ಬೆಂಗಳೂರು: ಪದವೀಧರ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಠ್ಯಕ್ರಮಕ್ಕೆ ಸಂಬಂಧಿಸದ ಪ್ರಶ್ನೆಗಳು ಬಂದಿವೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (6ರಿಂದ 8ನೇ ತರಗತಿ) ಖಾಲಿ ಇರುವ ಸುಮಾರು 10,600 ಹುದ್ದೆಗಳಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಲ್ಲಿ 4,655 ಇಂಗ್ಲಿಷ್ ಶಿಕ್ಷಕರ ಹುದ್ದೆಗೆ ಶನಿವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಲವು ಗೊಂದಲಗಳಿದ್ದವು ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.
150 ಅಂಕಗಳ ಪರೀಕ್ಷೆಯಾಗಿದ್ದರೂ, ಪ್ರಶ್ನೆ ಪತ್ರಿಕೆಯ ಖಂಡಿಕೆಯಲ್ಲಿ 200 ಅಂಕಗಳ ನಮೂದನೆ ಮಾಡಲಾಗಿದೆ. ಅಲ್ಲದೆ, ಬಹು ಆಯ್ಕೆಯ ಪ್ರಶ್ನೆಗಳಿಗೆ 50 ಅಂಕ ಎಂದು ಒಂದು ಕಡೆಯಲ್ಲಿ ನಮೂದಿಸಿ, ಇನ್ನೊಂದು ಕಡೆಯಲ್ಲಿ ವಿವರಣಾತ್ಮಕವಾಗಿ ಬರೆಯಬೇಕಿರುವ 34 ಪ್ರಶ್ನೆಗಳನ್ನು ನೀಡಲಾಗಿದೆ.
ಅದಕ್ಕೂ 150 ಅಂಕ ಎಂದು ಉಲ್ಲೇಖೀಸಿದ್ದಾರೆ. ಯಾವ ಪ್ರಶ್ನೆಗೆ ಎಷ್ಟು ಅಂಕ ಎಂಬುದೇ ಸ್ಪಷ್ಟವಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಚಾಲಕ ತೋಳಿ ಬರ್ಮಣ್ಣ ಆರೋಪಿಸಿದರು.
ಕಳೆದ ಬಾರಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೂ, ಈ ಬಾರಿಯ ಪರೀಕ್ಷೆಗೂ ಹಲವು ವ್ಯತ್ಯಾಸಗಳಿವೆ. ಪರೀಕ್ಷಾ ಮಾದರಿಯನ್ನು ಸಂಪೂರ್ಣವಾಗಿ ಬದಲಿಸಿದ್ದಾರೆ. ಪರೀಕ್ಷೆಗೆ ಅಭ್ಯರ್ಥಿಗಳು ತಯಾರಾದ ಬಗೆಗೂ, ಪರೀಕ್ಷಾ ಮಾದರಿಗೂ ಸಾಕಷ್ಟು ವ್ಯತ್ಯಾಸವಾಗಿದೆ.
ಇದರ ಜತೆಗೆ ಪಠ್ಯಕ್ರಮಕ್ಕೆ ಸಂಬಂಧಿಸದ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಇಂಗ್ಲಿಷ್ ವ್ಯಾಕರಣ, ಟೆಸ್ಟ್ ಮತ್ತು ಕಾರ್ಯ ವಿಧಾನವನ್ನು ಬದಲಾಯಿಸಿ ಕೇಳಿದ್ದಾರೆ. ಇಂಗ್ಲಿಷ್ ಪರೀಕ್ಷೆ ಸಂಪೂರ್ಣ ಗೊಂದಲದ ಗೂಡಾಗಿದೆ ಎಂದು ದೂರಿದರು.