ಬೆಂಗಳೂರು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರು ಎದೆಗುಂದುವ ಅಗತ್ಯವಿಲ್ಲ. ಅವರ ಬದುಕನ್ನು ಪುನಃ ಕಟ್ಟಿಕೊಡಲು ಸರ್ಕಾರ ಅವರೊಂದಿಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ.
ರಾಜ್ಯದಲ್ಲಿ ಮುಂಗಾರಿನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಯೂ ನಷ್ಟವಾಗಿದೆ. ಈ ವಿಕೋಪದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಜನರ ನೆರವಿಗೆ ಧಾವಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಹದಿಂದ ತೀವ್ರ ಹಾನಿಗೀಡಾದ “ಎ’ ಮತ್ತು “ಬಿ’ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ಘೋಷಿಸಲಾಗಿದೆ. ಈಗಾಗಲೇ ಮುಂಗಡವಾಗಿ 1 ಲಕ್ಷ ರೂ.ಗಳನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.
ಉಳಿದ ನಾಲ್ಕು ರೂ.ಗಳನ್ನು ನಿರ್ಮಾಣವಾಗುತ್ತಿರುವ ಮನೆಯ ಹಂತವಾರು ಜಿ.ಪಿ.ಎಸ್. ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು.
ಆದ್ದರಿಂದ ಕೂಡಲೇ ಮನೆ ನಿರ್ಮಾಣವನ್ನು ಪ್ರಾರಂಭಿಸಿ ಬೇಗನೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.