Advertisement

ಜಿಪಂ ಗುದ್ದಾಟದಲ್ಲಿ ಗೌಡರ ಕೈಚಳಕ: ಬಂಡಾಯಕ್ಕೆ ಗೆಲುವು

09:35 PM Oct 23, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿಪಂ ಗದ್ದುಗೆ ಗುದ್ದಾಟಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಂಗಳವಾರ ಮಿಡ್‌ನೈಟ್‌ ನಡೆಸಿದ ರಾಜಕೀಯ ತಂತ್ರಗಾರಿಕೆಯಿಂದ ಜಿಪಂ ಅಧ್ಯಕ್ಷ ಸ್ಥಾನ ಕೈಗೆ ತಪ್ಪಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಗೆ ಒಲಿದಿದೆ. ಈ ಮೂಲಕ ಚಿಕ್ಕಬಳ್ಳಾಪುರ ಉಪ ಚುನಾವಣೆ ಹೊಸ್ತಿಲಲ್ಲಿ ದೇವೇಗೌಡರು ಉರುಳಿಸಿದ ದಾಳ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ.

Advertisement

ಕಾಂಗ್ರೆಸ್‌ ಬಂಡಾಯಕ್ಕೆ ಗೆಲುವು: 28 ಸದಸ್ಯ ಬಲ ಇರುವ ಜಿಪಂನಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವಷ್ಟು -21 ಸಂಖ್ಯಾ ಬಲ ಇದ್ದರೂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಮಂಚೇನಹಳ್ಳಿ ಕ್ಷೇತ್ರದ ಸದಸ್ಯ ಪಿ.ಎನ್‌.ಪ್ರಕಾಶ್‌ ಕೇವಲ 13 ಮತ ಪಡೆದರೆ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಕ್ಷೇತ್ರದ ಸದಸ್ಯ ಚಿಕ್ಕನರಸಿಂಹಯ್ಯ -ಚಿನ್ನಿ 15 ಮತ ಪಡೆದು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯನ್ನು 2 ಮತಗಳ ಅಂತರದಿಂದ ಸೋಲಿಸಿ ನೂತನ ಜಿಪಂ ಅಧ್ಯಕ್ಷರಾಗಿ ಗೆಲುವು ಸಾಧಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸತತ 2-3 ಬಾರಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಂಸದರ ಸಮ್ಮುಖದಲ್ಲಿ ನಡೆದ ಮಾತುಕತೆ ವೇಳೆ ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡಿ ಸಿದ್ಧಪಡಿಸಿದ್ದ ಸೂತ್ರ ವಿಫ‌ಲವಾಗಿದ್ದರ ಪರಿಣಾಮ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಪಿ.ಎನ್‌.ಪ್ರಕಾಶ್‌ರನ್ನು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿದ್ದರು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್‌ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಅವರಿಗೆ ಸೂಚಕರಾಗಿ ಜಿಪಂ ಸದಸ್ಯ ಎಚ್‌.ವಿ.ಮಂಜುನಾಥ, ಮತ್ತೂಂದು ನಾಮಪತ್ರಕ್ಕೆ ಕಾಂಗ್ರೆಸ್‌ನ ಪ್ರಮೀಳಾ ಸಹಿ ಮಾಡಿದ್ದರು.

ಅದೇ ರೀತಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮಿಟ್ಟೇಮರಿ ಕ್ಷೇತ್ರದ ಎಂ.ಬಿ.ಚಿಕ್ಕನರಸಿಂಹಯ್ಯಗೆ ಸೂಚಕರಾಗಿ ಗೌರಿಬಿದನೂರಿನ ಹಿರೇಬಿದನೂರು ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಡಿ.ನರಸಿಂಹಮೂರ್ತಿ ಸೂಚಕರಾಗಿ ಸಹಿ ಮಾಡಿದ್ದರು. ಇಬ್ಬರ ನಾಮಪತ್ರ ಕ್ರಮ ಬದ್ಧವಾಗಿದ್ದರಿಂದ ಚುನಾವಣಾ ಅಧಿಕಾರಿಗಳು ಸ್ಪೀಕರಿಸಿದ್ದರು. ಆದರೆ ಸಲ್ಲಿಕೆಯಾದ ನಾಮಪತ್ರಗಳನ್ನು ಯಾರೊಬ್ಬರು ವಾಪಸ್‌ ಪಡೆಯದ ಕಾರಣ ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಚುನಾವಣೆ ನಡೆಸಿದರು.

ಚಿನ್ನಿಗೆ 15, ಪ್ರಕಾಶ್‌ಗೆ 13 ಮತ: ಒಟ್ಟು 28 ಸದಸ್ಯ ಬಲ ಇರುವ ಜಿಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರ ಚುನಾವಣಾ ಅಧಿಕಾರಿಗಳು ಕೈ ಮೇಲೆ ಎತ್ತಿರುವ ಮೂಲಕ ಮತದಾನ ನಡೆದಾಗ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗೆ 28 ಹಾಜರಿದ್ದ 28 ಸದಸ್ಯರ ಪೈಕಿ ಕೇವಲ 13 ಮತ ಬಂದರೆ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿಕ್ಕನರಸಿಂಹಯೆಗೆ ಒಟ್ಟು 15 ಮತ ಬಂದವು. ಹೆಚ್ಚಿನ ಮತ ಪಡೆದ ಚಿಕ್ಕ ನರಸಿಂಹಯ್ಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದನ್ನು ಚುನಾವಣಾ ಅಧಿಕಾರಿ ಹರ್ಷಗುಪ್ತ ಘೋಷಿಸಿದರು.

Advertisement

ಚಿನ್ನಿ ಬೆನ್ನಿಗೆ ನಿಂತ 15 ಮಂದಿ: ಮತದಾನದ ವೇಳೆ ಬಂಡಾಯ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಪರವಾಗಿ ಬಾಗೇಪಲ್ಲಿ ತಾಲೂಕಿನ ಚೇಳೂರು ಕ್ಷೇತ್ರದ ಸದಸ್ಯೆ ಅರುಣಾ ಅಮರನಾಥರೆಡ್ಡಿ -ಕಾಂಗ್ರೆಸ್‌, ಕಸಬಾ ಕ್ಷೇತ್ರದ ಸದಸ್ಯೆ ನಾರಾಯಣಮ್ಮ -ಸಿಪಿಎಂ, ಗುಡಿಬಂಡೆ ಬೀಚಗಾನಹಳ್ಳಿ ಕ್ಷೇತ್ರದ ಸದಸ್ಯೆ ಎಂ.ಆರ್‌.ವರಲಕ್ಷ್ಮೀ -ಕಾಂಗ್ರೆಸ್‌, ಸೋಮೇನಹಳ್ಳಿ ಕ್ಷೇತ್ರದ ಜಿ.ಆರ್‌.ಗಾಯಿತ್ರಿ ನಂಜುಂಡಪ್ಪ -ಕಾಂಗ್ರೆಸ್‌, ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಕ್ಷೇತ್ರದ ಸದಸ್ಯೆ ಕಮಲಮ್ಮ -ಕಾಂಗ್ರೆಸ್‌, ಚಿಕ್ಕಬಳ್ಳಾಪುರದ ನಂದಿ ಕ್ಷೇತ್ರದ ಸದಸ್ಯ ಕೆ.ಎಂ.ಮುನೇಗೌಡ -ಜೆಡಿಎಸ್‌, ತಿಪ್ಪೇನಹಳ್ಳಿ ಕ್ಷೇತ್ರದ ಸದಸ್ಯ ಕೆ.ಸಿ.ರಾಜಾಕಾಂತ್‌ -ಜೆಡಿಎಸ್‌, ಗೌರಿಬಿದನೂರಿನ ನಗರಗೆರೆ ಕ್ಷೇತ್ರದ ಸದಸ್ಯೆ ಭವ್ಯ ರಂಗನಾಥ -ಬಿಜೆಪಿ, ಹಿರೇಬಿದನೂರಿನ ಕ್ಷೇತ್ರದ ಸದಸ್ಯ ಡಿ.ನರಸಿಂಹಮೂರ್ತಿ -ಕಾಂಗ್ರೆಸ್‌, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ಷೇತ್ರದ ಸದಸ್ಯೆ ಹಾಲಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು -ಕಾಂಗ್ರೆಸ್‌, ಚೀಮಂಗಳ ಕ್ಷೇತ್ರದ ಸದಸ್ಯೆ ತನುಜಾ ರಘು -ಜೆಡಿಎಸ್‌, ಅಬ್ಲೂಡು ಕ್ಷೇತ್ರದ ಬಂಕ್‌ ಮುನಿಯಪ್ಪ -ಜೆಡಿಎಸ್‌, ಗಂಜಿಗುಂಟೆ ಕ್ಷೇತ್ರದ ಸದಸ್ಯ ಜಯರಾಮರೆಡ್ಡಿ -ಜೆಡಿಎಸ್‌, ಚಿಕ್ಕಬಳ್ಳಾಪುರದ ಮಂಡಿಕಲ್‌ ಕ್ಷೇತ್ರದ ಪಿ.ಎನ್‌.ಕೇಶವರೆಡ್ಡಿ -ಕಾಂಗ್ರೆಸ್‌, ಕೈ ಎತ್ತಿದರು.

ಪ್ರಕಾಶ್‌ ಪರ ಮತ ಹಾಕಿದ 13 ಮಂದಿ: ಗೌರಿಬಿದನೂರು ಹೊಸೂರು ಕ್ಷೇತ್ರದ ಸದಸ್ಯ ಎಚ್‌.ವಿ.ಮಂಜುನಾಥ -ಕಾಂಗ್ರೆಸ್‌, ವಿಧುರಾಶ್ವತ್ಥ ಕ್ಷೇತ್ರದ ಸದಸ್ಯೆ ಪ್ರಮೀಳಾ -ಕಾಂಗ್ರೆಸ್‌, ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ -ಕಾಂಗ್ರೆಸ್‌, ಡಿ.ಪಾಳ್ಯದ ಕ್ಷೇತ್ರದ ಸದಸ್ಯೆ ಎ.ಅರುಂಧತಿ -ಕಾಂಗ್ರೆಸ್‌, ಶಿಡ್ಲಘಟ್ಟದ ದಿಬ್ಬೂರಹಳ್ಳಿ ಕ್ಷೇತ್ರದ ಸದಸ್ಯ ಕೆ.ಎಂ.ಸತೀಶ್‌ -ಕಾಂಗ್ರೆಸ್‌ ಚಿಕ್ಕಬಳ್ಳಾಪುರದ ಮಂಚನಬಲೆ ಕ್ಷೇತ್ರದ ಕವಿತಾ ಕೃಷ್ಣಮೂರ್ತಿ -ಕಾಂಗ್ರೆಸ್‌, ಚಿಂತಾಮಣಿ ತಾಲೂಕಿನ ಊಲವಾಡಿ ಕ್ಷೇತ್ರದ ಸದಸ್ಯ ಈರುಳ್ಳಿ ಶಿವಣ್ಣ – ಕಾಂಗ್ರೆಸ್‌, ಕೋನಪಲ್ಲಿ ಕ್ಷೇತ್ರದ ಎನ್‌.ಶ್ರೀನಿವಾಸ್‌ -ಕಾಂಗ್ರೆಸ್‌, ಭೂಮಿಟ್ಟಹಳ್ಳಿ ಕ್ಷೇತ್ರದ ಸದಸ್ಯೆ ಸುನಂದಮ್ಮ -ಕಾಂಗ್ರೆಸ್‌, ಬಟ್ಲಹಳ್ಳಿ ಕ್ಷೇತ್ರದ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ -ಕಾಂಗ್ರೆಸ್‌, ಕೈವಾರ ಕ್ಷೇತ್ರದ ಸದಸ್ಯೆ ಪವಿತ್ರ -ಕಾಂಗ್ರೆಸ್‌ ಬಾಗೇಪಲ್ಲಿ ತಾಲೂಕಿನ ಗೂಳೂರು ಕ್ಷೇತ್ರದ ಸದಸ್ಯ ನರಸಿಂಹಪ್ಪ -ಕಾಂಗ್ರೆಸ್‌ ಕೈ ಮೇಲೆ ಎತ್ತಿದರು.

ವಿಪ್‌ಗೂ ಡೋಂಟ್‌ ಕೇರ್‌ ಎಂದ ಕೈ ಸದಸ್ಯರು: ಜಿಪಂ ಅಧ್ಯಕ್ಷರ ಚುನಾವಣೆಯನ್ನು ಪ್ರತಿಷ್ಠೆಯಾಗಿದ್ದ ಪರಿಗಣಿಸಿದ್ದ ಕಾಂಗ್ರೆಸ್‌ ನಾಯಕರು, ಅಡ್ಡ ಮತದಾನ ತಡೆಯಲೆಂದು ವಿಪ್‌ ಜಾರಿ ಮಾಡಿದ್ದರು. ಆದರೆ, ವಿಪ್‌ ಪಡೆದುಕೊಂಡೇ 8 ಮಂದಿ ಕಾಂಗ್ರೆಸ್‌ ಸದಸ್ಯರು ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿಕ್ಕನರಸಿಂಹಯ್ಯ ಅವರನ್ನು ಬೆಂಬಲಿಸಿದರು. ಇನ್ನೂ ವಿಪ್‌ ನೀಡದಿದ್ದರೂ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಜಿ ಶಾಸಕರ ಬೆಂಬಲಿತ ಕಾಂಗ್ರೆಸ್‌ನ ಜಿಪಂ ಸದಸ್ಯರು5 ಮಂದಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸಿದರು.

ಕೈ ನಾಯಕರಿಗೆ ತೀವ್ರ ಮುಖಭಂಗ: ಜಿಪಂ ಅಧ್ಯಕ್ಷ ಸ್ಥಾನವನ್ನು ತೀವ್ರ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಬಂಡಾಯ ಕಾಂಗ್ರೆಸ್‌ಗೆ ಗೆಲುವು ಸಾಧಿಸಿರುವುದು ಸಹಜವಾಗಿಯೇ ತೀವ್ರ ಮುಖಭಂಗ ಉಂಟು ಮಾಡಿದೆ. ಮಾಜಿ ಸಚಿವರಾದ ವಿ.ಮುನಿಯಪ್ಪ, ಎನ್‌.ಎಚ್‌.ಶಿವಶಂಕರರೆಡ್ಡಿ, ಮಾಜಿ ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ ಕಾಂಗ್ರೆಸ್‌ ಗೆಲುವಿಗೆ ಎಷ್ಟೇ ಪ್ರಯತ್ನಿಸಿದರೂ ಫ‌ಲ ಕೊಟ್ಟಿಲ್ಲ. ಹೀಗಾಗಿ ಸಂಖ್ಯಾ ಬಲ ಇದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗೆ ಸೋಲಾಗಿರುವುದು ಗೌರಿಬಿದನೂರು ಶಾಸಕರಾದ ಶಿವಶಂಕರರೆಡ್ಡಿ ನೇತೃತ್ವದ ಕಾಂಗ್ರೆಸ್‌ ನಾಯಕರ ಕೂಟಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಜೊತೆಗೆ ಮಂಚೇನಹಳ್ಳಿ ಕ್ಷೇತ್ರದ ಸದಸ್ಯ ಪ್ರಕಾಶ್‌ರನ್ನು ಜಿಪಂ ಅಧ್ಯಕ್ಷರನ್ನಾಗಿ ಮಾಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಕಾಂಗ್ರೆಸ್‌ ನಾಯಕರ ತಂತ್ರ ವಿಫ‌ಲವಾಗಿದೆ.

ಡಾ.ಕೆ.ಸುಧಾಕರ್‌ಗೆ ಖುಷಿ..: ಜಿಪಂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗೆ ಸೋಲಾಗಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿರುವುದಕ್ಕೆ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ಗೆ ತೀವ್ರ ಖುಷಿ ತಂದು ಕೊಟ್ಟಿದೆ. ಈ ಮೂಲಕ ರಾಜಕೀಯವಾಗಿ ಸಿಕ್ಕ ಗೆಲುವು ಎಂದೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿಂಬಿತವಾಗಿದೆ. ಜೊತೆಗೆ ಸುಧಾಕರ್‌ ತಂದೆ ಪಿ.ಎನ್‌.ಕೇಶವರೆಡ್ಡಿ ಕೂಡ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಚಿಕ್ಕನರಸಿಂಹಯ್ಯಗೆ ಮತ ಹಾಕಿ ಗಮನ ಸೆಳೆದರು. ಅದರಲ್ಲೂ ಜಿಪಂ ಅಧ್ಯಕ್ಷರ ಚುನಾವಣೆ ಶಿವಶಂಕರರೆಡ್ಡಿ ಹಾಗೂ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್‌ ನಡುವೆ ರಾಜಕೀಯವಾಗಿ ಸಾಕಷ್ಟು ಪ್ರತಿಷ್ಠೆಯ ವಿಷಯವಾಗಿತ್ತು. ಹೀಗಾಗಿ ಜಿಪಂನಲ್ಲಿ ಕೈಗೆ ಆಗಿರುವ ಸೋಲು ಚಿಕ್ಕಬಳ್ಳಾಪುರ ಉಪ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದೇ ಹೇಳಲಾಗುತ್ತಿದೆ.

ಬಂಡಾಯ ಸದಸ್ಯರು ಕೈ ಹಿಡಿದರೂ ಫ‌ಲ ಸಿಗಲಿಲ್ಲ: ಜಿಪಂ ಅಧ್ಯಕ್ಷರ ಚುನಾವಣೆ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಕಳೆದ ಬಾರಿ ಜಿಪಂ ಅಧ್ಯಕ್ಷರಾಗಿದ್ದ ಎಚ್‌.ವಿ.ಮಂಜುನಾಥ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಚಿಂತಾಮಣಿಯ 5 ಮಂದಿ ಕಾಂಗ್ರೆಸ್‌ನ ಜಿಪಂ ಸದಸ್ಯರು ಈ ಬಾರಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಪಿ.ಎನ್‌.ಪ್ರಕಾಶ್‌ ಪರ ಬ್ಯಾಟಿಂಗ್‌ ನಡೆಸಿದ್ದು ವಿಶೇಷವಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಶಿಡ್ಲಘಟ್ಟದ ಮೂವರು ಹಾಗೂ ಚಿಕ್ಕಬಳ್ಳಾಪುರದ ಇಬ್ಬರು ಸೇರಿ ಒಟ್ಟು ಐದು ಮಂದಿ ಜೆಡಿಎಸ್‌ ಸದಸ್ಯರು, ಬಿಜೆಪಿ, ಸಿಪಿಎಂ, ಕಾಂಗ್ರೆಸ್‌ನ 8 ಮಂದಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಿದ್ದರಿಂದ ಚಿಕ್ಕನರಸಿಂಹಯ್ಯ ಸುಲಭವಾಗಿ ಜಿಪಂ ಗದ್ದುಗೆ ಏರುವಂತೆ ಮಾಡಿತು.

ಸದಸ್ಯರಿಗೆ ಕರೆ ಮಾಡಿದ್ದ ಜೆಡಿಎಸ್‌ ವರಿಷ್ಠರು: 14 ತಿಂಗಳ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಕಳೆದುಕೊಂಡು ಕಾಂಗ್ರೆಸ್‌ ವಿರುದ್ಧ ಕೊತಕೊತ ಕುದಿಯುತ್ತಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡೆಸಿದ ರಾಜಕೀಯ ತಂತ್ರಗಾರಿಕೆಗೆ ಚಿಕ್ಕಬಳ್ಳಾಪುರ ಜಿಪಂನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಗಿರಿ ಕಳೆದುಕೊಳ್ಳುವಂತಾಗಿದೆ. ಮಂಗಳವಾರ ಮಧ್ಯರಾತ್ರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಚಿಕ್ಕನರಸಿಂಹಯ್ಯ, ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರ ಪರಿಣಾಮ ಜೆಡಿಎಸ್‌ ವರಿಷ್ಠರು ಪಕ್ಷದ ಸದಸ್ಯರಿಗೆ ಕರೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡದೇ ಚಿಕ್ಕನರಸಿಂಹಯ್ಯ ಅವರನ್ನು ಬೆಂಬಲಿಸಬೇಕೆಂದು ಸೂಚಿಸಿದರ ಪರಿಣಾಮ ರಾಜಕೀಯ ಲೆಕ್ಕಚಾರ ತಲೆಕೆಳಗಾದವು. ಈ ವೇಳೆ ಚಿಕ್ಕನರಸಿಂಹಯ್ಯಗೆ ವಿಧಾನ ಪರಿಷತ್ತು ಸದಸ್ಯ ಸಿ.ಆರ್‌.ಮನೋಹರ್‌ ಬೆಂಗಾವಲಾಗಿ ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next