Advertisement

ಹೃದಯವಿಲ್ಲದೆ 10 ದಿನ ಬದುಕಿದ್ದವಗೆ ಸಿಕ್ಕಿತು ಜೀವ

12:11 PM Feb 22, 2017 | Team Udayavani |

ಬೆಂಗಳೂರು: ಹೃದಯವೇ ನಿಂತು ಹೋದರೂ, ಕೃತಕ ಹೃದಯದ ನೆರವಿನ ಮೂಲಕ ವ್ಯಕ್ತಿಯನ್ನು ಕೆಲಕಾಲ ಜೀವಂತವಾಗಿಡಬಹುದು. ಹೌದು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ವೈದ್ಯರು ಇಂತಹದೊಂದು ಸಾಹಸ ಮಾಡಿದ್ದು, ವೈದ್ಯಲೋಕದಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ. 

Advertisement

ಹೃದಯ ಬಡಿತ ಸ್ತಬ್ಧಗೊಂಡರೂ, 19 ವರ್ಷದ ಯುವಕನೊಬ್ಬ ಕಳೆದ 10 ದಿನಗಳಿಂದ ಕೃತಕ ಹೃದಯದ ನೆರವಿನಿಂದ ರಾಮಯ್ಯ ನಾರಾಯಣ ಆಸ್ಪತ್ರೆಯಲ್ಲಿ ಜೀವಂತವಾಗಿದ್ದಾನೆ. ಯುವಕನಿಗೆ ರಾಮಯ್ಯ ನಾರಾಯಣ ಹೃದಯ ಕೇಂದ್ರದ ಹೃದಯ ತಜ್ಞ ವೈದ್ಯರಾದ ಡಾ.ಯು.ಎಂ. ನಾಗಮಲೇಶ್‌, ಡಾ.ಜ್ಯುಲಿಯಸ್‌ ಪುನ್ನೆನ್‌, ಡಾ.ರವಿಶಂಕರ್‌ ಶೆಟ್ಟಿ, ಡಾ.ರವಿನಾಯಕ್‌ ಮತ್ತು ಡಾ.ಶೀಲ್ಪ ಸೇರಿದಂತೆ ವೈದ್ಯಕೀಯ ತಂಡದವರು ಕೃತಕ ಹೃದಯ ಅಳವಡಿಸಿದ್ದಾರೆ. 

ಕೃತಕ ಹೃದಯದ ನೆರವಿನಿಂದ 10 ದಿನಗಳಿಂದ ಜೀವಂತವಿದ್ದ ಆ ಯುವಕನಿಗೆ ಇದೀಗ ಮೂಡಬಿದಿರೆಯ ಸತೀಶ್‌ ಎಂಬುವವರ ಜೀವಂತ ಹೃದಯವನ್ನು ಮಂಗಳವಾರ ಜೋಡಿಸಲಾಗಿದೆ.  ಮಂಗಳೂರಿನಿಂದ ರಾತ್ರಿ 7.30ರ ಸುಮಾರಿಗೆ ಹೊರಟ ಜೀವಂತ ಹೃದಯ ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ 8.30ರ ಸುಮಾರಿಗೆ ತಲುಪಿತು.

ತಕ್ಷಣ ಕಾರ್ಯೋನ್ಮುಖರಾದ ವೈದ್ಯರ ತಂಡ ತಡರಾತ್ರಿವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಜೀವಂತ ಹೃದಯವನ್ನ ಯುವಕನಿಗೆ ಜೋಡಿಸಿದ್ದಾರೆ. ಹೃದಯ ಪಡೆದ ಯುವಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. 

ಫೆ.18ರಂದು ಮಂಗಳೂರಿನಲ್ಲಿ 28 ವರ್ಷದ ಯುವಕನೊಬ್ಬ ರಸ್ತೆ ಅಪಘಾತಕ್ಕೀಗಿದ್ದ. ತಕ್ಷಣ ಆತನನ್ನು ಅಲ್ಲಿನ ಎ.ಜೆ. ಆಸ್ಪತ್ರೆಗೆ ದಾಖಲಿಸ ಲಾಯಿತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಮಾಹಿತಿ ಸಂಗ್ರಹಿಸಿದ ಝೆಡ್‌ಸಿಸಿಕೆ ಸಿಬ್ಬಂದಿ ತಕ್ಷಣ ಯುವಕನ ಪೋಷಕರನ್ನು ಸಂಪರ್ಕಿಸಿ ಅಂಗಾಂಗ ದಾನಕ್ಕೆ ಮನವೊಲಿಸಿದರು. 

Advertisement

ಮಂಗಳವಾರ ರಾತ್ರಿ 8.30ರ ಸುಮಾರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಿ ಜೀವಂತ ಹೃದಯವನ್ನು, ಮುಕ್ತ ಸಂಚಾರ ಮಾರ್ಗದ ಮೂಲಕ ಕೆಲವೇ ತಾಸಿನಲ್ಲಿ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ತಲುಪುವಂತೆ  ಸಂಚಾರ ಪೊಲೀಸರು ಅನುವು ಮಾಡಿಕೊಟ್ಟರು. 

ಹೃದಯವಿಲ್ಲದೆ 3 ತಿಂಗಳಿರಬಹುದು!: ಕೃತಕ ಹೃದಯವನ್ನು ಯುವಕನ ದೇಹದ ಹೊರಭಾಗದಲ್ಲಿ ಜೋಡಿಸಲಾಗಿತ್ತು. ಪಂಪ್‌ ಅಳವಡಿಸುವ ಮೂಲಕ ಹೃದಯದಿಂದ ದೇಹಕ್ಕೆ ರಕ್ತ ಸಂಚಲನೆಯಾಗುವಂತೆ ವೈದ್ಯರು ರಕ್ತನಾಳಗಳನ್ನು ಅದಕ್ಕೆ ಅಳವಡಿಸಿದ್ದರು. ಕೃತಕ ಹೃದಯದ ಮೂಲಕ ಕನಿಷ್ಠ ಒಂದು ತಿಂಗಳವರೆಗೆ ವ್ಯಕ್ತಿ ಜೀವಿಸಬಹುದು. ಒಂದು ವೇಳೆ ಜೀವಂತ ಹೃದಯ ಸಿಗದಿದ್ದರೆ ಎರಡರಿಂದ ಮೂರು ತಿಂಗಳವರೆಗೆ ಕೃತಕ ಹೃದಯದ ಮೂಲಕ ಜೀವಂತ ಇರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಯೆಮೆನ್‌ ವ್ಯಕ್ತಿಗೆ ನಗರದಲ್ಲಿ ಶಸ್ತ್ರಚಿಕಿತ್ಸೆ 
ಬೆಂಗಳೂರು:
ಯೆಮೆನ್‌ನಲ್ಲಿ ನಡೆದಿದ್ದ ನಾಗರಿಕ ಯುದ್ಧದಲ್ಲಿ ಗುಂಡೇಟಿನಿಂದ ದೇಹದ ಬಲ ಕಳೆದುಕೊಂಡಿದ್ದ 42 ವರ್ಷದ ವ್ಯಕ್ತಿಗೆ ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. 

2015ರಲ್ಲಿ ನಡೆದ ಯುದ್ಧದಲ್ಲಿ ಮಹಮ್ಮದ್‌ ಸುಯಿದ್‌ ಅಹಮ್ಮದ್‌ ಅವರ ಬೆನ್ನುಹುರಿಗೆ ಗುಂಡು ತಗುಲಿ ಅವರು  ವ್ಹೀಲ್‌ ಚೇರ್‌ನಲ್ಲಿ ಕೂರುವ ಸ್ಥಿತಿ ನಿರ್ಮಾಣವಾಗಿತ್ತು. 2016ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಅವರಿಗೆ ಸಕ್ರಾ ವರ್ಲ್ಡ್ ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದರು. ಫಿಸಿಕಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ. ಮಹೇಶ್ವರಪ್ಪ ನೇತೃತ್ವದ ವೈದ್ಯ ತಂಡ ಅಹಮ್ಮದ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. 

ಗುಂಡೇಟಿನಿಂದಾಗಿ  ಅವರ ನರಕೋಶಕ್ಕೆ ಪೆಟ್ಟುಬಿದ್ದಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಮೂರು ತಿಂಗಳ ಕಾಲ ಪುನಃ ಫಿಜಿಯೋಥೆರಪಿ ಮಾಡಲಾಗಿದೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರವೇ ಯೆಮೆನ್‌ಗೆ ಮರಳಲಿದ್ದಾರೆ ಎಂದು ಆಸ್ಪತ್ರೆಯ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಹಿರಿಯ ಕನ್ಸಲ್ಟೆಂಟ್‌ ಡಾ. ಮೆಂಡೋನ್ಸಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next