ಹೊಸಪೇಟೆ: ಐತಿಹಾಸಿಕ ಹಂಪಿಯ ಶ್ರೀವಿರೂಪಾಕ್ಷೇಶ್ವರ ಹಾಗೂ ಪಂಪಾಂಬಿಕೆ ದೇವಿಯ ಕಲ್ಯಾಣೋತ್ಸವ ಗುರುವಾರ ರಾತ್ರಿ ಅತ್ಯಂತ ವೈಭವದಿಂದ ನಡೆಯಿತು. ದೇವಸ್ಥಾನದ ಮಧ್ಯರಂಗ ಮಂಟಪದಲ್ಲಿ ನಿರ್ಮಿಸಿಲಾದ ಕೇದಿಗೆ ಅಲಂಕೃತ ವಿವಾಹ ಮಂಟಪದಲ್ಲಿ ಚೈತ್ರ ಶುದ್ಧ ತ್ರಯೋದಶಿ ರಾತ್ರಿ 9 ಗಂಟೆ ಸುಮಾರಿಗೆ ಚಂದ್ರ ಮೌಳೇಶ್ವರ ಮತ್ತು ಪಾರ್ವತಿ, ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕಲ್ಯಾಣ ಮಹೋತ್ಸವದ ವಿಶೇಷ ಪೂಜೆ ನೆರವೇರಿಸಲಾಯಿತು.
ಶಶಿಪೂಜೆ, ಪುಣ್ಯಾಹವಾಚನ, ನಂದಿಪೂಜೆ, ಶಶಿ ಪುರಂದರ ಪೂಜೆ, ಕನ್ಯಾದಾನ, ಮಾಂಗಲ್ಯಧಾರಣೆ, ಅಕ್ಷತಾರೋಪಣ, ಹಾಗೂ ಕಲ್ಯಾಣೋತ್ಸವವನ್ನು ವಿವಿಧ ಮಂತ್ರಘೋಷದೊಂದಿಗೆ ಸಾಂಪ್ರದಾಯಿಕವಾಗಿ ನೇರವೇರಿಸಲಾಯಿತು.
ಹಂಪಿ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಶ್ರೀರಾಮ ನವಮಿಯಿಂದ 9 ದಿನಗಳ ಕಾಲ ಸಿಂಹವಾಹನ, ಸೂರ್ಯಮಂಡಲ ಉತ್ಸವ, ಚಂದ್ರಮಂಡಳ ಉತ್ಸವ, ಶೇಷವಾಹನ ಉತ್ಸವ, ಪುಷ್ಪನಮನ, ರಜತನಂದಿ ಉತ್ಸವ, ಗಜಾವಾಹನ ಉತ್ಸವ, ಅಶ್ವವಾಹನ ಉತ್ಸವ ಹಾಗೂ ಗಜ ವಾಹನೋತ್ಸವವನ್ನು ನೆರವೇರಿಸಲಾಯಿತು.
ಆಗಮಿಕ ರವಿಶಂಕರ ಶರ್ಮಾ ನೇತೃತ್ವದಲ್ಲಿ ದೇವಸ್ಥಾನದ ಆರ್ಚಕರಾದ ಪಿ.ಶ್ರೀನಾಥ ಶರ್ಮಾ, ಜೆ.ಎಸ್.ಶ್ರೀನಾಥ
ಶರ್ಮಾ, ಜೆ.ಎಸ್.ಮುರುಳೀಧರಶಾಸ್ತ್ರೀ, ಮುರುಳಿಧರಶಾಸ್ತ್ರೀ, ಮಂಜುನಾಥ ಭಟ್, ರವಿ ಪಾಟೀಲ್ ಇತರರು ಕಲ್ಯಾಣೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಾಡಿನ ಎಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಕಲ್ಯಾಣ ಮಹೋತ್ಸವಕ್ಕೆ ಸಾಕ್ಷಿಯಾದರು.
ಚಕ್ರತೀರ್ಥ ಕೋದಂಡರಾಮ ದೇವಸ್ಥಾನದ ಅರ್ಚಕರು ವಧು ಪಂಪಾಂಬಿಕೆಯ ಕಡೆಯಿಂದ ಬೀಗರಾಗಿ ಆಗಮಿಸಿದ್ದರು. ವರ ವಿರೂಪಾಕ್ಷನ ಕಡೆಯಿಂದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪಾಲ್ಗೊಂಡಿದ್ದರು. ನಂತರ ಸಾಮಾನ್ಯ ಜನರ ವಿವಾಹದಂತೆ ಎಲ್ಲಾ ರೀತಿಯ ಮಂತ್ರ, ಪೂಜಾ ವಿಧಾನಗಳನ್ನು ಅರ್ಚಕ ಸಮೂಹ ಕಲ್ಯಾಣೋತ್ಸವ ನೆರವೇರಿಸಲಾಯಿತು. ನಂತರ ಸ್ವಾಮೀಜಿಗಳ ಆಶೀರ್ವಾದ, ಫಲಪುಷ್ಪ ಅರ್ಪಣೆ ನಡೆಯಿತು. ವಿವಾಹ ಸಮಾರಂಭ ಬಳಿಕ ಕಮಲಾಪುರದ ಭಕ್ತರು, ರಜತನಂದಿ ಉತ್ಸವ ನೆರವೇರಿಸಿದರು.