Advertisement

ವಿಸ್ಮರಣೀಯರಾಗಬೇಕೆ? ಅವಿಸ್ಮರಣೀಯರಾಗಬೇಕೆ?

03:47 AM Jul 03, 2021 | Team Udayavani |

ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಸಾಹಿತ್ಯ, ಸ್ವಾತಂತ್ರ್ಯ ಚಳವಳಿ, ಖಾದಿ ಚಳವಳಿ, ಕರ್ನಾಟಕ ಏಕೀಕ ರಣ ಚಳವಳಿಗಳಲ್ಲಿ ವಿಶೇಷ ಛಾಪು ಮೂಡಿಸಿದವರು.

Advertisement

ಗೊರೂರು ಜಯಂತಿ ಸಂದರ್ಭ (1904ರ ಜುಲೈ 4) ಅವರು ಬಾಲ್ಯದಲ್ಲಿ ತಂದೆಯೊಡನೆ ಸುಳ್ಳೊಂದನ್ನು ಹೇಳಿ ಪಶ್ಚಾತ್ತಾಪಪಟ್ಟ ವೃತ್ತಾಂತವನ್ನು ಘಟನೆ ನಡೆದು ಶತಮಾ ನದ ಬಳಿಕ ಸ್ಮರಿಸುವುದು ಮನನೀಯ.

ಗೊರೂರು ಹಾಸನ ಜಿಲ್ಲೆಯ ಪುಟ್ಟ ಹಳ್ಳಿ. 1920ರ ವೇಳೆ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಹಾಸನದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪ್ರೌಢ ಶಾಲೆಗೆ ಹೋಗುತ್ತಿದ್ದರು. ವಯಸ್ಸು 16. ಹಾಸನದಲ್ಲಿ ದನಗಳ ಪ್ರದರ್ಶನದಲ್ಲಿ ನಾಟಕ, ಸರ್ಕಸ್‌ ಕಂಪೆನಿ ಬರುತ್ತಿದ್ದವು. ಇವೇ ಆಗ ಮನೋ ರಂಜನೆ. ರಾಮಸ್ವಾಮಿ ಒಂದು ದಿನ ನಾಟಕ ನೋಡಲು ಹೋದರು. ಅರ್ಧ ನಾಟಕವಾದ ಬಳಿಕ ವಿರಾಮದ ವೇಳೆ ಮುಂದಿನ ಸಾಲಿನಲ್ಲಿ ತಂದೆ ಕುಳಿತಿದ್ದು ಕಂಡುಬಂತು, ಹಿಂದಿರುಗಿ ನೋಡಿದಾಗ ಮಗ ತೋರಿದ. ಗುರುತು ಸಿಗಬಾರದೆಂದು ತತ್‌ಕ್ಷಣ ಮಗ ತಲೆ ತಗ್ಗಿಸಿದ. ಭಯವೂ, ಸಂಕೋಚವೂ ಜತೆಜತೆಯಲ್ಲಿ. ತಂದೆ ಕಷ್ಟ ಪಟ್ಟು ಜೀವನ ನಡೆಸುತ್ತಿದ್ದವರು. ಮಗನ ಭವಿಷ್ಯಕ್ಕಾಗಿ ಅಲ್ಪಸಂಪಾದನೆಯಲ್ಲಿ ಉಳಿಸಿ ಕೊಡುತ್ತಿದ್ದರು. ಕಷ್ಟದಿಂದ ಕೊಟ್ಟ ಹಣ ಖರ್ಚು ಮಾಡಿ ನಾಟಕ ನೋಡುತ್ತ ಕಾಲ ಕಳೆಯುತ್ತಾನಲ್ಲ ಎಂಬ ವ್ಯಥೆ ತಂದೆಗೆ. ನಾಟಕ ಕೊನೆ ಯಾಗುವುದರೊಳಗೆ ಹಾಸ್ಟೆಲ್‌ಗೆ ಮಗ ಓಟ ಕಿತ್ತ.

ರವಿವಾರ ಮನೆಗೆ ಹೋಗುವುದಿತ್ತು. ತಂದೆ ಸಹಜ ವಾಗಿ “ನೀನು ಆ ದಿನ ನಾಟಕಕ್ಕೆ ಬಂದಿದ್ದೆ. ನಾನೂ ಹಾಸನಕ್ಕೆ ಹೋಗಿದ್ದೆ, ರಾತ್ರಿ ಉಳಿಯಬೇಕಾಗಿ ಬಂದ ಕಾರಣ ನಾಟಕಕ್ಕೆ ಹೋದೆ. ನಾಟಕ ಚೆನ್ನಾಗಿತ್ತು’ ಎಂದರು. “ಕಳ್ಳನ ಮನಸು ಹುಳ್ಳು ಹುಳ್ಳಗೆ’ ಎಂಬಂತಾಗಿ “ನಾನು ನಾಟಕಕ್ಕೆ ಹೋಗಿರಲಿಲ್ಲ’ ಎಂದು ರಾಮಸ್ವಾಮಿ ಹೇಳಿ ದರು. “ನಿನ್ನನ್ನು ಗುರುತಿಸದಷ್ಟು ನಾನು ಈಗಲೇ ಕುರುಡ ನಾಗಿಲ್ಲ’ ಎಂದರು ತಂದೆ. ಸುಳ್ಳು ಹೇಳುವವರನ್ನು ಕಂಡರೆ ಬಲು ಕೋಪ. ಮಗನನ್ನು ಮುಖ ಕೊಟ್ಟು ಮಾತನಾಡಿಸಲೇ ಇಲ್ಲ. ಸೋಮವಾರ ಬೆಳಗ್ಗೆ ಶಾಲೆಗೆ ಹೋಗುವಾಗ ಸ್ವಲ್ಪ ದೂರ ಬಿಟ್ಟು ಬರುವುದು ವಾಡಿಕೆ. ಪ್ರತೀ ಸಲವೂ ಏನಾದರೂ ವಿವೇಕದ ಮಾತುಗಳನ್ನು ಹೇಳುತ್ತಿದ್ದ ತಂದೆ ಮಾತನಾಡಲೇ ಇಲ್ಲ. “ನೀವು ನಿಲ್ಲಿ. ನಾನು ಹೋಗಿ ಬರುತ್ತೇನೆ’ ಎಂದು ರಾಮಸ್ವಾಮಿ ಹೇಳಿದಾಗ “ಜೋಪಾನ, ಜಾಣನಾಗಿರು’ ಎಂಬ ಮಾತು ಬರಬಹುದೆಂದು ನಿರೀಕ್ಷೆ ಇತ್ತು. ತಂದೆ ಮಾತನಾಡಲೇ ಇಲ್ಲ. ರಾಮಸ್ವಾಮಿ ಮನಸ್ಸಿನಲ್ಲಿ ಏನೋ ಕಸಿವಿಸಿ, ಪುನಃ ಹಿಂದಿರುಗಿ ನೋಡಿದರು. ತಂದೆ ನಿಂತಲ್ಲಿಯೇ ನಿಂತು ಅನ್ಯಮನಸ್ಕರಾಗಿ ಆಕಾಶ ನೋಡುತ್ತಿದ್ದರು. ರಾಮಸ್ವಾಮಿ ನಿಧಾನ ಅವರ ಬಳಿ ಹೋದರು. ದೃಷ್ಟಿ ಆಕಾಶದಲ್ಲಿಯೇ ನೆಟ್ಟಿತ್ತು. ಕರೆದಾಗ ದೃಷ್ಟಿ ಕೆಳಗೆ ಬಂತು. “ಆ ದಿನ ನಾನು ನಾಟಕಕ್ಕೆ ಹೋಗಿದ್ದೆ. ನಿಮ್ಮನ್ನೂ ಅಲ್ಲಿ ಕಂಡೆ. ನೀವು ಕೋಪಿಸಿಕೊಳ್ಳುತ್ತೀರಿ ಎಂಬ ಭಯದಿಂದ ನಾಟಕಕ್ಕೆ ಹೋಗಲಿಲ್ಲವೆಂದೆ’ ಎಂದು ದೀನ ದನಿಯಲ್ಲಿ ಹೇಳಿದರು, ಕಣ್ಣಿಂದ ನೀರಿನ ಹನಿ ಉದುರಿತು, ತಂದೆ ಕಣ್ಣಲ್ಲೂ… ಮಗನ ತಲೆ ಸವರಿ “ಸುಳ್ಳು ಹೇಳಿದಾಗ ನಿನಗೆ ಏನೋ ಆಗಿದೆ ಎಂದು ಯೋಚಿಸಿದೆ. ನಿಮಗೆಲ್ಲ ಭಯ ಉಂಟಾಗುವಂತೆ ಮಾಡಿದ್ದೇನೆ. ನಾನೂ ತಿದ್ದಿಕೊಳ್ಳಬೇಕು. ನೀನು ನಿಜ ಹೇಳಿದ್ದರಿಂದ ನನಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ನಾವು ಬಡವರು ಸುಳ್ಳು ಹೇಳಬಾರದು. ಇನ್ನು ಹೊರಡು, ಬಿಸಿಲು ಏರುತ್ತೆ. ಜೋಪಾನ ಜಾಣನಾಗಿರು’ ಎಂದರು.
“ಆ ದಿವಸ ನನಗೆ ಉಂಟಾದ ಸುಖ, 14 ಮೈಲಿ ನಡೆದು ಶಾಲೆಗೆ ಹೋಗಬೇಕಲ್ಲ ಎಂಬ ಕಷ್ಟವನ್ನೂ ಮರೆಸಿತು. ತಂದೆಯವರಿಗೆ ನನ್ನ ಸುಳ್ಳಿನಿಂದ ಆದ ಆಘಾತವನ್ನು ನಾನು ಎಂದೂ ಮರೆತಿಲ್ಲ. ನನ್ನ ಬುದ್ಧಿಗೆ ತೋರಿದಂತೆ ಸತ್ಯದ ದಾರಿಯಲ್ಲಿ ನಡೆಯುವುದರಲ್ಲಿ ಪ್ರಯತ್ನಿಸಿದ್ದೇನೆ. ಎಡವಲೇ ಇಲ್ಲ ಎಂದು ಹೇಳಲಾರೆ. ಎಡವಿದಾಗಲೆಲ್ಲ ಶ್ರಮಪಟ್ಟು ಮತ್ತೆ ನೇರವಾದ ದಾರಿ ಹಿಡಿದಿದ್ದೇನೆ’ ಎಂದು ಗೊರೂರು ಬಾಲ್ಯದ ದಿನಗಳ ಬಗೆಗೆ ಬರೆದುಕೊಂಡಿದ್ದಾರೆ.

ಪ್ರತಿಯೊಬ್ಬ ಪ್ರೌಢರೂ, ಹಿರಿಯರೂ ಮಾಜಿ ಬಾಲಕ/ ಬಾಲಕಿಯರೇ, ಯೌವನದ ಮೆಟ್ಟಿಲಿನಿಂದ ಮೇಲೆ ಬಂದವರೇ. Every saint has a past and every sinner has a future ಎಂಬ ಇಂಗ್ಲಿಷ್‌ ಗಾದೆ ಇದೆ. ಪ್ರತಿ ಯೊಬ್ಬರೂ ಎಡವುತ್ತಾರೆ. ಆದರೆ ತಿಳಿವಳಿಕೆ ಮೂಡಿದ ಬಳಿಕ ತತ್‌ಕ್ಷಣವೇ ಇದನ್ನು ಒಪ್ಪಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯುವುದು ಮುಖ್ಯ. ಪ್ರತಿಯೊಬ್ಬರಿಗೂ ಭವಿಷ್ಯವಿದೆ. ಮೇಧಾವಿಗಳ ಜೀವನ ಅವಲೋಕಿಸಿದಾಗ ಇದು ಕಂಡುಬರುತ್ತದೆ. ಇದನ್ನು ಗೊರೂರು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗೊರೂರು ಮಾತ್ರವಲ್ಲದೆ ತಂದೆಯವರ ಮಾತಿನಿಂದಾಗಿ ಅವರೂ ದೊಡ್ಡವರಾದರು. ನಾವೆಲ್ಲರೂ ಯಾವುದೇ ವಯಸ್ಸಿನವರಾಗಿರಲಿ ಅನುಭವಗಳಿಂದ ಹೊರತಾದವರಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ತಮ್ಮ ದೋಷಗಳನ್ನು ಪತ್ತೆ ಹಚ್ಚಿಕೊಂಡರೆ ಮಿಕ್ಕುಳಿದ ಅವಧಿಯಲ್ಲಿ ಇತರರಿಗೆ ನಮ್ಮಿಂದ ಆಗುವ ತೊಂದರೆ ಕಡಿಮೆ ಆಗುತ್ತದೆ. ಮೊದಲು ನಮ್ಮಲ್ಲಿ ಆತ್ಮಾವಲೋಕನ ನಡೆಯಬೇಕು, ಅನಂತರವೇ ನಮ್ಮ ದೋಷಗಳು ಢಾಳಾಗಿ ಕಾಣಲು ಸಾಧ್ಯ. ಆತ್ಮವಂಚಕರಾಗಿ ಆತ್ಮಾವಲೋಕನಕ್ಕೆ ಅವಕಾಶವೇ ಇಲ್ಲದಿದ್ದರೆ ದೋಷ ಪತ್ತೆಯೂ ಅಸಾಧ್ಯ. ರೋಗಪತ್ತೆಯಾದರೆ ಮಾತ್ರ ರೋಗನಿರ್ಮೂಲನ ದಾರಿಯಲ್ಲವೆ? “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಕನ್ನಡ ಗಾದೆಯಂತೆ ಆರಂಭದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಸುಳ್ಳುಗಾರ ಆಗುವುದು ಖಚಿತ. ಸುಳ್ಳುಗಾರ- ಕಳ್ಳಗಾರ ಡಬ್ಬಲ್‌ ಆ್ಯಕ್ಟಿಂಗ್‌ನಂತೆ. ಬುದ್ಧಿವಂತಿಕೆಯಿಂದ ನಯವಂತಿಕೆಯ (ಪಾಲಿಶ್‌x) ಸುಳ್ಳುಗಾರ-ಕಳ್ಳಗಾರರಾದರೆ ಸಮಾಜಕ್ಕೆ ಇನ್ನೂ ಭಾರ… ಆತ್ಮಾವಲೋಕನ ಮಾಡಿಕೊಂಡರೆ ಸ್ಮರಣೀಯ, ಅವಿಸ್ಮರಣೀಯರಾಗುತ್ತಾರೆ, ಇಲ್ಲವಾದರೆ ವಿಸ್ಮರಣೀಯರಾಗುತ್ತಾರೆ.

Advertisement

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next