Advertisement

ಗೋಪಾಡಿ: ಆತಂಕ ಸೃಷ್ಟಿಸಿದ್ದ ಶಿಥಿಲ ನೀರಿನ ಓವರ್‌ ಹೆಡ್‌ ಟ್ಯಾಂಕ್‌ ತೆರವು

08:57 PM Nov 24, 2019 | Sriram |

ಕೋಟೇಶ್ವರ: ಗೋಪಾಡಿ ಗ್ರಾ.ಪಂ. ವ್ಯಾಪ್ತಿಯ ಬೀಜಾಡಿ ಬೈಪಾಸ್‌ ಬಳಿಯಲ್ಲಿದ್ದ ಸುಮಾರು 35 ವರ್ಷ ಹಳೆಯದಾದ ಕುಡಿಯುವ ನೀರು ಪೂರೈಕೆಯ ಓವರ್‌ ಹೆಡ್‌ ಟ್ಯಾಂಕ್‌ ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದಿದ್ದು ಇತ್ತೀಚೆಗೆ ಉಡುಪಿ ಡಿಸಿ ಜಿ. ಜಗದೀಶ್‌ ಅವರು ನಿರುಪಯುಕ್ತ ಟ್ಯಾಂಕ್‌ ತೆರವಿಗೆ ಆದೇಶಿಸಿದ್ದರು. ಟ್ಯಾಂಕ್‌ ತೆರವು ಕಾರ್ಯ ಶುಕ್ರವಾರದಿಂದ ಆರಂಭಗೊಂಡಿದ್ದು ಶನಿವಾರ ಸಂಜೆಯವರೆಗೂ ನಿರಂತರ ನಡೆದು ತೆರವು ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

Advertisement

ಉದಯವಾಣಿ ಈ ಬಗ್ಗೆ ಹಲವು ಬಾರಿ ವಿಸ್ತ್ರತ ವರದಿ ಮಾಡಿ ಅಧಿಕಾರಿಗಳ ಗಮನಸಳೆದಿತ್ತು.2 ದಿನಗಳ ನಿರಂತರ ಪ್ರಯತ್ನದ ಫ‌ಲ ಶುಕ್ರವಾರ ಬೆಳಗ್ಗೆ 10 ಗಂಟೆಗೆ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಮೊದಲಿಗೆ ಟ್ಯಾಂಕ್‌ ಪಿಲ್ಲರ್‌ ಒಂದರ ಕಾಂಕ್ರೀಟ್‌ ಪದರವನ್ನು ಕಟ್ಟಿಂಗ್‌ ಮೆಷಿನ್‌ ಮೂಲಕ ಕತ್ತರಿಲಾಗಿತ್ತು. ಬಳಿಕ ಮತ್ತೂಂದು ಪಿಲ್ಲರ್‌ಗಳನ್ನು ಕೂಡ ಅದೇ ಮಾದರಿಯಾಗಿ ಕತ್ತರಿಸಲಾಗಿತ್ತು. ಎರಡು ಪಿಲ್ಲರ್‌ ಕತ್ತರಿಸಿದಾಗಲೂ ಟ್ಯಾಂಕ್‌ ಮೇಲ್ಭಾಗದ ಡೂಮ್‌ ಕುಸಿಯದ ಕಾರಣ ಮತ್ತೂಂದು ಪಿಲ್ಲರ್‌ ಕೂಡ ಕತ್ತರಿಸಿ ಕ್ರೇನ್‌ ಮೂಲಕ ಮೇಲ್ಭಾಗಕ್ಕೆ ರೋಪ್‌ ಅಳವಡಿಸಿ ಎಳೆಯಲಾಯಿತು. ಆದರೆ ರೋಪ್‌ ತುಂಡರಿಸಿತೇ ಹೊರತು ಟ್ಯಾಂಕ್‌ ಕೊಂಚವೂ ಮಿಸುಕಾಡಲಿಲ್ಲ. ತಡರಾತ್ರಿ 12.30ರ ವರೆಗೂ ಕಾರ್ಯಾಚರಣೆ ನಡೆಸಿದ್ದು ಅನಂತರ ಸ್ಥಗಿತಗೊಳಿಸಲಾಗಿತ್ತು.

ರಾತ್ರಿಯೂ ಕಾಮಗಾರಿ ಮುಂದುವರಿದ ಕಾರಣ ಹೆಲೋಜಿನ್‌ ಬೆಳಕು ಅಳವಡಿಸಿಕೊಂಡು ತೆರವು ಕಾರ್ಯ ಮುಂದುವರಿಸಲಾಯಿತು. ಕುಂದಾಪುರ ಪಿಎಸ್‌ಐ ಹರೀಶ್‌ ಕುಮಾರ್‌ ಆರ್‌., ಪ್ರೊಬೇಶನರಿ ಪಿಎಸ್‌ಐ ಐ.ಆರ್‌. ಗಡ್ಡೇಕರ್‌ ಹಾಗೂ ಸಿಬಂದಿ, ಕುಂದಾಪುರ ಟ್ರಾಫಿಕ್‌ ಪೊಲೀಸರು ಬಂದೋಬÓ¤… ಹಾಗೂ ಸಂಚಾರ ವ್ಯವಸ್ಥೆ ನಿರ್ವಹಿಸಿದರು. ಅಗ್ನಿಶಾಮಕದಳ ವಾಹನ ಹಾಗೂ ಸಿಬಂದಿ, ಆ್ಯಂಬುಲೆನ್ಸ್‌ ವಾಹನ, ಮೆಸ್ಕಾಂ ಸಿಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ನ. 23ರ ಮುಂಜಾನೆಯಿಂದಲೇ ಮತ್ತೆ ಕೆಲಸ ಆರಂಭಿಸಿ ಪಿಲ್ಲರಿನ ರಾಡುಗಳನ್ನು ಗ್ಯಾಸ್‌ ಕಟ್ಟರ್‌ ಮೂಲಕ ಕತ್ತರಿಸಲಾಯಿತು. ಬಳಿಕ ಮೆಶಿನ್‌ ಕಟ್ಟರ್‌ ಮೂಲಕ ರಾಡು ಕತ್ತರಿಸಿ ಸಂಜೆ ಸುಮಾರಿಗೆ ಮಂಗಳೂರಿನಿಂದ ಬೃಹತ್‌ ಕ್ರೇನ್‌ ತರಿಸಿ ಚೈನ್‌ ಮೂಲಕ ಟ್ಯಾಂಕ್‌ ಮೇಲ್ಭಾಗದ ಡೂಮ್‌ ಕೆಡವಲಾಯಿತು.

ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜಕುಮಾರ್‌, ಸಹಾಯಕ ಎಂಜಿನಿಯರ್‌ಗಳಾದ ಕೇಶವ ಗೌಡ, ಶ್ರೀಧರ್‌ ಪಾಲೆಕ್ಕರ್‌, ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್‌, ಪಿಡಿಒ ಗಣೇಶ, ಕಾರ್ಯದರ್ಶಿ ಹರೀಶ್ಚಂದ್ರ ಆಚಾರ್‌, ಸದಸ್ಯರಾದ ರಮೇಶ್‌ ಸುವರ್ಣ, ಸುರೇಶ್‌ ಶೆಟ್ಟಿ, ಸಿಬಂದಿಗಳಾದ ಸಂದೀಪ್‌ ಕಾಮತ್‌, ಕೃಷ್ಣ ದೇವಾಡಿಗ, ಜಿ.ಪಂ. ಸದಸ್ಯೆ ಶ್ರೀಲತಾ ಶೆಟ್ಟಿ, ಸಮಾಜ ಸೇವಕ ಗಣೇಶ್‌ ಪುತ್ರನ್‌, ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಜು ಬೆಟ್ಟಿನಮನೆ, ಅಣ್ಣಪ್ಪ ಬೆಟ್ಟಿನಮನೆ, ಅಶೋಕ್‌ ಬೀಜಾಡಿ ಹಾಗೂ ಗ್ರಾಮಸ್ಥರು ಸೇರಿದ್ದರು.

Advertisement

ಡಿಸಿ ಆದೇಶ
ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್‌ ಹಾಗೂ ದಲಿತ ಮುಖಂಡರಾದ ರಾಜು ಬೆಟ್ಟಿನ ಮನೆ, ಅಣ್ಣಪ್ಪ ಅವರು ಜಿಲ್ಲಾಧಿಕಾರಿ, ಜಿ.ಪಂ. ಸಿ.ಎಸ್‌. ಮೊದಲಾದವರ ಗಮನಕ್ಕೆ ತಂದಿದ್ದರು. ಇತ್ತೀಚೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಟ್ಯಾಂಕ್‌ ತೆರವಿಗೆ ಆದೇಶ ನೀಡಿದ್ದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 1.5 ಲಕ್ಷ ರೂ., 50 ಸಾವಿರ ರೂ.ಯಂತೆ ಗ್ರಾ.ಪಂ. ಅನುದಾನ ಒಟ್ಟು ಎರಡು ಲಕ್ಷ ರೂ. ಬಿಡುಗಡೆಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next