Advertisement

ಸಿಂಧನೂರು ಮಹಿಳೆ ಎನ್‌ಎಸ್‌ಜಿ ಕಮಾಂಡೋ

12:28 PM Nov 07, 2019 | Naveen |

ಗೊರೇಬಾಳ: ಗಡಿ ಕಾಯಲು ಯುವಕರೇ ಹಿಂಜರಿಯುವ ಈ ಕಾಲದಲ್ಲಿ ಬಿಸಿಲೂರಿನ ಯುವತಿ ನ್ಯಾಶನಲ್‌ ಸೆಕ್ಯುರಿಟಿ ಗಾರ್ಡ್‌ನ (ಎನ್‌ಎಸ್‌ಸಿ) ಬ್ಲಾಕ್‌ಕ್ಯಾಟ್‌ ಕಮಾಂಡೋದಲ್ಲಿ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾಳೆ.

Advertisement

ಸಿಂಧನೂರು ತಾಲೂಕಿನ ಅಮರಾಪುರ ಎಂಬ ಚಿಕ್ಕ ಗ್ರಾಮದ ರೇಣುಕಾ ರಾಷ್ಟ್ರ ರಾಜಧಾನಿಯಲ್ಲಿ ಜಿಲ್ಲೆಯ ಕೀರ್ತಿ ಬೆಳಗುತ್ತಿರುವುದು ವಿಶೇಷ. ದೇಶದ ಶ್ರೇಷ್ಠ ರಕ್ಷಣಾ ಪಡೆ ಎನಿಸಿಕೊಂಡಿರುವ ಎನ್‌ ಎಸ್‌ಜಿಯ ಬ್ಲಾಕ್‌ಕ್ಯಾಟ್‌ ಕಮಾಂಡೋ ಮಹಿಳಾ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಇಡೀ ದೇಶದಿಂದ ಆಯ್ಕೆಯಾದ 21 ಜನರಲ್ಲಿ ಇವರೂ ಇಬ್ಬರು ಎನ್ನುವುದು ಗಮನಾರ್ಹ.

ಬಡತನದ ಹಿನ್ನೆಲೆಯಲ್ಲಿಯೇ ಚೆನ್ನಾಗಿ ಓದುತ್ತಿದ್ದ ರೇಣುಕಾ, ತನ್ನ ಚಿತ್ತವನ್ನು ದೇಶದ ರಕ್ಷಣೆಯತ್ತ ಹರಿಸಿದರು. ನಮ್ಮ ದೇಶದ ರಕ್ಷಣೆ ನಾವಲ್ಲದೇ ಮತ್ಯಾರೂ ಮಾಡುವುದಿಲ್ಲ. ಸೈನ್ಯಕ್ಕೆ ಸೇರಲು ಹಿಂಜರಿಕೆ ಏಕೆ ಎನ್ನುವ ಗಟ್ಟಿತನದಲ್ಲೇ ಅವರೆಂಥ ಸಾಹಸಕ್ಕೂ ಕೈ ಹಾಕುವ ದಿಟ್ಟ ಮಹಿಳೆ ಎಂಬ ಸೂಕ್ಷ್ಮತೆ ತಿಳಿಯಲಿದೆ. ತಂದೆ ನಾಗಪ್ಪ ದಿನಗೂಲಿ ಮಾಡಿದರೆ, ತಾಯಿ ನಾಗಮ್ಮ ಅಂಗನವಾಡಿ ನೌಕರೆ.

ಇರುವುದು ಇಬ್ಬರೇ ಹೆಣ್ಣುಮಕ್ಕಳಾದರೂ ಮಗಳಾಸೆಯಂತೆ ಸೈನ್ಯಕ್ಕೆ ಸೇರಲು ಒಪ್ಪಿದ ಬಡ ಪಾಲಕರ ದೊಡ್ಡತನಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ವಿವಾಹವಾಗಿದ್ದರೂ ಪತಿ ದುರುಗಪ್ಪ ಅವರ ಪ್ರೋತ್ಸಾಹವೂ ಇದೆ.

ಎನ್‌ಸಿಸಿಯಿಂದ ಕಮಾಂಡೋ: ರೇಣುಕಾರ ಈ ಕಹಾನಿ ಹಿಂದೆ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಬಳ್ಳಾರಿಯಲ್ಲಿ ಡಿಫ್ಲೋಮಾ ಓದುವಾಗ ಎನ್‌ಸಿಸಿ ಸೇರಿದ ಅವರು ಅದನ್ನು ಬಲು ಶಿಸ್ತುಬದ್ಧವಾಗಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಸ್ನೇಹಿತರು, ಎನ್‌ಸಿಸಿ ಅಧಿಕಾರಿಗಳು ನೀನ್ಯಾಕೆ ಪೊಲೀಸ್‌ ಅಧಿಕಾರಿಯಾಗಲಿ, ಸೈನ್ಯಕ್ಕಾಗಲಿ ಸೇರಬಾರದು ಎಂದರು. ಅಲ್ಲದೇ, ಖಾಕಿ ಧಿರಿಸಿನಲ್ಲಿ ರೇಣುಕಾರನ್ನು ನೋಡಿದವರಿಗೆ ಅವರಲ್ಲೊಬ್ಬ ದಕ್ಷ ಭದ್ರತಾ ಸಿಬ್ಬಂದಿ ಕಾಣುತ್ತಿದ್ದರಂತೆ.

Advertisement

ಇದರಿಂದ ಪ್ರೇರಿತರಾದ ಅವರು 2014ರಲ್ಲಿ ಸೈನ್ಯದ ಪರೀಕ್ಷೆಗೆ ಹಾಜರಾದರು. ಅದರ ಜತೆಗೆ ರಾಜ್ಯದ ಪೊಲೀಸ್‌ ಪರೀಕ್ಷೆಯನ್ನೂ ಬರೆದರು. ಎರಡರಲ್ಲೂ ಆಯ್ಕೆಯಾದ ಅವರನ್ನು ಸೆಳೆದಿದ್ದು ಮಾತ್ರ ಗಡಿ ಕಾಯುವ ಸೈನ್ಯ.

ಎಲ್ಲ ಪರೀಕ್ಷೆ ಪಾಸ್‌: 2014ರಲ್ಲಿ ಸೈನ್ಯಕ್ಕೆ ಸೇರಿದ ರೇಣುಕಾ ಪಂಜಾಬ್‌ ನಲ್ಲಿ ಒಂದು ವರ್ಷದ ತರಬೇತಿ ಪಡೆದರು. ಬಳಿಕ ಪಶ್ಚಿಮ ಬಂಗಾಳದ ಮಾಲ್ಡಾದ ಬಿಎಸ್‌ಎಫ್‌ನ 31ನೇ ಬೆಟಾಲಿಯನ್‌ ನಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿ ಸುಮಾರು ನಾಲ್ಕು ವರ್ಷ ಸೇವೆ ಬಳಿಕ 2018ರಲ್ಲಿ 60ನೇ ಬೆಟಾಲಿಯನ್‌ನಲ್ಲಿ ವರ್ಗಾವಣೆ ಮಾಡಲಾಯಿತು.

ದೈಹಿಕ ಪರೀಕ್ಷೆಗಳಲ್ಲದೇ, ಕಂಪ್ಯೂಟರ್‌ನಲ್ಲೂ ಜ್ಞಾನ ಹೊಂದಿದ್ದ ಅವರಿಗೆ ಅಲ್ಲಿ ಆಲ್‌ರೌಂಡರ್‌ ಪ್ರಶಸ್ತಿ ಕೂಡ ಲಭಿಸಿತ್ತು. ಇದು ಅವರು ಎನ್‌ಎಸ್‌ಜಿ ಸೇರಲು ನೆರವಾಯಿತು.

ಮೊಟ್ಟ ಮೊದಲ ಬಾರಿಗೆ ಮಹಿಳೆಯರ ತಂಡ ರಚನೆಗೆ ಮುಂದಾದ ಎನ್‌ಎಸ್‌ಜಿ ಅದಕ್ಕೆ ತಕ್ಕನಾದ ಪ್ರತಿಭೆಗಳ ಹುಡುಕಾಟದಲ್ಲಿತ್ತು. ಅದಕ್ಕಾಗಿ ಒಂದು ತಿಂಗಳ ತರಬೇತಿ ನಡೆಯಿತು. ಅದರಲ್ಲಿ ಗಮನ ಸೆಳೆದ ರೇಣುಕಾ ಮುಂದೆ ಮೂರು ತಿಂಗಳ ವಿಶೇಷ ತರಬೇತಿಗೆ ಆಯ್ಕೆಯಾದರು. ಅಲ್ಲಿನ ಕಠಿಣ ಪರೀಕ್ಷೆಗಳನ್ನು ಎದುರಿಸಿದ 21 ಜನರಲ್ಲಿ ಇವರು ಒಬ್ಬರಾಗಿದ್ದು ವಿಶೇಷ.

ವಿಶೇಷ ಸಂದರ್ಭದಲ್ಲಿ ಬಳಕೆ: ದೇಶದಲ್ಲಿ ತೀರ ಸಂಕಷ್ಟಮಯ ಸಂದರ್ಭಗಳಲ್ಲಿ ಮಾತ್ರ ಈ ಕಮಾಂಡೊಗಳ ಬಳಕೆಯಾಗುತ್ತದೆ. ಭಯೋತ್ಪಾದನೆ ಚಟುವಟಿಕೆ, ರಾಷ್ಟ್ರಮಟ್ಟದ ನಾಯಕರ ಭದ್ರತೆ ಸೇರಿದಂತೆ ತೀರ ವಿಷಮ ಸ್ಥಿತಿಗಳಲ್ಲಿ ಇವರ ಸೇವೆ ಅಗತ್ಯ. ಈಗ ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೇಣುಕಾರಿಗೆ ಇನ್ನೂ ಅಂಥ ಯಾವುದೇ ಸಂದರ್ಭಗಳು ಎದುರಾಗಿಲ್ಲ.

ಹಾಗಂತ ವಿರಮಿಸುವುದಿಲ್ಲ. ನಿರಂತರ ಚಟುವಟಿಕೆ, ಅಭ್ಯಾಸದಲ್ಲೇ ಇರುತ್ತೇವೆ. ಯಾವ ಕ್ಷಣದಲ್ಲಾದರೂ ಕರೆ ಬರುವ ಸಾಧ್ಯತೆ ಇರುವುದರಿಂದ ಅಲರ್ಟ್‌ ಆಗಿರುತ್ತೇವೆ ಎನ್ನುತ್ತಾರೆ ರೇಣುಕಾ.

Advertisement

Udayavani is now on Telegram. Click here to join our channel and stay updated with the latest news.

Next