Advertisement

Gopalswami Hills: ಸಂಕಷ್ಟಗಳ ಸುಳಿಗೆ ಸಿಲುಕಿದ ಗೋಪಾಲಸ್ವಾಮಿ ಭಕ್ತರು

03:40 PM Aug 23, 2023 | Team Udayavani |

ಗುಂಡ್ಲುಪೇಟೆ: ಹೇಳಿಕೊಳ್ಳಲು ಪ್ರಖ್ಯಾತ ದೇಗುಲ. ಆದರೆ, ಸಮರ್ಪಕ ಶುದ್ಧ ನೀರಿಲ್ಲ, ಪಾರ್ಕಿಂಗ್‌ ಮಾಡಿದ ವಾಹನಗಳಿಗೆ ನೆರಳಿನ ವ್ಯವಸ್ಥೆಯಿಲ್ಲ, ಬೆಟ್ಟದಲ್ಲಿರುವ ಸ್ವಾಮಿಯ ದರ್ಶನಕ್ಕೆ ಸರ್ಕಾರಿ ಬಸ್‌ ಹತ್ತಲು ಹೋದರೆ, ಅಲ್ಲಿಯೂ ಕನಿಷ್ಠ ಆಸನಗಳ ವ್ಯವಸ್ಥೆಯಿಲ್ಲ, ಬಿಸಿಲಿನಲ್ಲೇ ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ ತೆಗೆದುಕೊಳ್ಳಬೇಕಿದೆ. ಇನ್ನು ದುರ್ನಾತ ಬೀರುವ ಶೌಚಾಲಯವನ್ನೂ ದುಪ್ಪಟ್ಟು ಹಣ ನೀಡಿ ಬಳಸಬೇಕಿದೆ!.

Advertisement

ಹೌದು, ಈ ಸಮಸ್ಯೆ ಯಾವುದೋ ಸಣ್ಣ ದೇಗುಲದ ಭಕ್ತರದ್ದಲ್ಲ. ಬದಲಾಗಿ ಪ್ರಖ್ಯಾತಿ ಹೊಂದಿರುವ, ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಹಾಗೂ ಅರಣ್ಯ ಇಲಾಖೆಗೂ ಆದಾಯ ನೀಡುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇಗುಲದ ಭಕ್ತರದ್ದಾಗಿದೆ.

ಪ್ರಾಕೃತಿಕ ಸೌಂದರ್ಯ ಹೊಂದಿರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಭಕ್ತರು ಅಗತ್ಯ ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.

ಪ್ರತಿನಿತ್ಯ ಬೆಂಗಳೂರು, ಮೈಸೂರು, ಕೇರಳ, ತಮಿಳುನಾಡಿನಿಂದ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆಯೂ ದುಪ್ಪಟ್ಟಾಗುತ್ತದೆ. ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧ ಹಿನ್ನೆಲೆ ತಮ್ಮ ಸ್ವಂತ ವಾಹನದಲ್ಲಿ ಆಗಮಿಸಿ ತಪ್ಪಲಿನಲ್ಲಿ ಪಾರ್ಕಿಂಗ್‌ ಮಾಡಿ ಬೆಟ್ಟಕ್ಕೆ ತೆರಳುತ್ತಾರೆ. ಆದರೆ, ತಪ್ಪಲಿನಲ್ಲಿ ಮೂಲ ಸೌಕರ್ಯಗಳಿಲ್ಲದೆ ಭಕ್ತರ ಪರದಾಟ ಹೇಳತೀರದಾಗಿದೆ.

ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ: ಬೆಟ್ಟದ ತಪ್ಪಲಿನಲ್ಲಿ ಖಾಸಗಿ ವಾಹನಕ್ಕೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರಿಗೆ 59 ರೂ., ಟಿಟಿ ವಾಹನಕ್ಕೆ 83, ಖಾಸಗಿ ಬಸ್‌ಗೆ 118 ರೂ. ಹಾಗೂ ಬೈಕ್‌ಗೆ 20 ರೂ. ನಿಗದಿ ಮಾಡಲಾಗಿದೆ. ತಿಂಗಳಿಗೆ ಸುಮಾರು 60-70 ಸಾವಿರ ಆದಾಯ ಬರುತ್ತದೆ. ಆದರೆ, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಾಹನ ಬಿರು ಬಿಸಿಲಿನಲ್ಲಿ ಗಂಟೆಗಟ್ಟಲೇ ನಿಲ್ಲುವಂತಾ ಗಿದೆ. ಜತೆಗೆ ಪಾರ್ಕಿಂಗ್‌ ಸ್ಥಳ ಇಳಿಜಾರಾಗಿದ್ದು, ಮಳೆ ಬಂದ ಸಂದರ್ಭ ದಲ್ಲಿ ಕೆಸರು ಗದ್ದೆಯಂತಾ ಗುತ್ತಿದೆ.

Advertisement

ಕೆಟ್ಟುನಿಂತ ಶುದ್ಧ ನೀರಿನ ಘಟಕ: ತಪ್ಪಲಿನಲ್ಲಿ ವಾಹನ ಪಾರ್ಕಿಂಗ್‌ಗೆ ಹೊಂದಿ ಕೊಂಡಂತೆ ನಿರ್ಮಾಣ ಮಾಡಿ ರುವ ಶುದ್ಧ ನೀರಿನ ಘಟಕ ಕೆಟ್ಟುನಿಂತು ಹಲವು ತಿಂಗಳುಗಳೇ ಕಳೆದಿವೆ. ಹೀಗಿದ್ದರೂ ಅರಣ್ಯ ಇಲಾಖೆ ದುರಸ್ತಿಪಡಿಸಿಲ್ಲ. ಪರೋಕ್ಷವಾಗಿ ಅರಣ್ಯ ಇಲಾಖೆಯೇ ನಿಷೇಧಿಸಿರುವ ಪ್ಲಾಸ್ಟಿಕ್‌ ನೀರಿನ ಬಾಟಲ್‌ಗೆ ಉತ್ತೇಜನ ನೀಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಬಿಸಿಲಿನಲ್ಲೇ ಭಕ್ತರು ಬಸ್‌ಗಳನ್ನು ಹತ್ತುತ್ತಾರೆ:  ತಪ್ಪಲಿನಲ್ಲಿ ಕೆಎಸ್‌ಆರ್‌ಟಿಸಿಯಿಂದ ನಿರ್ಮಿಸಿರುವ ಕೌಂಟರ್‌ನಲ್ಲಿ ಟಿಕೆಟ್‌ ಖರೀದಿಸಿ ಬಸ್‌ ಹತ್ತಬೇಕಾಗಿದೆ. ಈ ಮಧ್ಯೆ ವಾರಾಂತ್ಯ, ರಜೆ, ವಿಶೇಷ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸಲಿದ್ದು ಟಿಕೆಟ್‌ ಖರೀದಿಗೆ ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಿದೆ. ಜತೆಗೆ ಬಸ್ಸಿಗೂ ಕಾಯಬೇಕಾಗಿದೆ. ಕೆಲವರು ಮರದ ನೆರಳಿನ ಮೊರೆ ಹೋದರೆ, ಇನ್ನೂ ಕೆಲವರು ಬಿಸಿಲಿನಲ್ಲೇ ನಿಲ್ಲಬೇಕಿದೆ.

ಶೌಚಾಲಯಕ್ಕೆ ದುಪ್ಪಟ್ಟು ಹಣ: ಬೆಟ್ಟದ ತಪ್ಪಲಿನ ಪಾರ್ಕಿಂಗ್‌ ಪ್ರದೇಶದಲ್ಲಿನ ಶೌಚಾಲಯಗಳು ದುರ್ನಾತ ಬೀರುತ್ತಿವೆ. ಮೂಗು ಮುಚ್ಚಿಕೊಂಡೇ ಬಳಕೆ ಮಾಡಬೇಕಿದೆ. ಈ ಮಧ್ಯೆ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಸಾಕಷ್ಟು ಆದಾಯವಿದ್ದರೂ ಅಭಿವೃದ್ಧಿಯಿಲ್ಲ:  ಪಾರ್ಕಿಂಗ್‌ ಶುಲ್ಕ, ಬಸ್‌ ಟಿಕೆಟ್‌, ದೇಗುಲ ಹುಂಡಿ ಹಣ ಸೇರಿ ದಾನಿಗಳಿಂದ ಸಾಕಷ್ಟು ಆದಾಯವಿದೆ. ಹೀಗಿದ್ದರೂ, ಮೂಲ ಸೌಕರ್ಯ ನೀಡಲು ಅರಣ್ಯ ಇಲಾಖೆ, ತಾಲೂಕು ಆಡಳಿತ ಮನಸ್ಸು ಮಾಡುತ್ತಿಲ್ಲವೆಂದು ಪರಿಸರವಾದಿ ಬೇಂಡರವಾಡಿ ಆನಂದ್‌ ದೂರಿದ್ದಾರೆ.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ, ಕೆಟ್ಟುನಿಂತ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಸೇರಿ ಇನ್ನಿತರ ಹಲವು ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು.-ಪಿ.ರಮೇಶ್‌ಕುಮಾರ್‌, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ  

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next