ಗೊರೇಬಾಳ: ಸಿಂಧನೂರು ನಗರದ ಕುಡಿಯುವ ನೀರಿನ ಕೆರೆ ಒಡೆಯಲು ಕಳಪೆ ಕಾಮಗಾರಿಯೇ ಕಾರಣವಾಗಿದೆ. ಕಾಮಗಾರಿ ಕಳಪೆ ಆಗುತ್ತಿದೆ ಎಂದು ತಾವು ಸಾರಿ ಸಾರಿ ಹೇಳಿದರೂ ಲೆಕ್ಕಿಸದೇ ಆಗಿನ ಶಾಸಕರಾದ ಹಂಪನಗೌಡ ಬಾದರ್ಲಿ ತರಾತುರಿಯಲ್ಲಿ ಹೋಮ ಮಾಡಿ ಕೆರೆ ಉದ್ಘಾಟಿಸಿದರು. ಇದು ಅವರ ಪಾಪದ ಕೂಸಾಗಿದೆ. ಹೋಮ ಮಾಡಿದರೆ ಪಾಪ ತೊಳೆಯುವುದೇ ಎಂದು ಸಚಿವ ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದರು.
ಮಂಗಳವಾರ ಸಿಂಧನೂರು ನಗರದ ಕುಡಿಯುವ ನೀರಿನ ಕೆರೆ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 24/7 ಕುಡಿಯುವ ನೀರಿನ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರದಲ್ಲಿ 6 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಿ ಇನ್ನೂ ಕೆಲವೇ ದಿನಗಳಲ್ಲಿ 5 ದಿನಕ್ಕೊಮ್ಮೆ ನೀರು ಪೂರೈಸಲಾಗುವದು ಎಂದು ಹೇಳಿದರು.
24/7 ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆ ಕಂಪನಿ ವ್ಯವಸ್ಥಾಪಕ ವಿಶ್ವೇಶ್ವರ ಅವರಿಗೆ ಕರೆ ಮಾಡಿದ ಸಚಿವರು, ಕಾಮಗಾರಿ ಮಾಹಿತಿ ಪಡೆದು, ವ್ಯವಸ್ಥಾಪಕರ ವಿರುದ್ಧ ಹರಿಹಾಯ್ದರು. ಮಂತ್ರಿಯಾದ ನನಗೆ ಇಷ್ಟೊಂದು ಸುಳ್ಳು ಹೇಳ್ತೀರಾ? ನಿಮ್ಮನ್ನು ಕೇಳಲು ನನಗೆ ನಾಚಿಕೆ ಇಲ್ದಂಗೆ ಹಾಗಿದೆ. ಪ್ರತಿ ಬಾರಿಯೂ ನನ್ನನ್ನು ಫೂಲ್ ಮಾಡಲು ಪ್ರಯತ್ನ ಮಾಡುತ್ತಿದ್ದೀರಾ? ನಾನು ಸ್ಥಳದಲ್ಲೇ ಇದ್ದೇನೆ. ಸುಳ್ಳು ಹೇಳುತ್ತಾ ಆಟ ಆಡ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು. ಗುತ್ತಿಗೆ ಕಂಪನಿಗೆ ನೋಟಿಸ್ ಜಾರಿ ಮಾಡುವಂತೆ ಮತ್ತು 17ರಂದು ಸಭೆ ಕರೆಯುವಂತೆ ಸಿಂಧನೂರು ನಗರಸಭೆ ಪೌರಾಯುಕ್ತರಿಗೆ ಸಚಿವರು ಸೂಚನೆ ನೀಡಿದರು.
ಮಾದರಿ ಕಾಯ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಭಿಮಾನಿ ಬಳಗದಿಂದ ಹಿರೇಹಳ್ಳ ಸ್ವಚ್ಛತೆಗೆ ಮುಂದಾಗಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಹಾಗೂ ಭಾರತೀಯ ಜೈನ ಸಂಘದಿಂದ ಹಿರೇಹಳ್ಳವನ್ನು ಆರಂಭದಿಂದ ಅಂತ್ಯದವರೆಗೂ ಸ್ವಚ್ಛತೆ ಮಾಡಲಾಗುವುದು. ಇದೇ 17ರಂದು ಸರ್ವೇ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಹಳ್ಳದ ಮಾಹಿತಿ ಪಡೆದು, ಶೀಘ್ರವೇ ಕೆಲಸ ಆರಂಭಿಸಲಾಗುವುದು. ಕಾಲುವೆಗೆ ನೀರು ಬಂದ ನಂತರ ಕೆರೆಗಳ ಹೂಳೆತ್ತಲಾಗುವುದು ಎಂದು ಹೇಳಿದರು.
ಲೋಕಸಭೆ ಚುನಾವಣಾ ಫಲಿತಾಂಶ ಬಂದ ನಂತರವೂ ರಾಜ್ಯದಲ್ಲಿ ರಾಜಕೀಯವಾಗಿ ಯಾವುದೇ ಬದಲಾವಣೆಯಾಗುವುದಿಲ್ಲ. ಏನಾದರೂ ಆದರೆ ಅದು ದೆಹಲಿಯಲ್ಲಿ ಆಗುತ್ತದೆ. ಬಿಜೆಪಿಯವರು ಅಧಿಕಾರ ಹಿಡಿಯುವ ತಿರುಕನ ಕನಸು ಕಾಣುತ್ತಿದ್ದಾರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ಕೆ.ಹನುಮೇಶ, ವೀರೇಶ ಹಟ್ಟಿ, ಮುಖಂಡ ಮಲ್ಲಿಕಾರ್ಜುನ ವಲ್ಕಂದಿನ್ನಿ, ಶರಣಬಸವ ನೆಟೆಕಲ್ ಇತರರು ಇದ್ದರು.