Advertisement

ಮರೆಯಾದ ಸಸ್ಯಶಾಸ್ತ್ರದ ಗೂಗಲ್‌ 

07:34 AM Aug 03, 2017 | |

ವೆಂಕಟರಾಮ ದೈತೋಟರದ್ದು ಜ್ಞಾನದೊಂದಿಗೆ ಎರಕವಾದ ಮಾಹಿತಿ. ಅವರೊಂದು ವಿಶ್ವಕೋಶ. ಜುಲೈ 21ರಂದು ಈ ವಿಶ್ವಕೋಶವು ಶಾಶ್ವತ ಮೌನಕ್ಕೆ ಜಾರಿದಾಗ ಮನುಷ್ಯರೇಕೆ, ಸಸ್ಯಗಳೂ ಕಣ್ಣೀರು ಹಾಕಿರಬೇಕು! ಹಿಂದಿನ ರಾತ್ರಿಯಿಡೀ ಮೂಲಿಕೆಯೊಂದರ ಪರಿಚಯ ಬರೆದಿದ್ದರು. ಅದು ಅವರ ಕೊನೆಯ ಬರಹವೆಂದು ನಂಬಲು ಕಷ್ಟವಾಗುತ್ತಿದೆ.

Advertisement

“ಸಸ್ಯಶಾಸ್ತ್ರದ ವಿಚಾರದಲ್ಲಿ ಒಬ್ಬ ವ್ಯಕ್ತಿಯ ಜ್ಞಾನದ ಹರಹು ಇಷ್ಟೂ ಗಟ್ಟಿಯಾಗಿರಲು ಸಾಧ್ಯವಾ?’ ಪಾಣಾಜೆಯ ಪಿ.ಎಸ್‌.ವೆಂಕಟರಾಮ ದೈತೋಟ(77)ರನ್ನು ಕಂಡಾಗಲೆಲ್ಲ ಕಾಡುತ್ತಿದ್ದ ಚೋದ್ಯ. ಸಸ್ಯವೊಂದರ ಮೊದಲ ನೋಟದಲ್ಲೇ ಪೂರ್ಣ ಡಾಟಾವನ್ನು ರೀಡ್‌ ಮಾಡುವ ಮೆಮೊರಿ ಇದೆಯಲ್ಲ, ಅದೊಂದು ಧ್ಯಾನ. ಅಂತರ್ಮುಖೀ ಭಾವ. ಹಿರಿಯರಿಂದ ಹರಿದು ಬಂದ ಜ್ಞಾನವಾರಿಧಿ.

ಮೂಲಿಕೆಗಳೊಂದಿಗೆ ನಾಲ್ಕು ದಶಕಗಳ ಸಮರ್ಪಿತ ಬದುಕು. ಒಂದರ್ಥದಲ್ಲಿ ಅವರು ಕಂಪ್ಯೂಟರಿನ ಗೂಗಲ್‌ ಇದ್ದಂತೆ. ಗೂಗಲಿನಲ್ಲಿ ಟೈಪಿಸಿದರೆ ಆಯಿತು, ಕಣ್ಮುಂದೆ ಮಾಹಿತಿಗಳ ಭರಪೂರ. ಅದು ಮಾಹಿತಿಯಷ್ಟೇ, ಜ್ಞಾನವಲ್ಲ. ದೈತೋಟರದು ಹಾಗಲ್ಲ. ಗೂಗಲಿನಲ್ಲಿ ಟೈಪ್‌ ಮಾಡಲು ಎಷ್ಟು ಹೊತ್ತು ಬೇಕೋ, ಅದಕ್ಕಿಂತ ಕ್ಷಿಪ್ರವಾಗಿ ಅವರ ಮನದ ಕಂಪ್ಯೂಟರ್‌ ಉತ್ತರವನ್ನು ರಾಚುತ್ತದೆ. ಅದು ಜ್ಞಾನದೊಂದಿಗೆ ಎರಕವಾದ ಮಾಹಿತಿ. ಸಂಶಯಕ್ಕೆ ಎಡೆಗೊಡದ ಮಾಹಿತಿಗಳು. ದೈತೋಟರು ಒಂದು ವಿಶ್ವಕೋಶ. ಜುಲೈ 21ರಂದು ಈ ವಿಶ್ವಕೋಶವು ಶಾಶ್ವತ ಮೌನಕ್ಕೆ ಜಾರಿದಾಗ ಮನುಷ್ಯರೇಕೆ, ಸಸ್ಯಗಳೂ ಕಣ್ಣೀರು ಹಾಕಿರಬೇಕು! ಹಿಂದಿನ ರಾತ್ರಿಯಿಡೀ ಮೂಲಿಕೆಯೊಂದರ ಪರಿಚಯ ಬರೆದಿದ್ದರು. ಅದು ಅವರ ಕೊನೆಯ ಬರಹವೆಂದು ನಂಬಲು ಕಷ್ಟವಾಗುತ್ತಿದೆ.  

ವೆಂಕಟರಾಮ ದೈತೋಟರು ಸಸ್ಯಸಂಪತ್ತಿಗೆ ಗಟ್ಟಿ ದನಿಯಾಗಿದ್ದರು. ಔಷಧೀಯ ಗಿಡಗಳ ಗುರುತು ಹಿಡಿದು, ಅವುಗಳ ಗುಣ-ಪ್ರಯೋಗಗಳ ಬಗ್ಗೆ ಹೇಳಬಲ್ಲವರಲ್ಲಿ ಇವರ‌ ಅನುಭವಕ್ಕೆ ಮೇಲ್ಮೆ. ಬಳಸಿ ಬಲ್ಲ ಅನುಭವ. ಇವರ ಅಜ್ಜ ಕಿಳಿಂಗಾರು ಮನೆತನದ ವೈದ್ಯ ಶಂಕರನಾರಾಯಣ ಭಟ್‌. ತಂದೆ ಪಂಡಿತ ಶಂಕರನಾರಾಯಣ ಭಟ್‌. ಸುಮಾರು ಹದಿನೈದು ಭಾಷೆಗಳನ್ನು ಬಲ್ಲವರು. ಇವರ ಮೂಲಿಕಾ ವಿಜ್ಞಾನದ ಅಗಾಧ ಸಂಪತ್ತು ವೆಂಕಟರಾಮರ ಮೂಲಿಕಾ ಬದುಕಿಗೆ ಕೈತಾಂಗು ಆಯಿತು. 

ಸುಮಾರು ಇಪ್ಪತ್ತೆಂಟು ವರುಷಗಳಿಂದ ಕೃಷಿ ಮಾಸಿಕ “ಅಡಿಕೆ ಪತ್ರಿಕೆ’ಯಲ್ಲಿ ದೈತೋಟರ “ಮನೆಮದ್ದು’ ಅಂಕಣವು ಅವರ ಜ್ಞಾನದ ದಾಖಲಾತಿ. ಮೂಲಿಕೆಯೊಂದರ ಪರಿಚಯ, ಬಳಕೆ ವಿಧಾನ, ವಿವಿಧ ಭಾಷೆಗಳ ಹೆಸರುಗಳು, ಸಸ್ಯಶಾಸ್ತ್ರೀಯ ನಾಮ ಮತ್ತು ಆ ಮೂಲಿಕೆಯ ಇರುನೆಲೆ, ನಂಬುಗೆಗಳನ್ನು ಸಂಗ್ರಹಿಸಿ ಬರೆಯುತ್ತಿ ದ್ದರು. ಈ ಅಂಕಣವು ಒಂದು ದಿವಸವೂ ರಜೆ ಪಡೆಯಲಿಲ್ಲ. 

Advertisement

ಆರೋಗ್ಯದ ವಿಚಾರದಲ್ಲಿ ನಿತ್ಯ ಚಿಂತನಶೀಲ. ಆಹಾರದತ್ತ ಜನರ ಔದಾಸೀನ್ಯದ ಬಗ್ಗೆ ಸಂಕಟಪಡುತ್ತಿದ್ದರು. ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣರಾಗುತ್ತಿದ್ದೇವಲ್ಲ ಎನ್ನುವ ದುಃಖ. ಕೆಲವು ವರುಷಗಳ ಕಾಲ ಮಡದಿ ಜಯಲಕ್ಷ್ಮೀ ಅವರೊಂದಿಗೆ ಅನ್ಯಾನ್ಯ ಸ್ಥಳಗಳಲ್ಲಿ ಶಿಬಿರಗಳ ಆಯೋಜನೆಗಳನ್ನು ಮಾಡಿದ್ದರು. ಆರೋಗ್ಯ ಸಮಸ್ಯೆ, ಮೂಲಿಕಾ ಪರಿಚಯ, ಆಹಾರವೇ ಔಷಧಿಯಾಗಬೇಕೆನ್ನುವ ವಿಚಾರಗಳನ್ನು ಮನದಟ್ಟಾಗುವಂತೆ ಪ್ರಸ್ತುತ ಪಡಿಸುತ್ತಿದ್ದರು. ತನ್ನಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದ ಎಲ್ಲರಿಗೂ ಅರ್ಥವಾಗುವಂತೆ ಹೇಳುತ್ತಿದ್ದರು. ಇವೆಲ್ಲ ದಾಖಲಾತಿ  ಆಗುತ್ತಿದ್ದರೆ ಅದೊಂದು ಬೃಹತ್‌ ಜ್ಞಾನಕೋಶವಾಗುತ್ತಿತ್ತು.   

ಮಾತಿಗೆ ಸಿಕ್ಕಾಗಲೆಲ್ಲಾ ವೆಂಕಟರಾಮರಲ್ಲಿ ಕಾಡು ಹರಟೆಯಿದ್ದಿರಲಿಲ್ಲ. ಕೊಳಕು ರಾಜಕೀಯ ವಿಚಾರಗಳ ಸೋಂಕಿಲ್ಲ. ಪರನಿಂದೆ ಇಲ್ಲವೇ ಇಲ್ಲ. ಏನಿದ್ದರೂ ಆರೋಗ್ಯದ ಮಾಹಿತಿಗಳು. ವೈವಿಧ್ಯ ಮೂಲಿಕೆಗಳ ಪರಿಚಯ. ಅವರ ತೋಟ, ಮನೆಯ ಸುತ್ತಲೆಲ್ಲ ಔಷಧೀಯ ಗಿಡಗಳ ರಾಶಿ. ಒಂದು ಎಲೆಯನ್ನು ಯಾರಾದರೂ ಚಿವುಟಿದಾಗ ನೋವಾಗುತ್ತಿತ್ತು. ಚಿವುಟುವವರಿಗೆ ಅದು ಎಲೆಯಾಗಿ ಕಂಡರೆ, ದೈತೋಟರಿಗದು ಮಗು. ಪತ್ರಿಕೆಯಲ್ಲಿ ಬರೆಯುತ್ತಿದ್ದ ಮೂಲಿಕೆಗಳ ಪರಿಚಯದೊಳಗೆ ಅಪರೂಪದ, ಅಷ್ಟು ಸುಲಭವಾಗಿ ಸಿಗದ ವಿಚಾರಗಳು ಮಿಳಿತವಾಗುತ್ತಿದ್ದುವು. ಮಾಹಿತಿ ತಂತ್ರಜ್ಞಾನದ ಕಾಲಘಟ್ಟದಲ್ಲಿ ತಂತ್ರಜ್ಞಾನಕ್ಕೂ ನಿಲುಕದ ಮಾಹಿತಿಗಳ ಒಂದೆರಡು ಉದಾಹರಣೆ ಗಮನಿಸಿ. ನೆಲಪರಂಡೆ ಸಸ್ಯ  - (desmodium trifl orum DC) ಇದು ಹಂಸಪಾದೀ ಎನ್ನುವ ಜರೀಗಿಡದ ಪ್ರತಿನಿಧಿ. ಹಾಗಾಗಿ ಇದರ ಹೆಸರು ಹಂಸಪಾದಿಯೊಂದಿಗೆ ತಳಕು ಹಾಕಿಕೊಂಡಿದೆ. ನೀರಿಂಗಿಸುವ ಸಸ್ಯಗಳಲ್ಲಿ ಪ್ರಮುಖ. ಹುಲ್ಲಿನ ಅನಂತರದ ಸ್ಥಾನ. ಕರಾವಳಿ ನೆಲದ ಎತ್ತರದ ಪದವುಗಳಲ್ಲಿ ಮಳೆಯ ನೀರಿಂಗಿಸಿ ನೀರಿನ ಮೂಲಗಳನ್ನು ಹೆಚ್ಚಿಸುವ ಸಸ್ಯ. ರಾಕ್ಷಸ ಶಕ್ತಿಯ ಅಗೆಯಂತ್ರಗಳು, ಸ್ಥಳಾಂತರಗೊಳ್ಳುತ್ತಿರುವ ಮೇಲ್ಮಣ್ಣು ಈ ಪುಟ್ಟ ಗಿಡದ ನಾಶದ ಕತೆಯನ್ನು ಬರೆದಿವೆ. 

“ರಕ್ತಚಂದನ’ – ಇದು ವಿವೇಚನಾ ರಹಿತವಾದ ಬಳಕೆಯಿಂದ ನಾಶಗೊಂಡಿದೆ. ಪ್ರತಿ ಮನೆಯಲ್ಲಿ ಶಿಶು ಚಿಕಿತ್ಸೆಗಾಗಿ ಇದರ ಕೊರಡನ್ನು ಹಿರಿಯರು ಜತನದಿಂದ ಕಾಪಿಡುತ್ತಿದ್ದರು. “ಕವರಿ ಗಿಡ’ -ತುಳುವಿನಲ್ಲಿದು “ಕೆಯ್ಯೋಳು’. ಕರಾವಳಿ ನೆಲದ ಕೃಷಿಕರ ರೈನ್‌ಕೋಟ್‌ (ಗೊರಬೆ) ನೇಯ್ಗೆಗೆ ಈ ಗಿಡದ ನಾರನ್ನು ಬಳಸುತ್ತಿದ್ದರು. “ಗೊಬ್ಬರದ ಗಿಡ’ (ಗ್ಲಿರಿಸಿಡಿಯಾ). ಗ್ವಾಟೆಮಾಲ ಮೂಲ. ಇದು ದಕ್ಷಿಣ ಅಮೆರಿಕದಲ್ಲಿ ಹರಡಿ, ಕಳೆದ ಶತಮಾನದ ಆರಂಭದಲ್ಲಿ ಶ್ರೀಲಂಕಾ ಮೂಲಕ ಭಾರತ ತಲುಪಿತು. 1950ರ ಕಾಲದಲ್ಲಿ ಮದರಾಸು ಸಂಸ್ಥಾನದ ಕೃಷಿ ವಿಭಾಗವು ಇದನ್ನು ಗೊಬ್ಬರದ ಗಿಡವಾಗಿ ಪರಿಚಯಿಸಿತ್ತು. 

“ಕಾಯಾವಿನ ಗಿಡ’ – ಸುಮಾರು ಅರ್ಧ ಶತಮಾನ ಹಿಂದೆ ಎತ್ತಿನ ಗಾಡಿಯ ಪ್ರಯಾಣ ಸಾಮಾನ್ಯ. ರಾತ್ರಿ ಗಾಡಿಗಳ ಚಾಲಕರು ಹುರಿದ ಅಕ್ಕಿಯ ಜತೆಗೆ ಕಾಯಾವಿನ ಕಾಯಿ, ಹಣ್ಣು ಜಗಿಯುತ್ತಿದ್ದರು. ಇದಕ್ಕೆ ಹುರುಪು ನೀಡುವ ಗುಣವಿದೆ. ಅತಿ ಗೋಜಲಾಗಿ ಬಿಡುವ ರೆಂಬೆಗಳು, ಹೂಗಳು. ಸಣ್ಣ ಗಾತ್ರದ ಹಕ್ಕಿಗಳ ವಾಸದ ನೆಲೆ. ಹೀಗೆ ಮೂಲಿಕೆಗಳ ಮಾಹಿತಿ ಜತೆಗೆ ಇಂತಹ ಅಜ್ಞಾತ ವಿಚಾರಗಳಿಗೆ ದೈತೋಟರು ಅಕ್ಷರ ರೂಪ ನೀಡಿದ್ದಾರೆ.

“”ನಮ್ಮ ಹೊಟ್ಟೆಯೆಂದರೆ ಅದು ತ್ಯಾಜ್ಯ ತುಂಬುವ ಚೀಲವಲ್ಲ. ಅದು ಶರೀರದ ಅತಿ ಪ್ರಮುಖ ಅಂಗ. ಜಠರದ ಆರೋಗ್ಯ ಸರಿಯಿದ್ದರೆ ಮಾತ್ರ ದೇಹಾರೋಗ್ಯ. ಅದು ಕೊಡುವ ಚೈತನ್ಯದಿಂದ ಆರೋಗ್ಯ ಭಾಗ್ಯ” ದೈತೋಟರ ನಿತ್ಯ ಮಂತ್ರ. ಆರೋಗ್ಯಪ್ರೀತಿಯಿದ್ದ ಅಸಂಖ್ಯ ಮನಸ್ಸುಗಳು ದೈತೋಟರ ಆಹಾರ ಕ್ರಮಗಳ ನಿರೂಪಗಳನ್ನು ಪಾಲಿಸುತ್ತಿದ್ದಾರೆ. ಆರೋಗ್ಯದ ಮಹತ್ತನ್ನು ಅರಿತಿದ್ದಾರೆ. ಆರೋಗ್ಯ ವಿಚಾರದ ಅವರ “ಅನ್ನ-ಆರೋಗ್ಯ-ಔಷಧ’ ಪುಸ್ತಕವು ಅಡುಗೆ ಮನೆಯ ವೈದ್ಯ. ನಿತ್ಯದ ಬದುಕಿನಲ್ಲಿ ಪಾಲಿಸಬೇಕಾದ ವಿಚಾರಗಳತ್ತ ನಿರ್ದೇಶನ ನೀಡುತ್ತಾರೆ. ಪುಸ್ತಕದಿಂದ ಉಧೃತ ಭಾಗವೊಂದು ಹೀಗಿದೆ – ಆಹಾರದಲ್ಲಿ ಸೇರಿರುವ ವಿಷಗಳ ಪರಿಹಾರಕ್ಕೆ ದೈತೋಟರು ಸೂಚಿಸುವ ವಿಧಿಗಳು “”ಊಟದ ಆರಂಭದಲ್ಲಿ ಒಂದು ಚಮಚ ಆಕಳ ತುಪ್ಪವನ್ನು ಮೊದಲ ತುತ್ತಿಗೆ ಕಲಸಿ ಊಟ ಮಾಡಿ. ಅಡುಗೆಗಳಿಗೆ ಕರಿಬೇವಿನ ಎಲೆಯ ಒಗ್ಗರಣೆ ಹಾಕಿ. ಹೊಂದುವ ವ್ಯಂಜನಗಳಲ್ಲಿ ಹುರಿದ ಹಿಂಗು (ಇಂಗು) ಸಣ್ಣ ಪ್ರಮಾಣದಲ್ಲಿ ಸೇರಿಸುವುದು. ತಿಂಗಳಿಗೊಮ್ಮೆ ಬಾಳೆದಿಂಡನ್ನು ಕತ್ತರಿಸಿ ಹಸಿಯಾಗಿ ಊಟದೊಂದಿಗೆ ಸೇವನೆ. ಎರಡು ಯಾ ಮೂರು ತಿಂಗಳಲ್ಲಿ ಒಮ್ಮೆ ಬೂದು ಕುಂಬಳಕಾಯಿ ವ್ಯಂಜನ ಸೇವಿಸಿ. ಮಸಾಲೆ ಕಡಿಮೆ ಇರಲಿ. ಬಾಳೆದಿಂಡಿನ ರಸ (ಹಿಂಡಿ ಅರ್ಧ ಗಂಟೆ ಮೀರಿರಬಾರದು) ಎರಡು ಲೋಟದಂತೆ ಮೂರು ದಿವಸ ಬೆಳಿಗ್ಗೆ ಬರೆ ಹೊಟ್ಟೆಗೆ ಸೇವನೆ. ವರುಷದಲ್ಲಿ ಒಮ್ಮೆ ವಾಂತಿಗೆ ಹಾಗೂ ತಜ್ಞರ ಸಲಹೆಯೊಂದಿಗೆ ಭೇದಿಯಾಗಿಸಲು ಔಷಧ ಸೇವನೆ.” ಇಂತಹ ಮಾಹಿತಿಗಳನ್ನು ಓದುತ್ತಿದ್ದಂತೆ ನಮ್ಮ ಕುಟುಂಬದ ಹಿರಿಯರೊಬ್ಬರು ಕಿವಿಹಿಂಡಿ ಮಾರ್ಗದರ್ಶನ ನೀಡಿದಂತೆ ಭಾಸವಾಗುತ್ತದೆ. 

ದೈತೋಟದ ಹಿರಿಯರ “ಆಯುರ್ವೇದ’ ಪ್ರಕಾಶನವು ಕೆಲವು ಕೃತಿಗಳನ್ನು ಪ್ರಕಾಶಿಸಿದೆ. ಅದರಲ್ಲಿ ಅವರ ಜ್ಞಾನ ದಾಖಲಾಗಿದೆ. ವೆಂಕಟರಾಮರ “ಅಡಿಕೆ ಪತ್ರಿಕೆ’ಯ ಅಂಕಣ ಬರಹಗಳು “ಔಷಧೀಯ ಸಸ್ಯ ಸಂಪತ್ತು’ ಹೆಸರಿನಲ್ಲಿ ಅಚ್ಚಾಗಿದೆ. ಪುತ್ತೂರು ವಿವೇಕಾನಂದ ಸಂಶೋಧನಾ ಕೇಂದ್ರವು ಇದನ್ನು ಪ್ರಕಾಶಿಸಿದೆ. ದೈತೋಟರು ಮರಣಿಸುವ ಐದು ದಿವಸದ ಮೊದಲು “ಅಡಿಕೆ ವಲಯದ ಹಸಿ ಮದ್ದುಗಳು’ ಎನ್ನುವ ಕೃತಿಯ ಬಿಡುಗಡೆಗೆ ಸಾಕ್ಷಿಯಾಗಿದ್ದೆ. ಈ ಖುಷಿಗಾಗಿ ಅವರು ನೀಡಿದ ಸಿಹಿಯ ಸ್ವಾದ ಐದೇ ದಿವಸದಲ್ಲಿ ಕಹಿಯಾದುದು ನಂಬಲು ಕಷ್ಟವಾಗುವ ವಿದ್ಯಮಾನ. 
ಅವರ ಜ್ಞಾನದ ಒಂದು ಭಾಗವಷ್ಟೇ ದಾಖಲಾಗಿದೆ. ಕಾಗದಕ್ಕಿಳಿಯದ ಅನುಭವ ಸಾರ, ತಿಳಿವಳಿಕೆಗಳು ಕಾಲಗರ್ಭದಲ್ಲಿ ಲೀನವಾಗಿವೆ. ಮೂಲಿಕಾ ಜ್ಞಾನವನ್ನು ಒಂದು ತಪಸ್ಸಿನ ಹಾಗೆ ಬದುಕಿನೊಳಗೆ ಮಿಳಿತಗೊಳಿಸಿದ ಪಾಣಾಜೆ ವೆಂಕಟರಾಮ ದೈತೋಟರ ಅಗಲುವಿಕೆ ನಿಜಾರ್ಥದಲ್ಲಿ ತುಂಬಲಾರದ ನಷ್ಟ. ಪರಿಸರ, ಆರೋಗ್ಯವನ್ನು ಪ್ರೀತಿಸುವವರ ಕೈಹಿಡಿದು ಮುನ್ನಡೆಸುವ ಸಾರಸ್ವತ ಲೋಕದ ಹಿರಿಯಣ್ಣನ ಸ್ಥಾನ ಶಾಶ್ವತ ಶೂನ್ಯ.

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next