Advertisement

ವೈಭವದ ವೀರಭದ್ರೇಶ್ವರ ರಥೋತ್ಸವ

03:08 PM May 03, 2019 | pallavi |

ಕಿಕ್ಕೇರಿ: ಹೋಬಳಿಯ ಕುಂದೂರು ಗ್ರಾಮದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೀರಭದ್ರೇಶ್ವರಸ್ವಾಮಿ ಜಾತ್ರೆಯಲ್ಲಿ ರಥೋತ್ಸವ ವೈಭವವಾಗಿ ನೆರವೇರಿಸಲಾಯಿತು. ವೀರಭದ್ರೇಶ್ವರಸ್ವಾಮಿ ರಥೋತ್ಸವಕ್ಕೆ ಎತ್ತ ನೋಡಿದರೂ ಭಕ್ತ ಸಮೂಹ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವ ಕಣ್ತುಂಬಿಕೊಂಡರು. ಹರಕೆ ಹೊತ್ತ ಕುರಿಗಾಹಿಗಳು ತಂಡೋಪತಂಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದರು. ಗ್ರಾಮದಲ್ಲಿರುವ ದೇಗುಲದ ಬಳಿ ಭಕ್ತರು, ಗ್ರಾಮಸ್ಥರು ಸೇರಿದರು. ರಥ ತಯಾರಿಸಲು ಅಣಿಯಾದರು. ದೇಗುಲದಲ್ಲಿದ್ದ ರಥದ ಗಾಲಿಚಕ್ರಗಳನ್ನು ಒಂದೆಡೆ ಸೇರಿಸಿದರು.

Advertisement

ರಥದಲ್ಲಿ ಮೂರ್ತಿ ಪ್ರತಿಷ್ಠಾಪನೆ: ರಥ ನಿರ್ಮಾಣಕ್ಕೆ ಬಿದರುಬೊಂಬು ಕಟ್ಟಿಗೆಗಳನ್ನು ಕಟ್ಟಿ ಭದ್ರಪಡಿಸಿದರು. ಬಳಿಕ ರಥಕ್ಕೆ ಭಕ್ತರು ಸಮರ್ಪಿಸಿದ್ದ ವಿವಿಧ ಜರತಾರಿ, ರೇಷ್ಮೆ ಸೀರೆ, ಬಟ್ಟೆಗಳಿಂದ ಶೃಂಗರಿಸಿದರು. ವಿವಿಧ ವರ್ಣಗಳ ಧ್ಜಜ ಪತಾಕೆಗಳಿಂದ ಅಲಂಕರಿಸಿದರು. ವಿವಿಧ ಪರಿಮಳ ಪುಷ್ಪ ಮಾಲೆಯಿಂದ ರಥವನ್ನು ಪುಷ್ಪಪಲ್ಲಕ್ಕಿ ತಯಾರಿಸಿದರು.

ವೀರಭದ್ರೇಶ್ವರಸ್ವಾಮಿ ಉತ್ಸವಮೂತಿಯನ್ನು ಮೆರವಣಿಗೆ ಮಾಡುವ ಮೂಲಕ ರಥಬೀದಿಗೆ ಸಾಗಿದರು. ರಥವನ್ನು ಪ್ರದಕ್ಷಿಣೆ ಹಾಕಿಸಿ ಸ್ವಾಮಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಸರ್ವಾಲಂಕಾರಪ್ರಿಯ ದೇವರಿಗೆ ಅಗ್ರ ಪೂಜೆ ಸಲ್ಲಿಸಲಾಯಿತು.

ಪೂಜಾ ವಿಧಿ ವಿಧಾನ: ಅರ್ಚಕರು ರಥೋತ್ಸವ ನಿರ್ವಿಘ್ನವಾಗಿ ಸಾಗಲು ರಥದ ಸುತ್ತ ಬಲಿಯನ್ನ, ಕಳಶ ಪೂಜೆ, ನವಗ್ರಹ ಪೂಜೆಯಂತಹ ಹಲವಾರು ಪೂಜಾ ವಿಧಿ ವಿಧಾನಗಳನ್ನು ಮಾಡಿದರು. ದೇಗುಲದ ಪ್ರಧಾನ ಅರ್ಚಕರಾದ ಡಾ. ಕುಂದೂರು ಜಗದೀಶ್‌ ವೀರಭದ್ರೇಶ್ವರಸ್ವಾಮಿಗೆ ನಮಿಸಿ ವೀರಭದ್ರನ ಕುಣಿತದ ಸೇವೆಯನ್ನು ತಂಡದೊಂದಿಗೆ ದೇವರಿಗೆ ಅರ್ಪಿಸಿದರು. ಗ್ರಾಮದ ಹೊರವಲಯದಲ್ಲಿರುವ ಗುಡಿಯ ವರೆಗೆ ಎಳೆದರು. ಹೊಲಗದ್ದೆ, ಬದುಗಳು ಎನ್ನದೆ ರಥ ಹಳ್ಳ ದಿಣ್ಣೆ ಏರಿ ಉಯ್ನಾಲೆಯಂತೆ ಸುಗಮವಾಗಿ ಸಾಗಿತು. ವೀರಭದ್ರೇಶ್ವರಸ್ವಾಮಿ ಉಘೇ ಉಘೇ ಎಂದು ಭಕ್ತರು ಜಯಘೋಷ ಕೂಗುತ್ತ ರಥವನ್ನು ಎಳೆದರು. ಭಕ್ತರು ಸಂಭ್ರಮ ದಿಂದ ರಥವನ್ನು ಸ್ವಸ್ಥಾನದವರಿಗೆ ಎಳೆದರು. ಭಕ್ತರು ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಆರೋಗ್ಯ ರಕ್ಷಣೆಗೆ ಪ್ರಾರ್ಥನೆ: ಕುರಿಗಾಹಿಗಳು ರೋಗರುಜಿನ ಬಾರದಂತೆ ದೇವರಲ್ಲಿ ಪ್ರಾರ್ಥಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸಿದರು. ಯುವಕರು, ದಾನಿಗಳು ಸ್ವಯಂಪ್ರೇರಣೆಯಿಂದ ನೀರು ಮಜ್ಜಿಗೆ ಪಾನಕ, ಅನ್ನ ದಾಸೋಹವನ್ನು ವಿತರಿಸಿ ಭಕ್ತರ ಪ್ರಶಂಸೆಗೆ ಪಾತ್ರರಾದರು.

Advertisement

ಮಹಾರಾಷ್ಟ್ರ, ತಮಿಳುನಾಡು, ತುಮಕೂರು, ಬೆಂಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅದಿಕ ಸಂಖ್ಯೆಯಲ್ಲಿ ಭಕ್ತರು, ಕುಂದೂರು, ಬೆಡದಹಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಸ್ಥರು, ಮುಖಂಡರು, ಜನಪ್ರತಿನಿಧಿಗಳು, ವೀರಭದ್ರೇಶ್ವರಸ್ವಾಮಿಯ ಅಸಂಖ್ಯಾತ ಭಕ್ತರು ರಥ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next