ಮುಂಬಯಿ: ನವ್ಯದ ಕಾಲವನ್ನು ಪ್ರಾರಂಭಿಸಿದವರು ಗೋಕಾಕರು. ಅದನ್ನು ಮುಂದುವರಿಸಿದವರು ಅಡಿಗರು. ಅಡಿಗರ ಕಾವ್ಯದಲ್ಲಿ ನೆಲದ ಮಹತ್ವವನ್ನು ಕಾಣಬಹುದು. ಅವರ ಕವಿತೆಗಳಲ್ಲಿ ನಾಡು-ನುಡಿ ಹಾಗೂ ನೆಲದ ಪ್ರೀತಿಯನ್ನು ಅರುಹಿದ್ದಾರೆ ಎಂದು ನಗರದ ವಿಮರ್ಶಕ, ಆರ್. ಜೆ. ಕಾಲೇಜು ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಕೆ. ರಘುನಾಥ್ ಅವರು ನುಡಿದರು.
ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಹಾಗೂ ಕರ್ನಾಟಕ ಸಂಘ ಗೋರೆಗಾಂವ್ ಅವರ ಜಂಟಿ ಆಯೋಜನೆ ಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಸಭಾಗೃಹದಲ್ಲಿ ನಡೆದ ಅಡಿಗರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಈ ಸಂಸ್ಮರಣ ಕಾರ್ಯಕ್ರಮ ಅರ್ಥಪೂರ್ಣವಾದದ್ದು. ಮಯೂರವರ್ಮ ಶಾಸ್ತ್ರ ತ್ಯಾಗಮಾಡಿ ಶಸ್ತ್ರ ಕೈಗೆತ್ತಿಕೊಂಡವನು, ಅಡಿಗರು ಅದೇ ಸಾಲಿನವರು ತಮ್ಮ ಬರಹದಿಂದ ನಿಜದ ನೆಲೆಯನ್ನು ಅರುಹಿದ ಅಡಿಗರ ಕವನಗಳನ್ನು ಸುಶ್ರಾವ್ಯವಾಗಿ ಹಾಡಿ ದವರನ್ನು ಅಭಿನಂದಿಸಿದ ಡಾ| ರಘುನಾಥರು, ಅಡಿಗರ ಕಾವ್ಯ ಪ್ರಪಂಚದ ವಿಸ್ತಾರವನ್ನು ರಾಮಾಯಣದ ಉದಾಹರಣೆ ಯೊಂದಿಗೆ ಪರಿಚಯಿಸಿ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡದ ಸೇನಾನಿ ಎಸ್. ಕೆ. ಸುಂದರ್ ಅವರು ಮಾತನಾಡಿ, ಅಡಿಗರ ಜನ್ಮ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆಯು ಒಂದು ಸುಯೋಗವಾಗಿದೆ. ಪ್ರತಿಷ್ಠಾನವು ಕಳೆದ ಒಂಬತ್ತು ವರ್ಷಗಳಿಂದ ಅರ್ಥಪೂರ್ಣವಾದ ಸಾಹಿತ್ಯ, ಸಾಂಸ್ಕೃತಿಕ ಹಾಗು ಐತಿಹಾಸಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖೀಸಿದರಲ್ಲದೇ. ಅಡಿಗರ ಮೊಗೆರಿ ಮನೆಗೆ ತಾವು ಭೇಟಿ ನೀಡಿರುವುದನ್ನು ಪ್ರಸ್ತಾಪಿಸಿ, ತೆಂಗು-ಕಂಗುಗಳಿಂದ ಕಂಗೊಳಿಸುವ ಆ ಸುಂದರ ಪರಿಸರವನ್ನು ನೆನಪಿಸಿದರಲ್ಲದೇ ಕಾರ್ಯಕ್ರಮದ ಉದ್ದೇಶವನ್ನು ಶ್ಲಾಘಿಸಿದರು.
ವಿದ್ಯಾ ದೇಶಪಾಂಡೆ, ಸೀಮಾ ಕುಲಕರ್ಣಿ, ವಾಸಂತಿ ಕೋಟೆಕಾರ್, ದಾûಾಯಿಣಿ ಯಡಹಳ್ಳಿ, ಶೈಲಜಾ ಹೆಗಡೆ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕು| ಅನಘಾ, ಸುದುಘಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಹೇಮಾ ಸದಾನಂದ ಅಮೀನ್ ನಿರೂಪಿಸಿದರು. ತನುಜಾ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ವಂದಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಗೋಪಾಲ್ ಉಳ್ಳೂರು ನೆರುಲ್ ಅವರ ಸಹಕಾರವನ್ನು ಸ್ಮರಿಸಲಾಯಿತು. ಹಿರಿಯ ಸಾಹಿತಿ ಆಲುಮೇಲು ಅಯ್ಯರ್, ಶಕುಂತಲಾ ಪ್ರಭು, ಗಿರಿಜಾ ಶಾಸ್ತ್ರಿ ಸೇರಿದಂತೆ ಹಿರಿ-ಕಿರಿಯ ಸಾಹಿತ್ಯಾಸಕ್ತರು ಭಾಗವಹಿಸಿ ಅಡಿಗರ ಶ್ರೇಷ್ಠತೆಯನ್ನು ನೆನಪಿಸಿದರು.