ಹೊಸದಿಲ್ಲಿ: ಇಂಗ್ಲಿಷ್ ಭಾಷಾ ಜ್ಞಾನದ ಕೊರತೆ ಹಿನ್ನೆಲೆಯಲ್ಲಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಡೊಮೈನ್ ನೇಮ್ ಬರಲಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಇದೀಗ ಇಂಟರ್‌ನೆಟ್ ಸರ್ಚ್ ದೈತ್ಯ ಗೂಗಲ್ ಭಾರತಕ್ಕಾಗಿಯೇ ಹಲವು ವಿಶೇಷ ಘೋಷಣೆಗಳನ್ನು ಮಾಡಿದೆ. ಪ್ರಾದೇಶಿಕ ಭಾಷೆಗಳಲ್ಲಿನ ಪತ್ರಿಕೆ ಮತ್ತು ನಿಯತಕಾಲಿಕೆಗಳಿಗಾಗಿ “ನವಲೇಖಾ ಯೋಜನೆ’ (ನವಲೇಖಾ ಪ್ರಾಜೆಕ್ಟ್) ಪ್ರಕಟಿಸಿದೆ. ಜತೆಗೆ ಪಾವತಿ ಆ್ಯಪ್ “ತೇಜ್’ ಅನ್ನು ಹೊಸತಾಗಿ ವಿನ್ಯಾಸಗೊಳಿಸಿ “ಗೂಗಲ್ ಪೇ ಆ್ಯಪ್’ ಎಂದು ಬಿಡುಗಡೆ ಮಾಡಿದೆ. ಅದರ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು 4 ಬ್ಯಾಂಕುಗಳಿಂದ ಪೂರ್ವ ಅನುಮೋದಿತ ಸಾಲ (ಪ್ರಿ ಅಪ್ರೂವ್x ಲೋನ್) ಪಡೆಯುವ ಅವಕಾಶವನ್ನು ಒದಗಿಸಲಾಗಿದೆ.
ನವಲೇಖಾ ಯೋಜನೆ: ಈ ಯೋಜನೆಯಿಂದಾಗಿ ಆಫ್ಲೈನ್‌ನಲ್ಲಿರುವ ವಿಚಾರಗಳನ್ನು ಪಿಡಿಎಫ್ ಫೈಲ್ ಮೂಲಕ ಆನ್‌ಲೈನ್‌ನಲ್ಲಿ ತಪ್ಪಿಲ್ಲದೆ ಓದಲು ಸಾಧ್ಯವಾಗಲಿದೆ. ಅಲ್ಲದೆ, ಪ್ರಾದೇಶಿಕ ಭಾಷೆಗಳಲ್ಲಿರುವ ಪತ್ರಿಕೆಗಳು, ನಿಯತಕಾಲಿಕೆಗಳಿಗೆ ಈ ಯೋಜನೆಯಿಂದ ನೆರವಾಗಲಿದೆ. ಬಹು ಭಾಷೆಗಳಿಗೆ ಅನ್ವಯವಾಗುವಂತೆ ಮಾಹಿತಿಯನ್ನು ವ್ಯವಸ್ಥೆಗೊಳಿಸುವುದರಿಂದ ಸರಳವಾಗಿ ಮಾಹಿತಿ ಓದಲು ಸಾಧ್ಯವಾಗಲಿದೆ. ಓದಲು ಮಾತ್ರವಲ್ಲದೆ, ಅದನ್ನು ಆಲಿಸುವಂಥ ವ್ಯವಸ್ಥೆಯೂ ಇರಲಿದೆ. ಜತೆಗೆ ಟೈಪ್ ಮಾಡಲೂ ನೆರವಾಗಲಿದೆ.
ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಮೊಬೈಲ್ ಮೂಲಕ ಜಾಲತಾಣಗಳ ಸರ್ಚ್ ನಡೆಸುತ್ತಿದ್ದಾರೆ. ಅವರಿಗೆ ಪ್ರಾದೇಶಿಕ ಭಾಷೆಗಳಲ್ಲಿನ ಮಾಹಿತಿ ಕೊರತೆ ಕಾಡುತ್ತದೆ ಎಂದು ಗೂಗಲ್ ಸರ್ಚ್ ಎಂಜಿನಿಯರಿಂಗ್‌ನ ಉಪಾಧ್ಯಕ್ಷ ಶಶಿಧರ ಠಾಕೂರ್ ತಿಳಿಸಿದ್ದಾರೆ.
ಸಿಗಲಿದೆ ಆನ್‌ಲೈನ್‌ನಲ್ಲೇ ಸಾಲ: ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಕಾಲಿಟ್ಟಿರುವ ಗೂಗಲ್, ಇದೀಗ ಗ್ರಾಹಕ ವಸ್ತುಗಳ ಖರೀದಿಗೆ ಸಾಲ ಕೊಡುವ ಬಗ್ಗೆಯೂ ದೇಶದ ನಾಲ್ಕು ಬ್ಯಾಂಕ್‌ಗಳ ಜತೆಗೆ ಸಹಭಾಗಿತ್ವ ಹೊಂದಲಿದೆ. ಎಚ್‌ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಹಾಗೂ ಫೆಡರಲ್ ಬ್ಯಾಂಕ್ ಜತೆಗೆ ಒಪ್ಪಂದ ಮಾಡಿಕೊಂಡು ತಕ್ಷಣವೇ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸಲಿದೆ.
ಗ್ರಾಹಕರಿಗೆ ಆನ್‌ಲೈನ್‌ನಲ್ಲಿಯೇ ಸಾಲಕ್ಕೆ ಅರ್ಜಿ ಹಾಕಿ ಅನುಮೋದನೆ ಪಡೆವ ಅವಕಾಶ ವೃದ್ಧಿಸಲಿರುವುದರಿಂದ ಗೂಗಲ್ ಈ ವ್ಯವಸ್ಥೆಗೆ ಮುಂದಾಗಿದೆ. ಅದಕ್ಕಾಗಿಯೇ ಪಾವತಿ ಆ್ಯಪ್ ತೇಜ್ ಅನ್ನು ಭಾರತಕ್ಕಾಗಿಯೇ ಮರು ವಿನ್ಯಾಸಗೊಳಿಸಿದೆ.
3 ಲಕ್ಷ ಗ್ರಾಮ ಮತ್ತು ಪಟ್ಟಣಗಳಲ್ಲಿರುವವರು ಈಗಾಗಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ಹಣ ಕಳುಹಿಸಲು, ಬಸ್ ದರ ಪಾವತಿ, ರೆಸ್ಟಾರೆಂಟ್‌ಗಳಲ್ಲಿ ಬಿಲ್ ಪಾವತಿಗೆ ಈ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಈಗಲೇ ವಾರ್ಷಿಕವಾಗಿ 30 ಶತಕೋಟಿ ಡಾಲರ್(2.10 ಲಕ್ಷ ಕೋಟಿ ರೂ.) ವಹಿವಾಟು ನಡೆಯುತ್ತಿದೆ. 2023ನೇ ವರ್ಷದಲ್ಲಿ ಅದು 1 ಲಕ್ಷ ಕೋಟಿ ಡಾಲರ್(70 ಲಕ್ಷಕೋಟಿ ರೂ.)ಗೆ ವೃದ್ಧಿಸುವ ಸಾಧ್ಯತೆ ಇದೆ.