ಬೆಂಗಳೂರು: ಕೋವಿಡ್ ಸೋಂಕಿಗೊಳಗಾಗಿರುವ ಮೂಡಬಿದಿರೆ ತಾಲೂಕಿನ ಶಿರ್ತಾಡಿಯ ಶಿಕ್ಷಕಿ ಎನ್. ಪದ್ಮಾಕ್ಷಿ ಇವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಕ ದಂಪತಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವರದಿಗಳನ್ನು ಗಮನಿಸಿದ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಸರ್ಕಾರದ ಸೂಚನೆಯನ್ವಯ ಶಿಕ್ಷಕಿ ಪದ್ಮಾಕ್ಷಿಯವರ ಪುತ್ರಿ ಕುಮಾರಿ ಐಶ್ವರ್ಯಳನ್ನು ಸಂಪರ್ಕಿಸಿ ತಮ್ಮ ತಾಯಿಯ ಚಿಕಿತ್ಸೆ ಕುರಿತು ಸರ್ಕಾರ ಪೂರ್ಣ ಕಾಳಜಿ ವಹಿಸಲಿದ್ದು, ಯಾವುದೇ ಆತಂಕ ಬೇಡ ಎಂದು ಸಾಂತ್ವಾನ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಮಳೆ ನೀರಿನ ಅಬ್ಬರಕ್ಕೆ ಒಡೆದ ಸಾರವಾಡ ಕೆರೆ, ಅಪಾರ ಬೆಳೆ ಹಾನಿ! ಸಂಕಷ್ಟದಲ್ಲಿ ರೈತರು
ಈ ಕುರಿತು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಸಹ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸದರಿ ಶಿಕ್ಷಕಿಯ ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿರುವ ದ.ಕ. ಜಿಲ್ಲಾಧಿಕಾರಿಯವರು ರೋಗಿಯ ಕಡೆಯಿಂದ ಯಾವುದೇ ರೀತಿಯ ಹಣ ಪಡೆಯದೇ ಚಿಕಿತ್ಸೆ ನೀಡಲು ಸೂಚಿಸಿದ್ದು, ಚಿಕಿತ್ಸಾ ಬಿಲ್ ನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ ವಿಚಾರವನ್ನು ಶಿಕ್ಷಣ ಸಚಿವರು ತಿಳಿಸಿದ್ದಾರೆ.