ವಾಷಿಂಗ್ಟನ್: ಕಂಪೆನಿಯಲ್ಲಿ ಮಾಡಿದ ಲಿಂಗ ತಾರತಮ್ಯದಿಂದಾಗಿ ಗೂಗಲ್ ಈಗ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಸುಮಾರು 15,500 ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಸಮರವನ್ನು ಇತ್ಯರ್ಥಗೊಳಿಸುವ ಸಲುವಾಗಿ 920.60 ಕೋಟಿ ರೂ.(118 ದಶಲಕ್ಷ ಡಾಲರ್) ಮೊತ್ತವನ್ನು ಪಾವತಿಸುವುದಾಗಿ ಗೂಗಲ್ ಒಪ್ಪಿಕೊಂಡಿದೆ.
ಇನ್ನು ಮುಂದೆ ಕಂಪೆನಿಯ ಉದ್ಯೋಗ ನೇಮಕ ಪ್ರಕ್ರಿಯೆ ಮತ್ತು ಪಾವತಿಯಲ್ಲಿ ಸಮಾನತೆ ಕುರಿತು ಮೌಲ್ಯಮಾಪನ ಮಾಡಲು ಸ್ವತಂತ್ರ ಕಾರ್ಮಿಕ ಅರ್ಥ ಶಾಸ್ತ್ರಜ್ಞರೊಬ್ಬರನ್ನು ನೇಮಕ ಮಾಡಿಕೊಳ್ಳಲೂ ಸಿದ್ಧ ಎಂದು ಕಂಪನಿ ಹೇಳಿದೆ.
ಏನಿದು ಪ್ರಕರಣ?: ಕ್ಯಾಲಿಫೋರ್ನಿಯಾದ ಸಮಾನ ವೇತನ ಕಾಯ್ದೆಯ ಅನ್ವಯ, ಉದ್ಯೋಗಿಗಳಿಗೆ ಅವರ ಲಿಂಗ, ಜನಾಂಗ ಅಥವಾ ವರ್ಗದ ಆಧಾರದಲ್ಲಿ ವೇತನದಲ್ಲಿ ತಾರತಮ್ಯ ಮಾಡುವಂತಿಲ್ಲ. ಸಮಾನ ಕೆಲಸಗಳನ್ನು ಮಾಡುವ ಉದ್ಯೋಗಿಗಳು ಹೆಣ್ಣು ಅಥವಾ ಗಂಡಾಗಿರಲಿ, ಯಾವುದೇ ಜನಾಂಗಕ್ಕೆ, ಪ್ರದೇಶಕ್ಕೆ ಸೇರಿದವರೇ ಆಗಿರಲಿ, ಎಲ್ಲರಿಗೂ ಸಮಾನವಾದ ವೇತನ ವನ್ನೇ ನೀಡಬೇಕು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಗೂಗಲ್ ಕಂಪೆನಿಯು ಆ ಕಾಯ್ದೆಯನ್ನು ಉಲ್ಲಂಘಿ ಸಿದ್ದು, ಮಹಿಳಾ ಉದ್ಯೋಗಿಗಳಿಗೆ ನೀಡುವ ವೇತ ನದಲ್ಲಿ ಸುಮಾರು 13.26 ಲಕ್ಷ ರೂ.ಗಳಷ್ಟು ಕಡಿಮೆ ಮೊತ್ತ ಪಾವತಿಸಿದೆ ಎಂದು ಆರೋಪಿಸಿ 2017ರಲ್ಲಿ ಮೂವರು ಮಹಿಳೆಯರು ಪ್ರಕರಣ ದಾಖಲಿಸಿದ್ದರು.
ತಪ್ಪೊಪ್ಪಿಕೊಂಡ ಗೂಗಲ್: ಮಹಿಳಾ ಎಂಜಿನಿಯರ್ ಗಳಿಗೆ ವೇತನ ಹಾಗೂ ಬೋನಸ್‌ನಲ್ಲಿ ತಾರತಮ್ಯ ಎಸಗಿರುವುದು, ಏಷ್ಯಾದ ಉದ್ಯೋಗ ಅರ್ಜಿಗಳನ್ನು ನಿರ್ಲಕ್ಷಿಸಿರುವುದು, ಕಪ್ಪು ವರ್ಣೀಯ ಮಹಿಳಾ ಉದ್ಯೋಗಿಗಳಿಗೆ ದೌರ್ಜನ್ಯ ಎಸಗಿರುವುದು ಮುಂತಾದ ಆರೋಪ ಗಳನ್ನು ಕೊನೆಗೂ ಒಪ್ಪಿಕೊಂಡಿರುವ ಗೂಗಲ್, ಪ್ರಕರಣ ಇತ್ಯರ್ಥಕ್ಕಾಗಿ 920.60 ಕೋಟಿ ರೂ. ಪಾವತಿಸುವುದಾಗಿ ಘೋಷಿಸಿದೆ.