Advertisement

ಕವಿಸಮಯ: ಕವಿ ಗೋಪಾಲಕೃಷ್ಣ ಅಡಿಗ

10:19 AM Feb 24, 2020 | mahesh |

ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ!

Advertisement

1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ ಎಂಬ ಕವನ ಸಂಕಲನತ್ತು. ಅದುವರೆಗೆ ಕುವೆಂಪು, ದ. ರಾ. ಬೇಂದ್ರೆ, ಕೆ. ಎಸ್‌. ನರಸಿಂಹಸ್ವಾಮಿ ಮೊದಲಾದವರ ಕೆಲವು ಕವನಗಳನ್ನು ಓದಿದ್ದ ನನಗೆ ಆ ಸಂಕಲನದ ಕೆಲವು ದೀರ್ಘ‌ ಕವನಗಳನ್ನು ಓದಿದಾಗ ಕಂಡುಕೇಳರಿಯದ ಹೊಸದೊಂದು ಜಗತ್ತನ್ನು ಪ್ರವೇಶಿಸಿದಂತಾಯಿತು. ಕಾವ್ಯವೆಂದರೆ ತೀವ್ರವಾದ ಭಾವನೆಗಳನ್ನು ಮನಮುಟ್ಟುವ ಹಾಗೆ ವ್ಯಕ್ತಪಡಿಸುವುದು ಎನ್ನುವುದೇ ಕಾವ್ಯದ ಬಗ್ಗೆ ಸಾಮಾನ್ಯ ಧೋರಣೆಯಾಗಿದ್ದ ಕಾಲದಲ್ಲಿ ಆ ಕವನಗಳು ಹೊಸ ಭಾಷೆಯಲ್ಲಿ, ಅರ್ಥಾನುಸಾರಿಯಾದ ಲಯದಲ್ಲಿ, ನಾಟಕೀಯ ಧಾಟಿಯಲ್ಲಿ, ಪ್ರತಿಮಾಲಂಕಾರದಲ್ಲಿ, ಎಂಥವರನ್ನಾದರೂ ಚುಚ್ಚುವಂಥ ವ್ಯಂಗ್ಯದಲ್ಲಿ, ಅಕರಾಳಕರಾಳವೆನ್ನಿಸುವಂಥ ಪ್ರತಿಮೆ, ವಿವರಗಳಲ್ಲಿ ನವೋದಯದ ಕಾವ್ಯಕ್ಕಿಂತ ತೀರ ಭಿನ್ನವಾದ, ಎಲ್ಲ ರೀತಿಯಿಂದಲೂ ಸೊÌàಪಜ್ಞವಾದ, ನಿಜಕ್ಕೂ ಬೆರಗುಹುಟ್ಟಿಸುವಂಥ ಹೊಚ್ಚಹೊಸ ದನಿಯನ್ನು ಕಂಡುಕೊಂಡಿದ್ದುವು. ಆ ಕವನಗಳನ್ನು ರಚಿಸಿದ್ದವರು ಮೊಗೇರಿ ಗೋಪಾಲಕೃಷ್ಣ ಅಡಿಗರು; ಮುಂದೆ ಕನ್ನಡ ಕಾವ್ಯ ಪರಂಪರೆಗೆ ಹೊಸ ನೀರು ಹರಿಸಿ ಮಾರ್ಗಪ್ರವರ್ತಕರೆನಿಸಿದ ಕವಿವರ್ಯರು.

ಕೆಲವು ವರ್ಷಗಳ ನಂತರ ಪ್ರಕಟವಾದದ್ದು ಅವರ ಭೂಮಿಗೀತ.ಅದರಲ್ಲಿನ ಕವನಗಳನ್ನೂ ಓದಿದ ಮೇಲೆ ನನ್ನಲ್ಲಿ ಎಂದಾದರೊಂದು ದಿನ ಅವರನ್ನು ನೋಡಲೇಬೇಕೆಂಬ ಆಸೆ ಮೊಳೆಯಿತು. 1972ರಲ್ಲಿ ಒಂದು ದಿನ ಗೆಳೆಯ ಬಾಕಿನ ಜಯನಗರದಲ್ಲಿದ್ದ ಅವರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಪರಿಚಯಮಾಡಿಕೊಟ್ಟ.
.
ಗೋಪಾಲಕೃಷ್ಣ ಅಡಿಗರು ಅನೇಕ ವರ್ಷ ಮೈಸೂರಿನ ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರಷ್ಟೆ. ಆ ಕಾಲದಲ್ಲಿ ಅವರು ಅಲ್ಲಿನ ಒಂದು ಕಾಫಿ ಹೌಸ್‌ನಲ್ಲಿ ಪ್ರತಿದಿನ ಸಂಜೆ ಅನೇಕ ಮಂದಿ ಕಿರಿಯರ ಜೊತೆ ಸಾಹಿತ್ಯದ ಬಗ್ಗೆ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ರಾಜಕೀಯ ವೈಪರೀತ್ಯಗಳ ಬಗ್ಗೆ ಗಾಢವಾಗಿ ಚರ್ಚಿಸುತ್ತಿದ್ದರೆಂದು ಕೇಳಿದ್ದೆ. ಸುಮತೀಂದ್ರ ನಾಡಿಗರು ಗಾಂಧಿ ಬಜಾರಿನಲ್ಲಿ ಕರ್ನಾಟಕ ಬುಕ್‌ ಹೌಸ್‌ ಎಂಬ ಒಂದು ಪುಸ್ತಕದಂಗಡಿ ತೆರೆದ ಮೇಲೆ ಬಹುಶಃ ಅಂಥದೇ ರೀತಿಯ ಚರ್ಚಾಕೂಟ ಬೆಂಗಳೂರಿನಲ್ಲೂ ಶುರುವಾಯಿತೆನ್ನಬೇಕು. ಅಡಿಗರು ಹೆಚ್ಚು ಕಡಿಮೆ ಪ್ರತಿದಿನವೂ ಜಯನಗರದಲ್ಲಿದ್ದ ತಮ್ಮ ಮನೆಯ ಬಳಿ ಒಂದು ಆಟೋ ಹತ್ತಿ ಸಂಜೆ ಸುಮಾರು ಐದು ಗಂಟೆಯ ಹೊತ್ತಿಗೆ ಗಾಂಧಿ ಬಜಾರಿಗೆ ಬರುತ್ತಿದ್ದರು. ನಾನು, ಬಾಕಿನ, ಎ. ಎನ್‌. ಪ್ರಸನ್ನ, ಸುಮತೀಂದ್ರ ನಾಡಿಗ, ಬಿ. ಜಿ. ಪೈ, ಇನ್ನೂ ಕೆಲವರು ಅವರನ್ನು ಎದುರುಗೊಳ್ಳುತ್ತಿದ್ದೆವು. ಒಮ್ಮೊಮ್ಮೆ ನಿಸಾರ್‌ ಅಹಮದ್‌, ಜಿ.ಕೆ.ಗೋವಿಂದರಾವ್‌, ಲಕ್ಷ್ಮೀನಾರಾಯಣ ಭಟ್ಟ, ವೈಯೆನೆ ಮೊದಲಾದವರೂ ಜೊತೆಗಿರುತ್ತಿದ್ದರು. ಎಲ್ಲರೂ ಅಡಿಗರ ಜೊತೆ ಆ ಕಾಲದಲ್ಲಿದ್ದ ಸನ್ಮಾನ್‌ ಹೋಟೆಲಿಗೆ ಹೋಗಿ, ಕಾಫಿ ಕುಡಿದು, ಆ ಹೋಟೆಲಿನ ಬಳಿಯಲ್ಲೇ ಇದ್ದ ಕೆನರಾ ಬ್ಯಾಂಕಿನ ಮೆಟ್ಟಿಲುಗಳ ಮೇಲೆ ಕುಳಿತು ಅಡಿಗರ ಯೋಚನಾ ಸರಣಿಗೆ ತಕ್ಕಂತೆ ನಮ್ಮ ನಮ್ಮ ಮನಸ್ಸು ಬುದ್ಧಿಗಳನ್ನು ಹದಮಾಡಿಕೊಳ್ಳುವುದು ಒಂದು ರೂಢಿಯೇ ಆಗಿಬಿಟ್ಟಿತು.

1975ರ ಜೂನ್‌ 26ರಂದು ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರಲ್ಲವೆ? ಮಾರನೆಯ ಬೆಳಿಗ್ಗೆ ನಾವೆಲ್ಲ ಆ ಬಗ್ಗೆ ಪತ್ರಿಕೆಗಳಲ್ಲಿ ಓದಿದರೂ ನಮ್ಮಲ್ಲಿ ಕೆಲವರಿಗೆ ಅಂಥ ಶಾಸನದಿಂದ ಏನೇನು ಅನರ್ಥವಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಅದೇ ಸಂಜೆ ಅಡಿಗರು ಎಂದಿನಂತೆ ಗಾಂಧಿ ಬಜಾರಿಗೆ ಬಂದರು. ಎಂದಿನಂತೆ ನಾವು ಮೂವರು ನಾಲ್ವರು ಅವರ ಜೊತೆ ಹೋಟೆಲಿನಲ್ಲಿ ಕಾಫಿ ಕುಡಿದೆವು. ಹೋಟೆಲಿನಲ್ಲಿ ಕುಳಿತಿದ್ದಷ್ಟು ಹೊತ್ತು ಅವರು ಹೆಚ್ಚೇನೂ ಮಾತಾಡಲಿಲ್ಲ. ಅಂದಿನ ಅವರ ಆ ವ್ಯಗ್ರತೆಗೆ ಕಾರಣವೇನೆಂದು ನಾವೂ ಊಹಿಸಲಾಗಲಿಲ್ಲ. ಹೋಟೆಲಿನಿಂದ ಹೊರಗೆ ಬಂದು ಎಂದಿನಂತೆ ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, “ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ? ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ’ ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು, “ಬರುತ್ತೇನೆ, ನಾಳೆ ನೋಡೋಣ’ ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನೇನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಅದರ ಬಳಿಗೆ ಓಡಿದೆ. ಅಡಿಗರು ಕೆಳಗಿಳಿದು ನನ್ನ ಭುಜ ಹಿಡಿದುಕೊಂಡು ನಾವೀಗ ಬಾಂಬು ಮಾಡಬೇಕು ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡರು. ಮರುದಿನ ಎಂದಿನಂತೆ ಅವರು ಗಾಂಧಿ ಬಜಾರಿನತ್ತ ಸುಳಿಯಲಿಲ್ಲ. ಆಮೇಲಿನ ಎರಡು ದಿನವೂ ಅವರ ಪತ್ತೆಯಿಲ್ಲ. ಬಹುಶಃ ಬಾಂಬು ಮಾಡುತ್ತಿರಬೇಕು ಎಂದು ನಾವು ಕೆಲವರು ತಮಾಷೆ ಮಾಡಿದೆವು. ಆದರೆ, ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ಸುಮತೀಂದ್ರ ನಾಡಿಗರ ಕೈಗಿತ್ತರು. ಅದನ್ನು ತೆರೆದು ನೋಡಿದರೆ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಕವನ- ನಿನ್ನ ಗ¨ªೆಗೆ ನೀರು.

ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು
ಬೇಕಾದದ್ದು ಬೆಳೆದುಕೋ ಬಂಧು
ಕಲೆ ಧರ್ಮನ್ಯಾಯ ಕಾನೂನು ಸ್ವಾತಂತ್ರ್ಯ ಇತ್ಯಾದಿ ಮೂಲವ್ಯಾಧಿ,
ನನ್ನ ಕುರ್ಚಿಗೆ ತಕ್ಕ ಗಾದಿ.
ಮುಖ್ಯವಾದ ಮಾತೆಂದರೆ ಓ ಭಾರತ ಸಂಸ್ಕೃತಿಯ ಮುಖ್ಯ ಪ್ರಾಣ,
ಬಾಲವಾಡಿಸಬಾರದು, ಹಲ್ಲು ಕಿರಿಯಬಾರದು,
ಹುಬ್ಬೇರಿಸುವ್ಯದಂತೂ ಬಹಳ ದೊಡ್ಡ ಗುನ್ಹೆ,
ಹಿಂದಿನ ಪಾಷಂಡನ, ಇಂದಿನ ಫ್ಯಾಸಿಸ್ಟನ ಚಿಹ್ನೆ;
ತಾಳಲಯಕ್ಕೆ ಸರಿ ಲಾಗ ಹಾಕುವುದೆ ಲಾಗಾಯ್ತಿನ ಹಿರಿಮೆ.

Advertisement

ಬಹುಶ‌ಃ ಒಬ್ಬ ಕವಿಮಾಡಬಹುದಾದ ಬಾಂಬೆಂದರೆ ಇದೇ ಅಲ್ಲವೆ? 
(ಅಭಿನವ ಪ್ರಕಾಶನ ಪ್ರಕಟಿಸುತ್ತಿರುವ ಗೋಪಾಲಕೃಷ್ಣ ಅಡಿಗರ ಕುರಿತಾದ ಕೃತಿ ಸ್ವಯಂದೀಪಕತೆಯ ಆಯ್ದ ಭಾಗ ಮಾತ್ರ ಇಲ್ಲಿದೆ)

ರೇಖೆ : ರಘುಪತಿ ಶೃಂಗೇರಿ
ಕೃಪೆ : ಫೇಸ್‌ಬುಕ್‌

ಎಸ್‌. ದಿವಾಕರ್‌

Advertisement

Udayavani is now on Telegram. Click here to join our channel and stay updated with the latest news.

Next