ಗೌರಿಬಿದನೂರು: ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಹಾಗೂ ಲಾಭ ತಂದು ಕೊಡುವ ಹುರಳಿಕಾಯಿ (ಬೀನ್ಸ್)ಬೆಳೆ ಬೆಳೆಯುವ ಮೂಲಕ ತಾಲೂಕಿನ ಮಂಚೇನಹಳ್ಳಿ ಹೋಬಳಿ ಹನುಮಂತಪುರ ಗ್ರಾಮದ ರೈತ ನಾರಾಯಣಗೌಡರ ಮಿಶ್ರಬೆಳೆ ಬೇಸಾಯ ಪದ್ಧತಿ ಗಮನ ಸೆಳೆದಿದೆ.
ತಾಲೂಕಿನಲ್ಲಿ ನದಿ-ನಾಲೆಗಳಿಲ್ಲದೇ ಇಲ್ಲಿನ ರೈತರು ಮಳೆಯಾಶ್ರಿತ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಕೊಳವೆ ಬಾವಿ 1500 ಅಡಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿಯಲ್ಲಿ ರೈತ ನಾರಾಯಣಗೌಡರು ಪ್ರತಿ ವರ್ಷ ಉತ್ತಮ (ಬೀನ್ಸ್) ಹುರಳಿಕಾಯಿ ಫಸಲು ಬೆಳೆಯಲು ಕಂಡುಕೊಂಡ ಮಾರ್ಗ ಮಿಶ್ರ ಬೇಸಾಯ ಪದ್ಧತಿ. ವ್ಯವಸಾಯಸ್ಥರ ಕುಟುಂಬದವರೇ ಆದ ನಾರಾಯಣಗೌಡರು ತಾಲೂಕಿನಲ್ಲಿ ಮಳೆ ಪರಿಸ್ಥಿತಿ ಅರಿತು ಇರುವ ಅಲ್ಪಸ್ವಲ್ಪ ನೀರಿನಲ್ಲಿ ಆರ್ಥಿಕ ತೋಟಗಾರಿಕೆ ಬೆಳೆಗಳಾದ ಟೊಮೆಟೋ ಹಾಗೂ ಕೋಸು, ಅಡಿಕೆ, ತೆಂಗು, ಹಲಸು ಕೃಷಿ ಬೆಳೆಯಾದ ಮೆಕ್ಕೆಜೋಳ, ಸಜ್ಜೆ, ರಾಗಿ ಮುಂತಾದವುಗಳನ್ನು ಮಿಶ್ರ ಬೆಳೆಯಾಗಿ ಬೆಳೆದರೂ ಉತ್ತಮ ಇಳುವರಿ ಪಡೆದರೂ ಬೆಳೆ ಕೈಗೆ ಬಂದ ಸಂದರ್ಭದಲ್ಲಿ ಬೆಲೆಯಿಲ್ಲದೇ ಲಕ್ಷಾಂತರ ರೂ. ನಷ್ಟವಾಗುತ್ತಿತ್ತು.
ವಾರ್ಷಿಕ 4 ಲಕ್ಷ ರೂ. ಆದಾಯ: ಇದರಿಂದ ಕಂಗಾಲಾಗಿದ್ದ ಇವರು ತಮ್ಮ 4ಎಕರೆ ಜಮೀನಿನಲ್ಲಿ ಖಾಸಗಿ ಕಂಪನಿಗೆ ಹುರಳಿಕಾಯಿಯ (ಬೀನ್ಸ್) ಬಿತ್ತನೆ ಬೀಜ ಬೆಳೆದು ಕೊಡುವ ಒಪ್ಪಂದ ಮಾಡಿಕೊಂಡು ಸರಬರಾಜು ಮಾಡುತ್ತಿದ್ದು, ಈಗ ಪ್ರತಿವರ್ಷ ನಿಗದಿತ ಬೆಲೆಯಲ್ಲಿ ಬೀಜವನ್ನು ಸರಬರಾಜು ಮಾಡಿ ಬೀನ್ಸ್‌ನಿಂದಲೇ ಖರ್ಚೆಲ್ಲಾ ಕಳೆದು ವಾರ್ಷಿಕ 4ಲಕ್ಷ ಆದಾಯ ಗಳಿಸುತ್ತಿದ್ದಾರೆ. ತೆಂಗು, ಅಡಕೆ, ಹಲಸು, ಟೊಮೆಟೋ ಬೆಳೆಗಳ ಫಸಲುಗಳು ಕೂಡ ಇವರ ಲಾಭಕ್ಕೆ ಸಹಕಾರಿಯಾಗಿದೆ.
ಬೀನ್ಸ್‌ಗೆ ನಿಗದಿತ ಬೆಲೆ: ತಮ್ಮ ಒಟ್ಟು 15 ಎಕರೆ ಜಮೀನಿನಲ್ಲಿ 4 ಎಕರೆಯಲ್ಲಿ ಬೀನ್ಸ್, 3ಎಕರೆಯಲ್ಲಿ ಸಜ್ಜೆ, ಮೆಕ್ಕೆಜೋಳ ಬೆಳೆಯುತ್ತಿದ್ದು, 6 ಎಕರೆಯಲ್ಲಿ ಅಡಕೆ, ತೆಂಗು ಬೆಳೆಯುತ್ತಿದ್ದು, ಅದರಲ್ಲಿಯೇ ಮಿಶ್ರ ಬೆಳೆಯಾಗಿ ಕೋಸು ಬೆಳೆಯಲಾಗುತ್ತಿದೆ. ಉಳಿದ ಎರಡು ಎಕರೆಯಲ್ಲಿ ತೊಗರಿ, ರಾಗಿ ಹಾಗೂ ಟೊಮೆಟೋ ಬೆಳೆಯುತ್ತಾರೆ. ಈ ಎಲ್ಲಾ ಬೆಳೆಗಳ ಆದಾಯವು ಅಂದಿನ ಮಾರುಕಟ್ಟೆಯ ಬೆಲೆಗನುಗುಣವಾಗಿ ಮಾತ್ರ ಲಾಭ ಗಳಿಸಬಹುದಾಗಿದೆ. ಆದರೆ ಬೀನ್ಸ್‌ಗೆ ಮಾತ್ರ ನಿಗದಿತ ಬೆಲೆ ಸಿಗುತ್ತಿದೆ.
ಬೀನ್ಸ್ ನಾಟಿ ಮಾಡುವ ವಿಧಾನ: ನಾಲ್ಕು ಎಕರೆ ಪ್ರದೇಶ ಉಳುಮೆ ಮಾಡಿ ಭೂಮಿ ಹದಮಾಡಿ 20 ರಿಂದ 25 ಟ್ರ್ಯಾಕ್ಟರ್ ಲೋಡು ಕೊಟ್ಟಿಗೆ ಗೊಬ್ಬರವನ್ನು ಹಾಕಿ ನಂತರ 3/3 ಅಡಿ ಅಂತರದ ಸಾಲುಗಳನ್ನು ಮಾಡಿ 2/1 (ಅರ್ಧಅಡಿ) ಗಿಡದಿಂದ ಗಿಡಕ್ಕೆ ಅಂತರದಲ್ಲಿ ಬೀಜ ನಾಟಿ ಮಾಡಲಾಗುತ್ತದೆ. ಆ ನಂತರ ಹನಿ ನೀರಾವರಿ ಮೂಲಕ ನೀರು ಹಾಯಿಸಿ ಭೂಮಿಯನ್ನು ನೆನೆಸಿ ಆ ನಂತರ ಬಿತ್ತನೆ ಮಾಡಲಾಗುತ್ತದೆ.
20 ದಿನಗಳ ನಂತರ ಬಳ್ಳಿ ಬರಲಾರಂಭಿಸಿದಾಗ ಅದಕ್ಕೆ ದಾರವನ್ನು ಕಟ್ಟಿ ಮೇಲಕ್ಕೆ ಬಿಡಲಾಗುತ್ತದೆ. ಒಂದೂವರೆ ತಿಂಗಳಿನಿಂದ 3 ತಿಂಗಳಲ್ಲಿ ಬೆಳೆ ಮುಗಿಯುತ್ತದೆ. 90 ದಿನಕ್ಕೆ ಫಸಲು ಬರಲಿದ್ದು, ಕಾಯಿಯನ್ನು ಕಿತ್ತು ಬೀಜ ಮಾಡಲಾಗುತ್ತದೆ. ವರ್ಷಕ್ಕೆ ಎಕರೆಗೆ 40 ರಿಂದ 45 ಕ್ವಿಂಟಲ್ ಬೀಜವು ಇಳುವರಿ ಬರುತ್ತದೆ. ಮೊದಲೇ ನಿಗದಿಯಾಗಿರುವ ಬೆಲೆಯಲ್ಲಿ ಕಂಪನಿಯವರಿಗೆ ಮಾರಾಟ ಮಾಡಲಾಗುತ್ತದೆ. ಪ್ರತಿ ಕ್ವಿಂಟಲ್‌ಗೆ 15 ಸಾವಿರದಂತೆ 40-45 ಕ್ವಿಂಟಲ್‌ಗೆ ವಾರ್ಷಿಕ 6.5 ಲಕ್ಷ ಲಾಭ ಬರಲಿದ್ದು, ಅದರಲ್ಲಿ 2.5 ಲಕ್ಷ ಖರ್ಚು ಹೋದರೂ 4 ಲಕ್ಷ ನಿವ್ವಳ ಲಾಭ ಬರುತ್ತದೆ ಎನ್ನುತ್ತಾರೆ ರೈತ ನಾರಾಯಣಗೌಡ.