ತುಮಕೂರು: ದೇಶವೇ ಸಂಕಷ್ಟದಲ್ಲಿರುವಾಗ ಶಾಸಕ ಡಿ.ಸಿ.ಗೌರಿಶಂಕರ್ ತನ್ನ ತಾಯಿಯ ಮಾತಿನಂತೆ 50 ಸಾವಿರ ಕುಟುಂಬಗಳ ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ರೈತರ ಬದುಕು ಹಸನುಗೊಳಿಸಿ ಕ್ಷೇತ್ರದಲ್ಲಿ ರೈತ ಬಂಧುವಾಗಿ, ಮಾಡುತ್ತಿರುವ ಜನಹಿತ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಅಭಿಪ್ರಾಯಪಟ್ಟರು.
ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ಪಡಿತರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು, ತಮ್ಮ ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ 10 ಕೇಜಿ ಪಡಿತರ ಹಾಗೂ ರೈತರಿಂದ ನೇರವಾಗಿ ಖರೀದಿಸಿ ಬಡವರಿಗೆ ಉಚಿತವಾಗಿ 50 ಟನ್ ಬಾಳೆ ಹಣ್ಣು 50 ಟನ್ ವಿವಿಧ ರೀತಿಯ ತರಕಾರಿಯೊಂದಿಗೆ
ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಸಾಮಾಜಿಕ ಅಂತರ ದಲ್ಲಿ ವಿತರಿಸುತ್ತಿರುವುದು ಸಂತಸದ ವಿಚಾರ ಎಂದರು. ಮೇ 3ರವರೆಗೆ ಪ್ರತಿನಿತ್ಯ ಐದು ಸಾವಿರ ಕುಟುಂಬಗಳಿಗೆ ನೆರವಿನಂತೆ 50 ಸಾವಿರ ಪಡಿತರ ಕಿಟ್ ನೀಡುವ ಮೂಲಕ ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುತ್ತಿದ್ದು, ಫಲಾನುಭವಿಗಳು ಕೋವಿಡ್-19 ನಿಯಂತ್ರಣ ಮಾಡಲು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಕೋವಿಡ್-19ದಿಂದ ಸಂಪೂರ್ಣ ಲಾಕ್‌ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಹಾಗೂ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಬೆಳೆ ಖರೀದಿಸುವ ಬಗ್ಗೆ ಚಿಂತನೆ ನಡೆಸಬೇಕು, ರೈತರ ನೆರವಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಮೂರುವರೆ ಕೋಟಿ ವೆಚ್ಚದಲ್ಲಿ ಗ್ರಾಮಾಂತರ ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ ತರಕಾರಿ, ಪಡಿತರ ಸೇರಿದಂತೆ ಅಗತ್ಯ ಸಾಮಗ್ರಿಯನ್ನು ವಿತರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವಂತೆ ಕುಮಾರಣ್ಣ ಸೂಚಿಸಿದ್ದರು. ಅದರಂತೆ ಎಲ್ಲರಿಗೂ ಪಡಿತರ ವಿತರಿಸಲು ಕ್ರಮವಹಿಸಲಾಗಿದೆ ಹಸಿವುಮುಕ್ತ ಕ್ಷೇತ್ರ ಮಾಡುವುದೇ ನನ್ನ ಉದ್ದೇಶ ಎಂದರು. ಜಿಪಂ ಮಾಜಿ ಸದಸ್ಯ ಡಿ.ಸಿ.ವೇಣುಗೋಪಾಲ್ ಮಾತನಾಡಿ, ಸರ್ಕಾರ ಲಾಕ್‌ಡೌನ್ ಮಾಡಿರುವುದು
ಒಳ್ಳೇ ವಿಚಾರ ಆದರೆ ದಿನಗೂಲಿ ಕಾರ್ಮಿಕರು ಕಷ್ಟ ದಲ್ಲಿದ್ದಾರೆ, ಚೆನ್ನಿಗಪ್ಪ ಅವರು ಅನ್ನದಾಸೋಹ ಮಾಡುತ್ತಿದ್ದರು. ಅವರ ಮಕ್ಕಳಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಪಡಿತರವನ್ನು ವಿತರಣೆ ಮಾಡುತ್ತಿದ್ದೇವೆ ಎಂದರು. ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಬೆಳ್ಳಿ ಲೋಕೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ನರುಗನಹಳ್ಳಿ ವಿಜಯ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ತಾಪಂ ಇಒ ಜೈಪಾಲ್ ಇದ್ದರು.
ಅಪ್ಪನ ಹಾದಿಯಲ್ಲಿ ಮಕ್ಕಳು ದಿ.ಚೆನ್ನಿಗಪ್ಪ ಅವರು ಲಕ್ಷಾಂತರ ಜನರಿಗೆ ಊಟ ಹಾಕಿದ್ದರು. ಕೋವಿಡ್-19 ಸಂಕಷ್ಟಕ್ಕೆ ಸಿಲುಕಿದವರನ್ನು ನೋಡಿದಾಗ ಊಟ ಮಾಡಲು ಯೋಚಿಸುವಂತೆ ಆಯಿತು, ಆಗಲೇ ಗೌರಿಶಂಕರ್ ಅವರಿಗೆ ಅಪ್ಪನಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡು, ಗ್ರಾಮಾಂತರ ಕ್ಷೇತ್ರದಲ್ಲಿ ಇರುವರಿಗೆ ಪಡಿತರ ಹಂಚುವಂತೆ ಹೇಳಿದೆ, ಅಪ್ಪನ ಹಾದಿಯಲ್ಲಿಯೇ ಗೌರಿಶಂಕರ್ ಸಾಗುತ್ತಿದ್ದಾರೆ. ಮಕ್ಕಳ ಈ ಕಾರ್ಯ ನೋಡಿ ಸಂತಸವಾಗಿದೆ, ಇಂತಹ ಒಳ್ಳೆಯ ಕಾರ್ಯಕ್ಕೆ ದೇವೇಗೌಡ ಅಪ್ಪಾಜಿ ಅವರೇ ಚಾಲನೆ ನೀಡುತ್ತಿರುವುದು ಇನ್ನೂ
ಹರ್ಷದ ವಿಚಾರ ಎಂದು ಗೌರಿಶಂಕರ್ ಅವರ ತಾಯಿ ಸಿದ್ಧಗಂಗಮ್ಮ “ಉದಯವಾಣಿ’ಗೆ ತಿಳಿಸಿದರು.