ದೇಶದ ಗಡಿ ಕಾಯಲು ಸೈನಿಕರಿದ್ದಾರೆ. ಇನ್ನು ದೇಶದೊಳಗೆ ಅಪರಾಧ ಸಂಖ್ಯೆಗಳಿಗೆ ಅನುಗುಣವಾಗಿ ಪೊಲೀಸ್ ಠಾಣೆಗಳು ಬಂದಿವೆ. ಪೊಲೀಸರ ಬೀಟ್ ವ್ಯವಸ್ಥೆ ಇದೆ. ಬೀದಿ-ಬೀದಿ ಗಳಷ್ಟೇ ಅಲ್ಲದೆ, ಮನೆಯ ಪ್ರತಿ ಗೋಡೆಗಳ ಮೇಲೂ ಸಿಸಿ ಕ್ಯಾಮೆರಾಗಳು ಏರಿ ಕುಳಿತಿವೆ. ಅತ್ಯಾಧುನಿಕ ವ್ಯವಸ್ಥೆಗಳಿಗೆ ಬೆಂಗಳೂರು ತೆರೆದುಕೊಳ್ಳುತ್ತಲೇ ಹೋಗುತ್ತಿದೆ. ಒಂದು ಕಾಲದಲ್ಲಿ ನಂಬಿಕಸ್ಥ ಕಾವಲುಗಾರರಾಗಿದ್ದ ಗೂರ್ಖಾಗಳ ಮೇಲೆ ಹಲವು ಅಪವಾದಗಳೂ ಬಂದಿವೆ. ಗೂರ್ಖಾಗಳ ಆವಶ್ಯಕತೆಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಗುತ್ತಿದೆ. ಎಲ್ಲದರ ನಡುವೆ ಬೆಂಗಳೂರಿನ ಹಲವೆಡೆ 40 ಸಾವಿರಕ್ಕೂ ಅಧಿಕ ಗೂರ್ಖಾಗಳು ಬದುಕು ಕಟ್ಟಿಕೊಂಡಿ ದ್ದಾರೆ. ಆದರೆ, ಇವರಲ್ಲಿ ಬಹುತೇಕರು ಗೂರ್ಖಾಗಳಾಗಿ ಉಳಿದಿಲ್ಲ. ಅನೇಕರು ಏಜೆನ್ಸಿಗಳ ಮೂಲಕ ಸೆಕ್ಯುರಿಟಿ ಗಾರ್ಡ್‌ಗಳಾಗಿ ದಿನಗೂಲಿ, ತಿಂಗಳ ಸಂಬಳ ಸಿಗುವ ಕೆಲಸಗಳಿಗೆ ಸೇರಿದ್ದಾರೆ. ಶಿಕ್ಷಣ ಪಡೆದು ಭಾರತೀಯ ಸೈನ್ಯ ಸೇರಿದವರೂ ಇದ್ದಾರೆ. ವಂಶಪಾರಂಪರ್ಯವಾಗಿ ರಾತ್ರಿ ಪಾಳಿಯಲ್ಲಿ ಪಹರೆ ತಿರುಗುತ್ತಿದ್ದವರು ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆಯೂ ಗೂರ್ಖಾಗಳಾಗಿಯೇ ಕೆಲಸ ಮಾಡುತ್ತಿರುವವರು ಸೇವಾ ಭದ್ರತೆ, ಗೌರವಧನಗಳಿಗೆ ಎದುರು ನೋಡುತ್ತಿದ್ದಾರೆ.
ರಾಜಸ್ಥಾನದ ಮೇವಾರ್‌ನಿಂದ ಬೆಂಗಳೂರಿನವರೆಗೆ: 8ನೇ ಶತಮಾತನದ ಹಿಂದೂ ಯೋಧ ಸಂತ ಶ್ರೀ ಗುರು ಗೋರಖನಾಥರಿಂದ ಗೂರ್ಖಾ ಎಂಬ ಹೆಸರು ಪಡೆದ ರಾಜಸ್ಥಾನದ ಈ ಸಮುದಾಯ, ಈಗಿನ ಭಾರತ ಮಾತ್ರವಲ್ಲದೆ ನೇಪಾಳದವರೆಗೂ ನೆಲೆ ವಿಸ್ತರಿಸಿಕೊಂಡಿದೆ. ಗೋರಖನಾಥರ ಶಿಷ್ಯ ಬಪ್ಪಾರಾವಲ್ ರಾಜಕುಮಾರ್ ಶೈಲಾಧೀಶ್ ಅವರ ತಂದೆಯ ಮನೆ ಇಂದಿಗೂ ರಾಜಸ್ಥಾನದ ಮೇವಾರ್‌ನಲ್ಲಿದೆ. ನಂತರದ ದಿನದಲ್ಲಿ ಬಪ್ಪಾ ರಾವಲ್ ಅವರ ವಂಶಸ್ಥರು ಪೂರ್ವದ ಕಡೆಗೆ ತೆರಳಿ ಗೂರ್ಖಾದಲ್ಲಿ ರಾಜ್ಯ ಸ್ಥಾಪಿಸಿದರು. ಈ ವಂಶದ ಚಿತ್ತೋರಗಢದ ಮನ್ಮಥ ರಾಣಾಜಿ ರಾವ್ ಅವರ ಮಗ ಭೂಪಾಲ್ ರಾಣಜಿ ರಾವ್ ನೇಪಾಳದ ರಿಡಿಯಲ್ಲಿ ಸಾಮಾಜ್ಯ ಸ್ಥಾಪಿಸಿದರು. ಪ್ರಸ್ತುತ ಗೂರ್ಖಾ ಜಿಲ್ಲೆ ಆಧುನಿಕ ನೇಪಾಳದ 75 ಜಿಲ್ಲೆಗಳಲ್ಲಿ ಒಂದಾಗಿದೆ. ಹಲವು ದಶಕಗಳ ಹಿಂದೆ ರಾಜಸ್ಥಾನದಿಂದ ವಲಸೆ ಹೊರಟ ಗೂರ್ಖಾಗಳು ಕರ್ನಾಟಕದಲ್ಲೂ ನೆಲೆ ಕಂಡುಕೊಂಡರು. 70ರ ದಶಕದಲ್ಲಿ ಬೆಂಗಳೂರಿಗೂ ಬಂದ ಈ ಸಮುದಾಯ, ಊರಿನ ಮುಖ್ಯಸ್ಥರ ಅನುಮತಿ ಪಡೆದು ಪಹರೆ ತಿರುಗುತ್ತಿದ್ದರು. ಅನಾರೋಗ್ಯ, ಅನಾನುಕೂಲತೆಗಳ ಸಂದರ್ಭದಲ್ಲಿ ಕಾವಲು ಕಾಯಲು ಪರ್ಯಾಯ ಗೂರ್ಖಾ ನೇಮಕವನ್ನೂ ಊರಿನ ಮುಖ್ಯಸ್ಥರೇ ಮಾಡುತ್ತಿದ್ದರು. ಅಷ್ಟೇ ಏಕೆ ಅವರ ಇನಾಮ್ ಕೂಡ ಮುಖ್ಯಸ್ಥರೇ ನಿರ್ಣಯಿಸುತ್ತಿದ್ದರು. ಆದರೆ, ಅದನ್ನು ಪಡೆಯಲು ಮನೆ-ಮನೆ ತಿರುಗಬೇಕಿತ್ತು. ಹೀಗೆ ದಶಕಗಳ ಹಿಂದೆ ಬೆಂಗಳೂರಿಗೆ ಬಂದ ಮೇವಾರದ ಗೂರ್ಖಾಗಳ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇಂದಿಗೂ ನಗರದ ಅಲ್ಲಲ್ಲಿ ಇದ್ದಾರೆ.
ಯುದ್ಧಗಳಲ್ಲೂ ಸಾಹಸ ತೋರುತ್ತಿದ್ದ ಗೂರ್ಖಾಗಳು: ಗೂರ್ಖಾಗಳು ಧೈರ್ಯ ಮತ್ತು ಶೌರ್ಯಕ್ಕೆ ಹೆಸರುವಾಸಿ. ಸ್ವಾಭಾವಿಕ ಯೋಧರು ಮತ್ತು ಯುದ್ಧದಲ್ಲಿ ಆಕ್ರಮಣಕಾರಿ, ನಿಷ್ಠೆ ಮತ್ತು ಧೈರ್ಯ, ಸ್ವಾವಲಂಬನೆ, ದೈಹಿಕವಾಗಿ ಬಲಶಾಲಿ ಮತ್ತು ಚುರುಕುಬುದ್ಧಿಯ ಗುಣಗಳನ್ನು ಹೊಂದಿದ್ದಾರೆ. ಸುಸಂಘಟಿತರು, ದೀರ್ಘ ಕಾಲ ಕಠಿಣ ಪರಿಶ್ರಮ, ಹಠಮಾರಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟಿಷರು 1857 ರ ಮುಂಚೆಯೇ ಗೂರ್ಖಾ ಸೈನಿಕರನ್ನು ಈಸ್ಟ್ ಇಂಡಿಯಾ ಕಂಪನಿಯ ಗುತ್ತಿಗೆಯಲ್ಲಿ ಅಡಿಯಲ್ಲಿ ತಮ್ಮ ಸೈನ್ಯದಲ್ಲಿ ಇರಿಸಿಕೊಳ್ಳಲು ಪ್ರಾರಂಭಿಸಿದರು. ಅಪ್ರತಿಮ ಧೈರ್ಯ ಮತ್ತು ಹೋರಾಟದ ಕೌಶಲ್ಯವನ್ನು ಎರಡೂ ವಿಶ್ವ ಯುದ್ಧಗಳಲ್ಲಿ ತೋರಿಸಿದರು. ಮೊದಲ ಮಹಾಯುದ್ಧದಲ್ಲಿ ಎರಡು ಲಕ್ಷ ಗೂರ್ಖಾ ಸೈನಿಕರು ಭಾಗವಹಿಸಿದ್ದರು, ಅದರಲ್ಲಿ ಸುಮಾರು 20 ಸಾವಿರ ಜನರು ಯುದ್ಧಭೂಮಿಯಲ್ಲಿ ಹುತಾತ್ಮರಾದರು. 2ನೇ ಮಹಾಯುದ್ಧದಲ್ಲಿ ಸುಮಾರು 2.5 ಲಕ್ಷ ಗೂರ್ಖಾ ಸೈನಿಕರನ್ನು ಸಿರಿಯಾ, ಉತ್ತರ ಆಫ್ರಿಕಾ, ಇಟಲಿ, ಗ್ರೀಸ್ ಮತ್ತು ಬರ್ಮಾಗಳಿಗೂ ಕಳುಹಿಸಲಾಗಿತ್ತು. ಆ ಮಹಾಯುದ್ಧದಲ್ಲಿ 32 ಸಾವಿರಕ್ಕೂ ಹೆಚ್ಚು ಗೂರ್ಖಾಗಳು ಹುತಾತ್ಮರಾಗಿದ್ದರು. ಭಾರತಕ್ಕಾಗಿಯೂ, ಪಾಕಿಸ್ತಾನ ಮತ್ತು ಚೀನಾ ವಿರುದ್ಧದ ಎಲ್ಲಾ ಯುದ್ಧಗಳಲ್ಲಿ ಗೂರ್ಖಾ ಸೈನಿಕರು ಶತ್ರುಗಳ ಮುಂದೆ ತಮ್ಮ ಶೌರ್ಯವನ್ನು ಸಾಬೀತುಪಡಿಸಿದರು. ಪ್ರಸ್ತುತ ಪ್ರತಿ ವರ್ಷ ಸುಮಾರು 1200-1300 ನೇಪಾಳಿ ಗೂರ್ಖಾಗಳು ಭಾರತೀಯ ಸೇನೆಗೆ ಸೇರುತ್ತಾರೆ.
90ರ ದಶಕಕ್ಕೆ ಪೊಲೀಸ್ ಎಂಟ್ರಿ: ಸಮಯ ಕಳೆದಂತೆ ಬೆಂಗಳೂರು ಕೂಡ ಬದಲಾವಣೆಗೆ ಸಾಕಷ್ಟು ತೆರೆದುಕೊಂಡಿತ್ತು. 90ರ ದಶಕದಲ್ಲಿ ಊರಿನ ಪಹರೆ ಕಾಯಲು ಮುಖ್ಯಸ್ಥನ ಬದಲಾಗಿ ಪೊಲೀಸರ ಎಂಟ್ರಿ ಆಯಿತು. ಹೊಸದಾಗಿ ಗೂರ್ಖಾ ಸೇರ್ಪಡೆಯಾಗಬೇಕಾದರೆ ಪೊಲೀಸ್ ಮೂಲಕವೇ ಊರಿಗೆ ಪರಿಚಯಿಸಬೇಕಾಗಿತ್ತು. ಎರಡು ವಾರ್ಡ್‌ಗೆ ಒಬ್ಬ ಗೂರ್ಖಾ ನೇಮಕ ಮಾಡಲಾಗುತ್ತಿತ್ತು. ವಾಡ್ ìನಲ್ಲಿ ಏನಾದರೂ ಕಳ್ಳತನ, ಕೊಲೆ ಅಥವಾ ಏನಾದರೂ ಗಲಾಟೆಗಳು ನಡೆದರೆ ಮೊದಲಿಗೆ ವಿಚಾರಣೆ ಹಾಗೂ ಸಾಕ್ಷಿಗೆ ಆ ಏರಿಯಾದ ಗೂರ್ಖಾ ಸಹಾಯ ಪಡೆದುಕೊಳ್ಳುತ್ತಿದ್ದರು. 2000 ಇಸವಿ ಬಳಿಕ ಗೂರ್ಖಾರನ್ನು ನೋಡುವ ರೀತಿಯೇ ಬದಲಾಯಿತು. ಬೆಂಗಳೂರಿನಲ್ಲಿ ನೇಪಾಳದ ಹಾಗೂ ರಾಜಸ್ಥಾನದ ಮೇವಾರ್‌ನಿಂದ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ ಗೂರ್ಖಾಗಳನ್ನು ಒಂದೇ ರೀತಿ ನೋಡುವ ಪರಿಪಾಠ ಪ್ರಾರಂಭವಾಯಿತು. ಮನೆಗಳು ಮಾಯಾವಾಗಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿ ನಿಂತವು. ಇಬ್ಬರ ಸ್ಪರ್ಧೆಯಲ್ಲಿ ಗೂರ್ಖಾ ವೃತ್ತಿಗೆ ಕತ್ತರಿ ಬಿತ್ತು.
ನಾಲ್ಕೈದು ದಶಕಗಳ ಹಿಂದೆ ರಾತ್ರಿಯಾದರೆ ಸಾಕು ಗಂಟೆಗೆ ಒಂದು ಬಾರಿಯಾದರೂ ಗೂರ್ಖಾಗಳ ಶಿಳ್ಳೆ, ಲಾಠಿ ಬಡಿಯುವ ಸದ್ದು ಕೇಳುತ್ತಿತ್ತು. ಮಧ್ಯರಾತ್ರಿಯಲ್ಲಿ ಯಾರೇ ಹೊರಟರೂ, ಬಂದರೂ ಅವರ ಮುಖಕ್ಕೊಮ್ಮೆ ಲಾಟೀನ್ ಅಥವಾ ಟಾರ್ಚ್ ಬಿಟ್ಟು ಪರಿಚಿತರೋ, ಅಪರಿಚಿತರೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಆಧುನೀಕರಣಗೊಳ್ಳುತ್ತಿರುವ ಸಿಲಿಕಾನ್ ಸಿಟಿ ವೇಗದ ಹೊಡೆತಕ್ಕೆ ಸಿಕ್ಕಿ ಗೂರ್ಖಾಗಳು ವೃತ್ತಿಯಿಂದಲೇ ಕಣ್ಮರೆಯಾಗುತ್ತಿದ್ದಾರೆ. ಬಿಡಿಗಾಸಿಗಾಗಿ ರಾತ್ರಿಯಿಡೀ ನಿದ್ದೆಗೆಟ್ಟು ಬೀದಿ ಅಲೆದು ಕಾವಲು ಕಾಯುತ್ತಿದ್ದ ಗೂರ್ಖಾಗಳು, ಬೆಳಗಾಗುತ್ತಲೇ “ಮೇಮ್ ಸಾಬ್’ ಎನ್ನುವ ಉತ್ಸಾಹಭರಿತ ಮಾತುಗಳೊಂದಿಗೆ ಪ್ರತ್ಯಕ್ಷವಾಗಿ ಬಿಡುತ್ತಿದ್ದರು. ಎಂಥವರೂ ನಾಚುವಷ್ಟು ಉತ್ಸಾಹ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ತಲೆ ಕೆರೆದುಕೊಂಡು ತಿಂಗಳ ಬಾಬ್ತು ಕೇಳುವಾಗ ಇರುವ ವಿನಯಕ್ಕೆ ಮನಸೋತು ಕೆಲವರು ಸ್ವಲ್ಪ ಹಣ ಹೆಚ್ಚು ನೀಡಿದರೆ, ಹಲವರು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿದ್ದುದೂ ಉಂಟು. ಆದರೂ ನಗುಮೊಗದಿಂದಲೇ ರಾತ್ರಿ ಪಾಳಿಯ ಪಹರೆಯನ್ನಂತೂ ಬಿಡುತ್ತಿರಲಿಲ್ಲ. ಎಷ್ಟೇ ಕಹಿ ಘಟನೆಗಳು ಘಟಿಸಿದರೂ, ಅವರು ಮಾತ್ರ ಎಲ್ಲ ಮನೆಗೆ ಒಂದೇ ರೀತಿಯಾದ ಕಾವಲು ಕಾಯುವುದು ಮಾತ್ರ ಬಿಟ್ಟಿಲ್ಲ.
ರಾತ್ರಿ 7ಕ್ಕೆ ಮನೆಯಿಂದ ಹೊರಟ ಅಪ್ಪ ಬೆಳಗ್ಗೆ 7ಕ್ಕೆ ವಾಪಸ್ ಬರುತ್ತಿದ್ದರು: ರಾತ್ರಿ 7ಕ್ಕೆ ಲಾಟೀನ್ ಹಿಡಿದು ಮನೆಯಿಂದ ಹೊರಡುತ್ತಿದ್ದ ಅಪ್ಪ, ಬಾಯಿಯಲ್ಲಿ ಸೀಟಿ ಊದುತ್ತಾ, ಎಲ್ಲರನ್ನೂ ಎಚ್ಚರಿಸುತ್ತಾ ನಮ್ಮ ಮನೆಗೆ ಬರುವ ಹೊತ್ತಿಗೆ ಬೆಳಗ್ಗೆ 7 ಗಂಟೆ ಆಗಿರುತ್ತಿತ್ತು. ತಂದೆಗೆ ಆರಾಮಿಲ್ಲದಾಗ ರಾತ್ರಿ ವೇಳೆ ನಾನೂ ಈ ಕೆಲಸ ಮಾಡುತ್ತಿದ್ದೆ. ನನಗೆ ಸುಮಾರು 15 ವರ್ಷ ಒಬ್ಬನೇ ಕತ್ತಲೆಯಲ್ಲಿ ಓಡಾಡಲು ಧೈರ್ಯ ಬಂದ ಕೂಡಲೇ ಗೂರ್ಖಾ ಕೆಲಸ ಮಾಡಲು ಅರ್ಹತೆ ಸಿಗುತ್ತಿತ್ತು. ನಿರಂತರವಾಗಿ 20 ವರ್ಷಗಳ ಗೂರ್ಖಾ ವೃತ್ತಿ ಮಾಡಿದೆ. ಮನೆಗೆ ಒಂದು, ಎರಡು ರೂಪಾಯಿಂದ ಪ್ರಾರಂಭ ವಾಗಿ 2003ರ ಹೊತ್ತಿಗೆ ಮನೆಗೆ 50 ರೂ. ಸಿಗುತ್ತಿತ್ತು. ಕೆಲವೊಮ್ಮೆ ಬರಿಗೈಯಲ್ಲಿ ಬಂದದ್ದೂ ಇದೆ. ಇದರಿಂದಾಗಿ ಗೂರ್ಖಾ ಕೆಲಸ ಬಿಟ್ಟು ಸೆಕ್ಯೂರಿಟಿ ಸೇರ್ಪಡೆಗೊಂಡಿದ್ದೇನೆ.
● ದಿಲ್ ಬಹ್ದೂರ್, ಗೂರ್ಖಾ
ಗೂರ್ಖಾ ವೃತ್ತಿಯಲ್ಲಿ ಸಿಕ್ಕ ತೃಪ್ತಿ ಸೆಕ್ಯೂರಿಟಿ ಗಾರ್ಡ್‌ನಲ್ಲಿ ಇಲ್ಲ…
ನಮ್ಮ ತಂದೆ ಯವರ ಕಾಲ ಬಹಳ ಚೆನ್ನಾಗಿತ್ತು. 50 ವರ್ಷಗಳ ಹಿಂದೆ ಗೂರ್ಖಾ ಅಂದರೆ ಸಿವಿಲ್ ಡ್ರೆಸ್ ಹಾಕಿದ ಪೊಲೀಸ್ ಎನ್ನಲಾಗು ತ್ತಿತ್ತು. ಆಗ ನನಗೆ 10 ವರ್ಷ ಇರುವಾಗ ತಂದೆಯ ಗೂರ್ಖಾ ಕೆಲಸ ಹತ್ತಿರದಿಂದ ಗಮನಿಸಿದ್ದೆ. ಖಾಕಿ ಬಟ್ಟೆ, ಪ್ಲಾಸ್ಟಿಕ್ ಶೂ ಧರಿಸುವುದೇ ಒಂದು ಗತ್ತು. ಕೈಯಲ್ಲಿ ಒಂದು ಟಾರ್ಚ್ ಬಾಯಿಯಲ್ಲಿ ಶಿಳ್ಳೆ ಹಾಕುತ್ತಾ ಹೋದರೆ ಯಾರ ಮನೆಯಲ್ಲೂ ಕಳ್ಳತನವಾದ ಇತಿಹಾಸವೇ ಇಲ್ಲ. ಈಗಿನ ಸೆಕ್ಯೂರಿಟಿ ಕೆಲಸ ಇಂತಹ ಅನುಭವ ನೀಡುತ್ತಿಲ್ಲ.
● ಬಲ್ಲಭ್, ಗೂರ್ಖಾ
ಬೆಂಗಳೂರು ಎಷ್ಟೇ ಅಭಿವೃದ್ಧಿ ಯಾದರೂ ನಂಬಿಕೆ ಹಾಗೂ ಸುರಕ್ಷತೆ ವಿಷಯಕ್ಕೆ ಬಂದರೆ ನಗರದ ಶೇಟ್‌ಗಳು ಗೂರ್ಖಾಗಳನ್ನು ನಂಬುವುದು. ಇಂದಿಗೂ ಅನೇಕ ಚಿನ್ನಾಭರಣ ಮಳಿಗೆ, ಬಹುಮಹಡಿ ಕಟ್ಟಡ, ಮನೆಗಳನ್ನು ಕಾಯುವವರು ಗೂರ್ಖಾಗಳೇ. ತಲೆತಲಾಂತರಗಳಿಂದ ಅವರ ಪೂರ್ವಿಕರು ಮಾಡಿಕೊಂಡ ಬಂದ ಮನೆ ಕಾವಲು ಇಂದಿನ ತಲೆಮಾರು ಸಹ ಮುಂದುವರಿಸಿದೆ.
● ಜೋಗ್‌ಮಾಲ್, ಗೂರ್ಖಾ ಅಸೋಸಿಯೇಶನ್ ಅಧ್ಯಕ್ಷ
-ತೃಪ್ತಿ ಕುಮ್ರಗೋಡು