ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮತ್ತೂಂದು ಗುಸು ಗುಸು ಆಪ್ತ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಅಕ್ಟೋಬರ್ 31ರಂದು ಇಂದಿರಾಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಕಾರ್ಯಕ್ರಮದಲ್ಲಿ ವಲ್ಲಭಬಾಯ್ ಫೋಟೋ ಇಡುವ ವಿಚಾರದ ಸಂಭಾಷಣೆ ಇದಾಗಿದೆ. ಅಂದು ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯ ಅವರು ವಲ್ಲಭಬಾಯ್ ಪಟೇಲ್ ಅವರ ಫೋಟೋ ಇಡುವಂತೆ ಪಕ್ಕದಲ್ಲಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಕಿವಿಯಲ್ಲಿ ಹೇಳುತ್ತಾರೆ.
ಇದನ್ನೂ ಓದಿ:- ಬೆಳ್ಳಂ ಬೆಳಗ್ಗೆ ACB ಶಾಕ್ : ಕೃಷಿ ಇಲಾಖೆ ಟಿ.ಎಸ್.ರುದ್ರೇಶಪ್ಪ ಮನೆ ಮೇಲೆ ದಾಳಿ
ಆಗ, ಅವರ ಫೋಟೋ ಇಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಇದಕ್ಕೆ ಸಿದ್ದರಾಮಯ್ಯ ಅವರು, ಬಿಜೆಪಿ ಇದರ ಲಾಭ ತೆಗೆದುಕೊಳ್ಳುತ್ತೆ ಎಂದು ಎಚ್ಚರಿಸುತ್ತಾರೆ. ಆಗ, ಡಿ.ಕೆ.ಶಿವಕುಮಾರ್ ಅವರು ಫೋಟೋ ಇಡಲು ಸೂಚಿಸುತ್ತಾರೆ.
ನಂತರ ಪಟೇಲ್ ಅವರ ಫೋಟೋ ಇರಿಸಲು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳುತ್ತಾರೆ. ಅಲ್ಲಿದ್ದ ಸಿಬ್ಬಂದಿ ಇಂದಿರಾಗಾಂಧಿ ಫೋಟೋ ಪಕ್ಕದಲ್ಲೇ ಪಟೇಲ್ ಅವರ ಫೋಟೋ ಇಟ್ಟ ನಂತರ ಎರಡೂ ಫೋಟೋಗೆ ಕಾಂಗ್ರೆಸ್ ನಾಯಕರು ನಮಿಸುತ್ತಾರೆ.
ಈ ಸಂದರ್ಭದ ಆಡಿಯೊ ಹಾಗೂ ವಿಡಿಯೊ ವೈರಲ್ ಆಗಿದೆ. ಇದನ್ನು ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿ, ಪಟೇಲ್ ಅವರ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದು ದೂರಿದ್ದಾರೆ.