Advertisement
ಮನೆ ಮಾಲಕ ವಲೇರಿಯನ್ ಲೋಬೊ (55), ಪತ್ನಿ ಹೆಜ್ಮಿ ಲೋಬೊ (51) ಮತ್ತು ಕೂಲಿ ಕಾರ್ಮಿಕ ಮೂಡಬಿದಿರೆ ಮಾರೂರಿನ ಸಂದೀಪ್ (28) ಸಾವನ್ನಪ್ಪಿದವರು.
Related Articles
ವಲೇರಿಯನ್ ಅವರ ಮನೆ ಸ್ವಲ್ಪ ಎತ್ತರದಲ್ಲಿದ್ದು, ಮನೆಯ ಒಂದು ಬದಿ ಕೆಳಗಡೆ ರಸ್ತೆ ಇದೆ. ಈ ರಸ್ತೆಯ ಬದಿ ವಿದ್ಯುತ್ ತಂತಿ ಹಾದು ಹೋಗುತ್ತಿದೆ. ಕಾಳು ಮೆಣಸಿನ ಬಳ್ಳಿ ಇರುವ ತೆಂಗಿನ ಮರ ಮನೆ ಎದುರು ಒಂದು ಬದಿಯಲ್ಲಿದೆ. ಮೆಣಸಿನ ಬಳ್ಳಿ ಸುಮಾರು 15 ಅಡಿ ಎತ್ತರವಿದ್ದ ಕಾರಣ ಕಬ್ಬಿಣದ ಎರಡು ಏಣಿಗಳನ್ನು ಒಂದಕ್ಕೊಂದು ಕಟ್ಟಿ ಜೋಡಿಸಿ ಸಂದೀಪ್ ಮೇಲೇರಿ ಮೆಣಸು ಕೀಳುತ್ತಿದ್ದರು. ವಲೇರಿಯನ್ ಅವರು ಬುಡದಲ್ಲಿ ನಿಂತು ಏಣಿಯನ್ನು ಹಿಡಿದಿದ್ದರು. ಸಂದೀಪ್ ಅವರು ಕಾಳುಮೆಣಸು ಕೊಯ್ಯುತ್ತಿದ್ದಂತೆ ತೆಂಗಿನ ಮರಕ್ಕೆ ಆತುಕೊಂಡಿದ್ದ ಏಣಿ ಜಾರಿ ಪಕ್ಕದಲ್ಲಿರುವ ವಿದ್ಯುತ್ ತಂತಿ ಮೇಲೆ ಬಿದ್ದಿತು. ಆಗ ವಿದ್ಯುತ್ ಪ್ರವಹಿಸಿ ಸಂದೀಪ್ ಮತ್ತು ಬುಡದಲ್ಲಿ ಏಣಿಯನ್ನು ಹಿಡಿದಿದ್ದ ವಲೇರಿಯನ್ ಅವರು ಆಘಾತಕ್ಕೀಡಾಗಿದ್ದಾರೆ. ವಲೇರಿಯನ್ ಅವರ ಬೊಬ್ಬೆ ಕೇಳಿ ಮನೆಯೊಳಗಿದ್ದ ಪತ್ನಿ ಹೆಜ್ಮಿ ಓಡಿ ಬಂದು ಗಂಡನ ಪಾದಗಳನ್ನು ಹಿಡಿದು ಎಳೆದಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶವಾಯಿತು. ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Advertisement
ಅಷ್ಟರಲ್ಲಿ ವಿಷಯ ತಿಳಿದು ಪಕ್ಕದ ಮನೆಯ ಗುಣಕರ ಮತ್ತು ಟೈಲರ್ ವಸಂತ ಅವರು ಓಡಿ ಬಂದು ಆಸುಪಾಸಿನ ನಿವಾಸಿಗಳಿಗೆ, ಅಗ್ನಿ ಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಕರೆಸಿ ಶವಗಳನ್ನು ವೆನಾÉಕ್ ಆಸ್ಪತ್ರೆಗೆ ಸಾಗಿಸಲಾಯಿತು.
ಎನ್‌ಎಂಪಿಟಿ ಉದ್ಯೋಗಿವಲೇರಿಯನ್ ಲೋಬೊ ಅವರು ನವ ಮಂಗಳೂರು ಬಂದರಿನಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಹೆಜ್ಮಿ ಅವರು ವೆಲೆನ್ಸಿಯಾದ ರೋಶಿನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಫ್ಯಾಮಿಲಿ ಕೌನ್ಸೆಲಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪುತ್ರಿಯ ಕಣ್ಣೆದುರಲ್ಲೇ ಘಟನೆ !
ಪುತ್ರಿ ನಿಶಾ ಅವರು ವಾರಕ್ಕೊಮ್ಮೆ (ರವಿವಾರ) ಮಣಿಪಾಲದಿಂದ ಮನೆಗೆ ಬಂದು ಹೋಗುತ್ತಿದ್ದು, ಅದರಂತೆ ಇಂದು ಮಧ್ಯಾಹ್ನದ ವೇಳೆಗೆ ಮನೆಗೆ ತಲುಪುತ್ತಿದ್ದಂತೆ ವಿದ್ಯುತ್ ಅಪಘಾತ ಸಂಭವಿಸಿದೆ. ತಂದೆ, ತಾಯಿ ವಿದ್ಯುತ್ ಆಘಾತಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗಲೇ ಅವರು ಅಲ್ಲಿಗೆ ತಲುಪಿದ್ದಾರೆ. ರಕ್ಷಣೆಗೆ ಹೋಗುತ್ತಿದ್ದಂತೆ ಅವರನ್ನು ಸ್ಥಳೀಯರು ತಡೆದು ಜೀವ ಉಳಿಸಿದ್ದಾರೆ. ಶ್ರಮ ಜೀವಿ ಸಂದೀಪ್
ಶ್ರಮ ಹಾಗೂ ಸ್ನೇಹ ಜೀವಿಯಾಗಿದ್ದ ಸಂದೀಪ್ ಮೂಡಬಿದಿರೆ ಪುರಸಭೆಯ ಮಾರೂರು ಗ್ರಾಮದ ಅರ್ಲಜೆ ನಿವಾಸಿ. ಕೃಷಿಕ ರುಕ್ಕಯ್ಯ ಪೂಜಾರಿ ಪುತ್ರ. ಹೈಸ್ಕೂಲ್ ಶಿಕ್ಷಣದ ಬಳಿಕ ಹೊಟೇಲ್ ಕೆಲಸಕ್ಕೆ ಹೋಗಿದ್ದರು. ಅವರ ಮದುವೆಗೆ ವಧು ಅನ್ವೇಷಣೆ ನಡೆಯುತ್ತಿತ್ತು. ಮನೆಯಲ್ಲಿ ವೃದ್ಧ ತಂದೆ, ತಾಯಿ ಮತ್ತು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಆಟೋ ಚಾಲಕರಾಗಿರುವ ಕಿರಿಯ ಸೋದರ ಸಂದೇಶ್ ಇದ್ದರು. ಅಣ್ಣನಿಗೆ ಮದುವೆಯಾಗಿದ್ದು, ಪ್ರತ್ಯೇಕ ಮನೆ ಮಾಡಿಕೊಂಡಿದ್ದಾರೆ. ಅಕ್ಕ ಮತ್ತು ತಂಗಿಗೆ ಮದುವೆಯಾಗಿದೆ. ಕೆಲವು ದಿನಗಳ ಹಿಂದೆ ಮನೆಯಲ್ಲಿ ಭೂತದ ಕೋಲ ಇದ್ದುದರಿಂದ ಅದನ್ನು ಮುಗಿಸಿ ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿಗೆ ಬಂದಿದ್ದರು. ಧರ್ಮಗುರುಗಳು, ಶಾಸಕರ ಭೇಟಿ
ಶಾಸಕ ಜೆ.ಆರ್. ಲೋಬೊ ಅವರು ವೆನಾÉಕ್ ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು. ವೆನ್‌ಲಾಕ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ| ರಾಜೇಶ್ವರೀ ದೇವಿ ಅವರು ಸಿಬಂದಿಗಳನ್ನು ಕರೆಸಿ ವ್ಯವಸ್ಥೆ ಮಾಡುವಲ್ಲಿ ಸಹಕರಿಸಿದರು. ಸ್ಥಳೀಯ ಕಾರ್ಪೊರೇಟರ್ ಆಶಾ ಡಿ’ಸಿಲ್ವ, ಇತರ ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ಅಖೀಲಾ ಆಳ್ವ, ಪ್ರವೀಣ್ ಚಂದ್ರ ಆಳ್ವ, ಶೈಲಜಾ, ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ.ಕೆ. ಸುಧೀರ್ ಮುಂತಾದವರು ಭೇಟಿ ನೀಡಿದ್ದರು. ವೆಲೆನ್ಸಿಯಾ ಚರ್ಚ್‌ನ ಪ್ರಧಾನ ಗುರು ಫಾ| ಜೇಮ್ಸ್ ಡಿ’ಸೋಜಾ, ಸಹಾಯಕ ಗುರು ಗಳಾದ ಫಾ| ನವೀನ್, ಫಾ| ಅರುಣ್, ಚರ್ಚ್ ಉಪಾಧ್ಯಕ್ಷ ಹಾಗೂ ಕೆಥೋಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೊ ಅವರು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕರಟಿದ ದೇಹಗಳು
ಮೂವರ ದೇಹಗಳು ಭಾಗಶಃ ಸುಟ್ಟು ಹೋಗಿವೆ. ವಲೇರಿಯನ್ ಅವರ ಬೆನ್ನು, ಹೊಟ್ಟೆ, ಕಾಲು, ಕೈ ಕರಟಿ ಹೋಗಿವೆ. ಹೆಜ್ಮಿ ಅವರ ದೇಹದ ಒಂದು ಭಾಗ ಕರಟಿದೆ. ಸಂದೀಪ್ ಅವರ ಒಂದು ಕೈ ತುಂಡಾಗಿದೆ, ಕಾಲು ಕರಟಿ ಹೋಗಿದೆ. ವಿದ್ಯುತ್ ಸ್ಪರ್ಶಿಸಿದ ತತ್‌ಕ್ಷಣ ಬೆಂಕಿ ಹೊತ್ತಿಕೊಂಡಿದೆ. ಕಬ್ಬಿಣದ ಏಣಿಯ ತುದಿ ಕಪ್ಪಾಗಿದೆ. ತೆಂಗಿನ ಮರದ ಅಲ್ಲಲ್ಲಿ ಕರಟಿ ಹೋದ ಗುರುತುಗಳಿವೆ. ಸ್ಥಳೀಯರು ನೀರು ಹಾಯಿಸಿದಾಗ ಬೆಂಕಿ ಇನ್ನಷ್ಟು ಹೆಚ್ಚು ಹೊತ್ತಿಕೊಂಡಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾಯಕಾರಿ ವಿದ್ಯುತ್ ತಂತಿ
ಈ ಭಾಗದಲ್ಲಿ ಅಪಾಯಕಾರಿ ಹೈಟೆನ್‌ಶನ್ ವಿದ್ಯುತ್ ತಂತಿ ಹಾದು ಹೋಗಿದೆ. ಅಕ್ಕ ಪಕ್ಕದಲ್ಲಿ ಮನೆಗಳಿದ್ದು, ತೆಂಗು, ಕಂಗು ಮೊದಲಾದ ಮರಗಳಿವೆ. ಕೆಲವು ಕಡೆ ಈ ತಂತಿಗಳು ಮನೆಗಳಿಗೇ ತಾಗಿಕೊಂಡು ಹೋಗಿದ್ದು, ಅಪಾಯಕಾರಿ ಸ್ಥಿತಿ ಇದೆ.