Advertisement

ಗುಜರಿ ಅಧಿಸೂಚನೆಗೆ ಅಪಸ್ವರ

12:03 PM Dec 10, 2017 | Team Udayavani |

ಬೆಂಗಳೂರು: ಟು ಸ್ಟ್ರೋಕ್‌ ಆಟೋಗಳು ನಗರಕ್ಕೆ ತಲೆನೋವಾಗಿವೆ, ಕಳಂಕವಾಗಿವೆ, ಮಾಲಿನ್ಯ ಹೆಚ್ಚಿಸಿವೆ, ಜನರ ಆರೋಗ್ಯ ಕೆಡಿಸುತ್ತಿವೆ ಎಂದೆಲ್ಲಾ ಕಂಪ್ಲೇಂಟ್‌ಗಳನ್ನು ಹೇಳಿ, 2 ಸ್ಟ್ರೋಕ್‌ ಆಟೋಗಳನ್ನು ಗುಜರಿ ಸೇರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಟೋ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

“ದುಡಿಮೆಗೆ ಇರುವ ಏಕೈಕ ಮೂಲಗಳಾಗಿರುವ ಆಟೋಗಳನ್ನು ಗುಜರಿಗೆ ಹಾಕಿ’ ಎಂದರೆ ನಮ್ಮ, ಕುಟುಂಬದ ಹೊಟ್ಟೆ ಪಾಡೇನು? ಈಗ ಆಟೋಗಳ ಬೆಲೆ ಎಷ್ಟಿದೆ ಅಂತಾ ನಿಮಗೆ ಗೊತ್ತಿದೆಯಾ? ಹೆಚ್ಚುವರಿ ಜಿಎಸ್‌ಟಿ ಹೇರಿಕೆಯಿಂದಾಗಿ ಚಾಲಕರು ಆಟೋ ರೇಟು ಕೇಳೇ ಕುಸಿದು ಬೀಳುತ್ತಿದ್ದಾರೆ. ಅಂಥದರಲ್ಲಿ ಇರೋ ಆಟೋವನ್ನು ಗುಜರಿಗೆ ಹಾಕಿ ಎಂದರೆ ಏನರ್ಥ?

ಹಾಗಾದ್ರೆ ಬೆಂಗಳೂರಲ್ಲಿ ಆಟೋಗಳನ್ನ ಬಿಟ್ಟರೆ ಬೇರಾವ ವಾಹನಗಳಿಂದಲೂ ಮಾಲಿನ್ಯ ಆಗುತ್ತಿಲ್ಲವಾ? ಯಾವ ವಾಹನವೂ ಹೆಚ್ಚು ಹೊಗೆ ಬಿಡುವುದೇ ಇಲ್ಲವಾ? ಬೇರೆ ವಾಹನಗಳಿಗಿಲ್ಲದ ನೀತಿ ಆಟೋ ರಿಕ್ಷಾಗಳಿಗೇ ಏಕೆ? ಎಂದು ಅಖೀಲ ಕರ್ನಾಟಕ ರಾಜ್ಯ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಸಾರಿಗೆ ಇಲಾಖೆ ಹಾಗೂ ಸರ್ಕಾರವನ್ನು ಪ್ರರ್ಶನಿಸುತ್ತಿದೆ.

ಆರಂಭದಲ್ಲೇ ಅಪಸ್ವರ: ಮಾಲಿನ್ಯಕ್ಕೆ ಕಾರಣವಾಗಿರುವ 2 ಸ್ಟ್ರೋಕ್‌ ಆಟೋಗಳನ್ನು ಗುಜರಿಗೆ ಹಾಕಿ, 4 ಸ್ಟ್ರೋಕ್‌ ಆಟೋ ಖರೀದಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಆದೇಶದಂತೆ àಗಾಗಲೇ ಆಟೋಗಳನ್ನು ಗುಜರಿಗೆ ಸೇರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಆದರೆ ಶೇ.28ರಷ್ಟು ಜಿಎಸ್‌ಟಿ ವಿಧಿಸಿರುವ ಕಾರಣ ಆಟೋಗಳ ಬೆಲೆ ಹೆಚ್ಚಾಗಿದೆ. ಅದೂ ಅಲ್ಲದೆ, ಶೇ.90ರಷ್ಟು ಚಾಲಕರು ಈಗಾಗಲೇ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಆಟೋ ಕೊಂಡಿದ್ದಾರೆ. ಹೀಗಿರುವಾಗ, ಇರುವ ಆಟೋ ಮೂಲೆಗೆ ತಳ್ಳಿ ಹೊಸ ಆಟೋ ಖರೀದಿಸುವುದು ಸಾಧ್ಯವಲ್ಲ ಎಂದು ಆಟೋ ಚಾಲಕರು ಅಪಸ್ವರವೆತ್ತಿದ್ದಾರೆ.

Advertisement

ಹೊಸ ಆಟೋ ಕೊಳ್ಳಲು ಸರ್ಕಾರ 30 ಸಾವಿರ ರೂ. ಸಹಾಯಧನ ನೀಡುತ್ತಿದೆ. ಆದರೆ ಸಬ್ಸಿಡಿ ಹಣ ಯಾವುದಕ್ಕೂ ಸಾಲುವುದಿಲ್ಲ ಎಂದಿರುವ ಆಟೋ ಚಾಲಕರು, ಈ ಮೊತ್ತವನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಪ್ರಸ್ತಾವನೆ ತಿರಸ್ಕರಿಸಿದ ಸರ್ಕಾರ: “ಸಹಾಯಧನವನ್ನು 50 ಸಾವಿರ ರೂ.ಗೆ ಹೆಚ್ಚಿಸಬೇಕು ಎಂಬ ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ, ಈ ಕರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಈಗಾಗಲೇ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ವಾರದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ.

2 ಸ್ಟ್ರೋಕ್‌ ಆಟೋಗಳನ್ನು ಸಾðಪ್‌ ಮಾಡಲು ಬಜಾಜ್‌ ಸಂಸ್ಥೆ ಮುಂದೆಬಂದಿದ್ದು, ಗುಜರಿ ಕೇಂದ್ರವನ್ನೂ ತೆರೆದಿದೆ. ಇನ್ನೂ ಎರಡು ಸಂಸ್ಥೆಗಳು ಆಸಕ್ತಿ ತೋರಿದ್ದು, ಮಾರ್ಚ್‌ ಅಂತ್ಯಕ್ಕೆ 10 ಸಾವಿರ ಆಟೋಗಳನ್ನು ಗುಜರಿ ಸೇರಿಸುವ ಗುರಿಯಿದೆ. ಆಟೋ ಚಾಲಕರಿಂದ ಅಪಸ್ವರ ಕೇಳಿಬಂದಿದ್ದರೂ ಸರ್ಕಾರ ಅಧಿಸೂಚನೆ ಹೊರಡಿಸಿರುವ ಕಾರಣ ಕ್ರಮ ಕೈಗೊಳ್ಳುವುದು ಅನಿವಾರ್ಯ,’ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ಸ್ಪಷ್ಟಪಡಿಸಿದ್ದಾರೆ.

ಪ್ರಮಾಣಪತ್ರ ಕೊಡಬೇಕು: “ಆಟೋವನ್ನು ಗುಜರಿಗೆ ಹಾಕಿದ ಮಾತ್ರಕ್ಕೆ ಸಹಾಯಧನ ಸಿಗುವುದಿಲ್ಲ. ಅದನ್ನು ಗುಜರಿಗೆ ಹಾಕಿದ ಬಗ್ಗೆ ಪ್ರಮಾಣಪತ್ರ ಹಾಗೂ ಹೊಸ ಆಟೋ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ ನಂತರವೇ ಫ‌ಲಾನುಭವಿ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಇದೆಲ್ಲವೂ ಪಾರದರ್ಶಕವಾಗಿ ನಡೆಯಲಿದೆ,’ ಎಂದು ಆಯುಕ್ತರು ತಿಳಿಸಿದ್ದಾರೆ.

ನ್ಯಾಯಾಲಯದ ಮೊರೆ ಹೋಗ್ತೀವೆ: “ಗುಜರಿಗೆ ಹಾಕುವುದೇ ಆದರೆ ಹಳೆಯದಾಗಿರುವ ಎಲ್ಲ ಪ್ರಕಾರದ ವಾಹನಗಳಿಗೂ ಈ ನಿಯಮ ಅನ್ವಯಿಸಿ. ನಗರದಲ್ಲಿ ಪರಿಸರ ಮಾಲಿನ್ಯ ಉಂಟುಮಾಡುವಲ್ಲಿ ಆಟೋಗಳ ಜೊತೆ ಉಳಿದ ವಾಹನಗಳ ಪಾಲೂ ಇದೆ.

ಅಷ್ಟಕ್ಕೂ 2 ಸ್ಟ್ರೋಕ್‌ ಆಟೋಗಳು ಎಲ್‌ಪಿಜಿ ಸಹಾಯದಿಂದ ಚಲಿಸುತ್ತಿವೆ. ಹೀಗಾಗಿ ಅವುಗಳಿಂದಾಗುವ ಮಾಲಿನ್ಯವಾಗದು. ಆಟೋಗಳನ್ನು ಗುಜರಿಗೆ ತಳ್ಳಬೇಕೆಂಬ ಆದೇಶವನ್ನು ಸರ್ಕಾರ ಹಿಂಪಡೆಯದಿದ್ದರೆ ನ್ಯಾಯಾಲಯದ ಮೊರೆಹೋಗುತ್ತೇವೆ,’ ಎಂದು ಅಖೀಲ ಕರ್ನಾಟಕ ರಾಜ್ಯ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಅಬ್ಟಾಸ್‌ ತಿಳಿಸಿದ್ದಾರೆ.

“ನಗರದಲ್ಲಿ 20 ಸಾವಿರಕ್ಕೂ ಹೆಚ್ಚು 2 ಸ್ಟ್ರೋಕ್‌ ಆಟೋಗಳಿದ್ದು, ಸರ್ಕಾರದ ಈ ಆದೇಶದಿಂದ ಆ ಎಲ್ಲ ಕುಟುಂಬಗಳಿಗೂ ತೊಂದರೆಯಾಗಲಿದೆ. ಈಗಾಗಲೇ ಬಹುತೇಕ ಆಟೋ ಚಾಲಕರು ಖಾಸಗಿ ಲೇವದೇವಿದಾರರಿಂದ ಸಾಲ ಪಡೆದಿದ್ದಾರೆ. ನೂರಾರು ಮಂದಿ ಸಾಲ ಮರುಪಾವತಿಸಲು ಹರಸಾಹಸ ಪಡುತ್ತಿದ್ದಾರೆ. ಹೀಗಿರವಾಗ ಮತ್ತೆ ಅವರನ್ನು ಸಾಲದ ಸುಳಿಗೆ ಸಿಲುಕಿಸುವುದು ಎಷ್ಟು ಸರಿ?’ ಎಂದು ಅಬ್ಟಾಸ್‌ ಪ್ರಶ್ನಿಸಿದ್ದಾರೆ.

ಆಟೋ ಬೆಲೆ ಅಷ್ಟೇನೂ ಹೆಚ್ಚಾಗಿಲ್ಲ: ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್‌ ಹೊತ್ತೂಯ್ಯುವ ಆಟೋಗಳ ಬೆಲೆ 1.72 ಲಕ್ಷ ರೂ. ಇದೆ. ಪರ್ಮಿಟ್‌ಸಹಿತ 2.15 ಲಕ್ಷ ರೂ. ಆಗುತ್ತದೆ. ಜಿಎಸ್‌ಟಿಯಿಂದ ಆಟೋಗಳ ಬೆಲೆ 4ರಿಂದ 5 ಸಾವಿರ ರೂ. ಹೆಚ್ಚಾಗಿರಬಹುದು. ಇನ್ನು 10ರಿಂದ 15 ವರ್ಷಗಳಷ್ಟು ಹಳೆಯದಾಗಿರುವ 2 ಸ್ಟ್ರೋಕ್‌ ಆಟೋಗಳಿಗೆ ಪ್ರಸ್ತುತ ಸೆಕೆಂಡ್ಸ್‌ ಮಾರುಕಟ್ಟೆಯಲ್ಲಿ ಹೆಚ್ಚೆಂದರೆ 10 ಸಾವಿರ ರೂ. ಬೆಲೆ ಇದೆ. ಆದರೆ ಸರ್ಕಾರ 30 ಸಾವಿರ ನೀಡುತ್ತಿದೆ,’ ಎಂದು ಜಿಕೆ ಮೋಟರ್ನ ಕುಮಾರ ಗೌಡ ಹೇಳುತ್ತಾರೆ.

ಮೀಟರ್‌ ಮಾಫಿಯಾ ಕೈವಾಡವಿದೆ!: “2 ಸ್ಟ್ರೋಕ್‌ ಆಟೋಗಳ ಬದಲಿಗೆ 4 ಸ್ಟ್ರೋಕ್‌ ಆಟೋ ಖರೀದಿಸುವಂತೆ ಒತ್ತಡ ಹೇರುತ್ತಿರುವುದರ ಹಿಂದೆ ಮೀಟರ್‌ ಮಾಫಿಯಾದ ಕೈವಾಡವಿದೆ,’ ಎಂದು ಮೊಹಮ್ಮದ್‌ ಅಬ್ಟಾಸ್‌ ಆರೋಪಿಸಿದ್ದಾರೆ. “2 ಸ್ಟ್ರೋಕ್‌ ಆಟೋ ಜತೆ ಮೀಟರ್‌ ಕೂಡ ಗುಜರಿಗೆ ಹೋಗಲಿದೆ. ಹೊಸ ಆಟೋಗೆ ಹೊಸ ಮೀಟರ್‌ ಅಳವಡಿಸಬೇಕಾಗುತ್ತದೆ. 20 ಸಾವಿರ ಆಟೋಗಳಿಗೆ 20 ಸಾವಿರ ಮೀಟರ್‌ಗಳು ಮಾರಾಟವಾಗಲಿವೆ. ಹೀಗಾಗಿ ಇದರಲ್ಲಿ ಮೀಟರ್‌ ಕಂಪನಿಗಳ ಕೈವಾಡವಿರುವ ಶಂಕೆಯಿದೆ,’ ಎಂದಿದ್ದಾರೆ.

ಆಟೋ ಚಾಲಕರು ಹೇಳುವುದೇನು?
-ಜಿಎಸ್‌ಟಿ ಪರಿಣಾಮ ಈಗಾಗಲೇ ಹೆಚ್ಚಾಗಿರುವ ಆಟೋ ಬೆಲೆ
-ಹಾಲಿ ಇರುವ ಆಟೋಗೆ ಮಾಡಿದ ಸಾಲ ಇನ್ನೂ ತೀರಿಲ್ಲ
-ಸರ್ಕಾರ ನೀಡುವ ಸಹಾಯಧನ ಯಾವುದಕ್ಕೂ ಸಾಲಲ್ಲ
-30 ಸಾವಿರ ಸಹಾಯಧನವ 50 ಸಾವಿರಕ್ಕೆ ಹೆಚ್ಚಿಸಿದರೆ ನೋಡಬಹುದು
-ನಗರದಲ್ಲಿ ಮಾಲಿನ್ಯಕ್ಕೆ ಆಟೋಗಳಷ್ಟೇ ಕಾರಣವಲ್ಲ
-ಹಳೆಯದಾಗಿರುವ ಇತರ ವಾಹನಗಳನ್ನೂ ಗುಜರಿಗೆ ಹಾಕಿಸಿ
-ಅಧಿಸೂಚನೆ ಹಿಂದೆ ಮೀಟರ್‌ ಮಾಫಿಯಾ ಕೈವಾಡವಿದೆ
-ನಿಲುವಿನಿಂದ ಹಿಂದೆ ಸರಿಯದಿದ್ದರೆ ನ್ಯಾಯಾಲಯದ ಮೊರೆ

Advertisement

Udayavani is now on Telegram. Click here to join our channel and stay updated with the latest news.

Next