ಬೆಂಗಳೂರು: ದೇಶದ ಸರ್ವೋಚ್ಛ ನ್ಯಾಯಾಲಯ ರಾಜಿನಾಮೆ ನೀಡಿರುವ ಶಾಸಕರನ್ನು ಅನರ್ಹರೆಂದು ತೀರ್ಪು ನೀಡಿದ್ದು ಜನತಾ ನ್ಯಾಯಾಲಯದಲ್ಲೂ ಕಳಂಕಿತರಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಶಿವರಾಜು ವಿಶ್ವಾಸ ವ್ಯಕ್ತಪಡಿಸಿದರು.
ನಂದಿನಿ ಲೇಔಟ್, ವೃಷಭಾವತಿನಗರ ಹಾಗೂ ಶಂಕರ ಮಠ ವಾರ್ಡ್‌ಗಳ ಜೈಮಾರುತಿನಗರ, ಕುರುಬರಹಳ್ಳಿ ಸೇರಿದಂತೆ ಕ್ಷೇತ್ರದ ಹಲವಾರು ಪ್ರದೇಶಗಳಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ಬಾಲಕೃಷ್ಣ ಹಾಗೂ ಕಾಂಗ್ರೆಸ್ ಮುಖಂಡರ ಜತೆಗೂಡಿ ಭರ್ಜರಿ ಪ್ರಚಾರ ನಡೆಸಿದ ವೇಳೆ ಮಾತನಾಡಿದರು.
ಅನರ್ಹ ಶಾಸಕರು ಪಕ್ಷ ಹಾಗೂ ಮತದಾರರನ್ನು ವಂಚಿಸಿದ್ದಾರೆ. ಹಣದಿಂದ ಮತಗಳನ್ನು ಖರೀದಿಸಬ ಹುದೆಂಬ ಭ್ರಮೆಯಲ್ಲಿದ್ದಾರೆ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ರಾಜ ಕಾರಣದಲ್ಲಿ ಮುಂದುವರಿಯಬಾರದು. ಅಧಿಕಾ ರದ ಲಾಲಸೆಯಿಂದ ಉಪ ಚುನಾವಣೆ ಬಂದಿದೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಪ್ರಜ್ಞಾವಂತ ಮತದಾರರು ಅನರ್ಹರಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಮನವಿ ಮಾಡಿದರು.
ಕ್ಷೇತ್ರಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಸಾಕಷ್ಟು ಅನುದಾನ ಹರಿದು ಬಂದಿದೆ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ, ರಾಜೀನಾಮೆ ನೀಡಿದ್ದೇನೆಂಬ ಬಿಜೆಪಿ ಅಭ್ಯರ್ಥಿಯ ಮಾತು ಹಸಿ ಸುಳ್ಳು. ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳದಷ್ಟು ಕ್ಷೇತ್ರದ ಜನರು ದಡ್ಡರಲ್ಲ ಎಂದು ಗೋಪಾಲಯ್ಯ ವಿರುದ್ಧ ಗುಡುಗಿದರು.
ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ ಜಾತಿ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು. ಹೆಚ್.ಸಿ ಬಾಲಕೃಷ್ಣರವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜು ಪಾಲಿಕೆ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ.
ತಾನು ಪ್ರತಿನಿಧಿಸಿದ್ದ ವಾರ್ಡ್‌ಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ್ದಾರೆ. ತೆರಿಗೆ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಗೂ ನೆರವಾಗಿದ್ದಾರೆ. ದೂರದೃಷ್ಟಿಯುಳ್ಳ ನಾಯಕ ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ಖಂಡಿತ ಒಳ್ಳೆಯದಾಗುತ್ತದೆ. ಮತದಾರರು ಶಿವರಾಜು ಅವರನ್ನು ಕೈಹಿಡಿಯುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು
ಕಾಂಗ್ರೆಸ್ ಮುಖಂಡರಾದ ರಘುವೀರ್ ಗೌಡ, ರವಿ ಗಾಣಿಗ ಮತ್ತು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಎಂ ಶಿವರಾಜು ಜತೆಗೂಡಿ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಜನಾದೇಶ ಪಡೆದಿಲ್ಲ ವಾಮಮಾರ್ಗದಿಂದ ಅಧಿಕಾರ ಹಿಡಿದಿರುವ ಪಕ್ಷದಿಂದ ಜನಪರ ಆಡಳಿತ ನೀಡಲು ಸಾಧ್ಯವಿಲ್ಲ. ಜನತೆಗೆ ಇದು ಗೊತ್ತಿದೆ.
-ಕೆ.ಜೆ. ಜಾರ್ಜ್, ಮಾಜಿ ಸಚಿವ