ನಾನು ಆಗಿನ್ನೂ ಬಹಳ ಚಿಕ್ಕವಳು. ಗೌರಿ ಗಣೇಶನ ಹಬ್ಬ ಬಂತೆಂದರೆ ಸಾಕು; ನಮ್ಮ ಸುತ್ತಲಿನ ಹಾಗೂ ನನ್ನ ಸಹಪಾಠಿಗಳ ಮನೆಗಳಲ್ಲಿ ಗಣೇಶನನ್ನು ಕೂರಿಸಿ, ಪ್ರತಿ ದಿನ ನೈವೇದ್ಯಕ್ಕೆ ಸಿಹಿತಿಂಡಿಗಳನ್ನು ಇಟ್ಟು ಪೂಜಿಸಿ ಸಂಭ್ರಮ ಪಡುತ್ತಿದ್ದರು. ನನಗೂ, ಮನೆಯಲ್ಲಿ ಗಣಪತಿ ಕೂರಿಸಬೇಕೆಂಬ ಆಸೆ. ನಮ್ಮ ಮನೆಯಲ್ಲಿ ಹಬ್ಬವನ್ನೇನೋ ಆಚರಿಸುತ್ತಿದ್ದರು. ಆದರೆ ಗಣಪತಿ ಕೂಡಿಸಿ ಮಾಡುತ್ತಿರಲಿಲ್ಲ. ಅಪ್ಪ-ಅಮ್ಮ ನನ್ನು ಕೇಳಿದರೆ, ನಮ್ಮಲ್ಲಿ ಆ ಪದ್ದತಿ ಇಲ್ಲ, ಹಾಗಾಗಿ ನಾವು ಗಣೇಶನನ್ನು ಕೂರಿಸುವಂತಿಲ್ಲ ಅನ್ನುತ್ತಿದ್ದರು.
ಏನು ಮಾಡುವುದು? ಆಗ ನಾನು, ನನ್ನ ಸ್ನೇಹಿತೆಯರನ್ನೆಲ್ಲಾ ಸೇರಿಸಿಕೊಂಡು ಕೆರೆಯ ಬಳಿ ಹೋಗಿ ಮಣ್ಣು ತಂದು, ಅದನ್ನು ಚೆನ್ನಾಗಿ ಕಿವುಚಿ ಸೊಂಡಿಲು, ಕಣ್ಣು ಕಿವಿಗಳನ್ನು ಇಟ್ಟು, ನಮ್ಮ ಕಲ್ಪನೆಯ ಗಣೇಶನನ್ನು ತಯಾರಿಸಿ, ಅದನ್ನು ನಮ್ಮ ಮನೆಯ ಹಿತ್ತಿಲಲ್ಲಿ ಕೂರಿಸಿದೆವು. ಮನೆಯಲ್ಲಿ ನಮಗೆ ಕೊಟ್ಟ ಊಟ, ತಿಂಡಿಯನ್ನು ತಂದು ಗಣೇಶನಿಗೆ ನೈವೇದ್ಯ ಮಾಡಿ, ನಂತರ ನಾವೆಲ್ಲರೂ ಅದನ್ನು ಹಂಚಿ ತಿಂದು ಸಂಭ್ರಮ ಪಟ್ಟೆವು.
ದಿನಾಲೂ ಹೀಗೆ ನಡೆಯುತ್ತಿತ್ತು. ಕೊನೆಗೆ ಗಣೇಶನನ್ನು ನೀರಿಗೆ ಬಿಡಬೇಕಲ್ಲ. ಯಾವಾಗ, ಹೇಗೆ? ಇಂಥ ದಿವಸವೇ ನೀರಿಗೆ ಬಿಡಬೇಕು ಅನ್ನೋದೆಲ್ಲ ತೀರ್ಮಾನ ಮಾಡುವುದು ಹೇಗೆ ಅನ್ನೋ ಗೊಂದಲ ಶುರುವಾಯಿತು. ಆ ಸಮಸ್ಯೆ, ಸರಳವಾಗಿ ಪರಿಹಾರವೂ ಆಯ್ತು. ಹೇಗೆಂದರೆ, ನಮ್ಮೂರಿನ ಟೌನ್ ಹಾಲ್ನಲ್ಲಿ ಗಣೇಶನನ್ನು ನೀರಿಗೆ ಬಿಟ್ಟ ನಂತರ ನಾವೂ ನೀರಿಗೆ ಬಿಟ್ಟು ಬಿಡೋಣ ಅಂತ ತೀರ್ಮಾನಿಸಿದೆವು. ಅಲ್ಲಿಯ ಕಾರ್ಯ ಕ್ರಮಗಳನ್ನು ಗಮನಿಸುತ್ತಿದ್ದೆವು.
ಸರಿ, ಟೌನ್ ಹಾಲ್ ಗಣಪನನ್ನು ಬಿಟ್ಟ ಮರುದಿನವೇ ನಮ್ಮ ಗಣೇಶನನ್ನು ನೀರಿಗೆ ಬಿಡುವ ಕಾರ್ಯಕ್ರಮ ಶುರು. ಎಲ್ಲರ ಮನೆಯಿಂದ ಪೂಜಾ ಸಾಮಗ್ರಿ ಹಾಗೂ ನೈವೇದ್ಯಕ್ಕೆ ಊಟ-ತಿಂಡಿ ರವಾನೆ ಮಾಡಿಕೊಂಡೆವು. ಅಷ್ಟೇ ಅಲ್ಲ. ನಮ್ಮ ಡ್ಯಾನ್ಸ್, ಹಾಡಿನ ಕಾರ್ಯಕ್ರಮವಂತೂ ಹೇಳತೀರದು. ನಂತರ ನೈವೇದ್ಯವನ್ನು ಎಲ್ಲರೂ ಹಂಚಿ ತಿಂದು ಗಣಪನನ್ನು ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ಎಲ್ಲರ ತಲೆಯ ಮೇಲೂ ಸ್ವಲ್ಪ, ಸ್ವಲ್ಪ ದೂರ ಹೊತ್ತುಕೊಂಡು ಹೋಗಿ ಪಾತ್ರೆ ಸಮೇತವಾಗಿ ಗಣೇಶನನ್ನು ನೀರಿಗೆ ಬಿಟ್ಟು ಬಂದೆವು.
ಹೀಗೆ ಬಿಟ್ಟು ಬರುವಾಗ ಗಣೇಶನನ್ನು ಮಾತ್ರವಲ್ಲದೇ, ಪಾತ್ರೆಯನ್ನೂ ಕೆರೆಯ ನೀರಿಗೆ ಬಿಟ್ಟು ಬಂದಿದ್ದು ಅಮ್ಮನಿಗೆ ಹೇಗೋ ತಿಳಿಯಿತು. ಅವಳು ನಾಲ್ಕು ಬಾರಿಸಿದಳು, ಪೆಟ್ಟು ಬೀಳುತ್ತಿದ್ದಂತೆ, ನೆತ್ತಿಗೇರಿದ್ದ ಸಂಭ್ರಮ ಜರ್ರನೆ ಇಳಿದು ಹೋಯಿತು. ಇದಾಗಿ ಸುಮಾರು 35 ವರ್ಷಗಳೇ ಕಳೆದರೂ ಗಣೇಶನ ಹಬ್ಬ ಬಂದಾಗ ಹಳೆಯದೆಲ್ಲಾ ನೆನಪಾಗಿ ನಗು ಬರುತ್ತದೆ. ಆ ಮುಗ್ಧತೆಯಲ್ಲಿ ಒಂದು ವಿಶೇಷತೆ ಇತ್ತಲ್ಲವೇ?
ರತ್ನ ಅರಕಲಗೂಡು