ ಕರ್ನಾಟಕ ಶಾಲಾ ಗುಣಮಟ್ಟದ ಮೌಲ್ಯಾಂಕನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಶಾಲೆಗೆ “ಎ’ ಶ್ರೇಣಿ, ಉತ್ತಮ ಎಸಿxಎಂಸಿ ಪ್ರಶಸ್ತಿ, ಈ ಶಾಲೆಯ 36ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ ಎಂಎಂಎಸ್‌ ಪ್ರತಿಭಾನ್ವೇಷಣೆಯ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ. ಸದರಿ ಶಾಲೆಯಲ್ಲಿ ಪ್ರತಿ ಮಗುವಿಗೂ ವೈಯಕ್ತಿಕ ಗಮನ ನೀಡಿ ಮಕ್ಕಳ ಪ್ರಗತಿಗೆ ಮುಖ್ಯ ಗುರು ಡಿ.ಬಿ.ಜಾಯಗೊಂಡ, ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು ಜನಪ್ರತಿಧಿಗಳು, ಪಾಲಕರು ಶ್ರಮಿಸುತ್ತಿದ್ದಾರೆ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next