Advertisement
ರಾಮಚಂದ್ರಾಪುರ ಮಠದ ಗೋ ಪರಿಪಾಲನೆಯ ಸಂದೇಶದ ಫಲವಾಗಿ ಹತ್ತು ವರ್ಷಗಳ ಹಿಂದೆ ಗೋಪಾಲಕೃಷ್ಣ ಭಟ್ಟರು ಮಿಶ್ರ ತಳಿಯ ಹಸುಗಳ ಸಾಕಣೆಗೆ ಗುಡ್‌ಬೈ ಹೇಳಿ ದೇಸಿ ಹಸುಗಳ ಪಾಲನೆಯನ್ನು ವ್ರತವಾಗಿ ಸ್ವೀಕರಿಸಿದವರು. ಆಗ ಅಳಿದುಳಿದಿರುವ ದೇಸಿ ತಳಿಗಳ ಪೈಕಿ ಸಾಕಲು ಯೋಗ್ಯವೆಂದು ಅವರು ಪರಿಗಣಿಸಿದ್ದು ಗಿರ್ ತಳಿಯನ್ನು. ನೋಡಲು ಅತ್ಯಂತ ಸುಂದರವಾಗಿರುವ ಈ ಹಸುವಿಗೆ ನಮ್ಮ ದೇಶದ ತಳಿಗಳಲ್ಲೇ ಅತಿ ಹೆಚ್ಚು ರೋಗ ನಿರೋಧಕ ಶಕ್ತಿಇದೆ. ಕರುಳಿನ ಮತ್ತು ಉಷ್ಣವಲಯದ ರೋಗಗಳು, ಕೆಚ್ಚಲು ಬಾವು, ಕಾಲು ಬಾಯಿ ಜ್ವರದಂಥ ವೈರಾಣು ವ್ಯಾಧಿಗಳು ಕೂಡ ಅದನ್ನು ಸಮೀಪಿಸುವ ಸಂಭವ ವಿರಳ.
Related Articles
Advertisement
ಭೋಡಾಲಿ, ದೇಸನ್, ಕ್ಯಾಥಿಯಾವಾರಿ, ಸಾರ್ತಿ, ಸೂರತಿ ಮೊದಲಾದ ಹೆಸರುಗಳಿರುವ ಗಿರ್ ತಳಿ ಮೂಲತಃ ಗುಜರಾತಿನ ಸೌರಾಷ್ಟ್ರದ ಅರಣ್ಯದಿಂದ ಬಂದಿದೆ. ಮಧ್ಯಮ ಗಾತ್ರದ ಈ ಹಸುಗಳು ಗರಿಷ್ಠ 130 ಸೆ. ಮೀ. ಎತ್ತರ ಬೆಳೆಯುತ್ತವೆ. 385 ಕಿಲೋ ತನಕ ಭಾರವಿರುತ್ತವೆ. ಎತ್ತುಗಳು 545 ಕಿ.ಲೋ ವರೆಗೆ ತೂಕ, 135 ಸೆ. ಮೀ. ಎತ್ತರವಾಗುತ್ತವೆ. ತೆಳುವಾಗಿ ಹೊಳೆಯುವ ಚರ್ಮ ಬಹು ಮೃದುವಾಗಿದೆ. ಕೆಂಪು ಮತ್ತು ಬಿಳಿ ಮಚ್ಚೆ ಮಿಶ್ರಿತ ಕೆಂಬಣ್ಣವಿರುವ ಅವಕ್ಕೆ ಮುಂಭಾಗಕ್ಕೆ ಚಾಚುವ ದೊಡ್ಡ ಕಿವಿಗಳು, ಉದ್ದನೆಯ ಮುಖ, ಗುಮ್ಮಟದಂತೆ ಎತ್ತರವಾದ ಹಣೆ, ತಲೆಯ ಹಿಂದೆ ಬಾಗುವ ಕೋಡುಗಳಿಂದಾಗಿ ತುಂಬ ಚಂದ ಕಾಣುತ್ತವೆ. ಚರ್ಮದಲ್ಲಿ ಕೀಟನಾಶಕವಾದ ಬೆವರು ಸದಾಕಾಲ ಇರುತ್ತದೆ. ವಿಶಿಷ್ಟ ನೋಟದ ಈ ನೈಸರ್ಗಿಕ ಸೌಂದರ್ಯದ ಖನಿ ಅಳಿಯುತ್ತಿರುವ ತಳಿಗಳ ಸಾಲಿನಲ್ಲಿ ಸೇರಿದ್ದು ಇದನ್ನು ಸಂರಕ್ಷಿ$ಸಬೇಕಾಗಿದೆ ಎನ್ನುತ್ತಾರೆ ಗೋಪಾಲಕೃಷ್ಣ ಭಟ್ಟರು.
ಒಂದು ಹಸು ದಿನಕ್ಕೆ ಎಂಟರಿಂದ ಹತ್ತು ಲೀಟರ್ ಹಾಲು ಕೊಡುತ್ತದೆ. ಮೂರು ತಿಂಗಳು ಏಕಪ್ರಕಾರವಾಗಿ ಹಾಲು ಸಿಗುತ್ತದೆ. ಒಂಭತ್ತು ತಿಂಗಳಲ್ಲಿ ಮತ್ತೆ ಬೆದೆಗೆ ಬಂದು ಗರ್ಭಧಾರಣೆ ಮಾಡಿದರೂ ಒಂದು ಕರಾವಿನ ಅವಧಿ ಒಂದೂವರೆ ವರ್ಷ ಇರುತ್ತದೆಯಂತೆ. ಹಾಲಿನಲ್ಲಿ ಶೇ. 50ರಷ್ಟು ಬೆಣ್ಣೆ ಇರುವುದು ಯಾವುದೇ ತಳಿಗಿಂತ ಅಧಿಕವೆಂಬುದನ್ನು ಹೇಳುತ್ತಾರೆ. ಹಾಲಿಗೆ ವಿಶಿಷ್ಟ ಪರಿಮಳ, ರುಚಿ, ತುಪ್ಪ ಮರಳುಮರಳಾಗಿರುತ್ತದೆ. ಮಜ್ಜಿಗೆಗೆ ಆಕರ್ಷಕ ಸ್ವಾದವೂ ಇದೆಯಂತೆ. ಇದರ ಎತ್ತುಗಳು ಹೊರೆ ಎಳೆಯುವುದರಲ್ಲೂ ಹೆಚ್ಚು ಶಕ್ತಿವಂತವಾಗಿವೆ ಎಂಬುದನ್ನು ಭಟ್ಟರು ವಿವರಿಸುತ್ತಾರೆ.
ಗೋಪಾಲಕೃಷ್ಣ ಭಟ್ಟರ ಹಸುವಿನ ಹೆಣ್ಣು ಕರು ಮೊದಲ ಸಲ ಇಪ್ಪತ್ತೂಂದು ತಿಂಗಳಲ್ಲಿ ಬೆದೆಗೆ ಬಂದಿದೆ. ಅವರು ಹಾಲು ಕೊಡುವ ದನಕ್ಕೆ ಕೊಡುವಷ್ಟೇ ಪಶು ಆಹಾರವನ್ನು ಗಬ್ಬದ ದನಗಳಿಗೂ ಕೊಡುತ್ತಾರೆ. ಇದರಿಂದ ಕರುಗಳ ಬೆಳವಣಿಗೆ ಉತ್ತಮವಾಗಿರುತ್ತದೆ ಎನ್ನುವ ಅವರು ಉದ್ದು ಮತ್ತು ಗೋಧಿಯ ಬೂಸಾ, ಜೋಳದ ಹುಡಿ, ಸುರಭಿ ಪಶು ಆಹಾರ ಸೇರಿದಂತೆ ದಿನಕ್ಕೆ ಐದು ಕಿಲೋ ಆಹಾರ ಕೊಡುತ್ತಾರೆ. ಬೇಸಿಗೆಯಲ್ಲಿ ಅಡಕೆ ಮರದ ಹಾಳೆ, ಹಸಿರೆಲೆ, ತೋಟದ ಹುಲ್ಲು ಭತ್ತದ ಒಣಹುಲ್ಲುಗಳನ್ನು ಸಮೃದ್ಧಿಯಾಗಿ ನೀಡುತ್ತಾರೆ. ಮಾರುಕಟ್ಟೆಯಲ್ಲಿ ಶುದ್ಧ ಗಿರ್ ತಳಿಯ ಹಸುವಿಗೆ ಎಂಭತ್ತು ಸಾವಿರದಿಂದ ಒಂದು ಲಕ್ಷ ರೂ. ತನಕ ಬೆಲೆ ಇದೆ. ಹೀಗಾಗಿ ಇದು ಸಂರಕ್ಷಿಸಲೇಬೇಕಾದ ತಳಿ ಎನ್ನುತ್ತಾರೆ.
ಪ. ರಾಮಕೃಷ್ಣ ಶಾಸ್ತ್ರಿ