Advertisement

ಕಮಲಾದೇವಿ ಚಟ್ಟೋಪಾಧ್ಯಾಯ ಜನ್ಮದಿನಕ್ಕೆ ಡೂಡಲ್‌

06:00 AM Apr 04, 2018 | Karthik A |

ಮಣಿಪಾಲ: ಮಂಗಳೂರು ಮೂಲದ ದೇಶದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ; ಸ್ವಾತಂತ್ರ್ಯಾನಂತರ ದೇಶದಲ್ಲಿ ಕರಕುಶಲ ಕಲೆಗಳು, ಕೈಮಗ್ಗ, ರಂಗಭೂಮಿಯ ಪುನರುತ್ಥಾ ನಕ್ಕೆ ಶ್ರಮಿಸಿದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನ ವಾದ ಮಂಗಳವಾರ (ಎ. 3) ಅಂತರ್ಜಾಲ ಶೋಧ ಸೇವೆಯಾದ ಗೂಗಲ್‌ ‘ಗೂಗಲ್‌ ಡೂಡಲ್‌’ ರಚಿಸಿ ಗೌರವಿಸಿದೆ. ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಗೂಗಲ್‌ ಸಂಸ್ಥೆಯಿಂದ ಈ ಗೌರವ ಪಡೆಯುತ್ತಿರುವ ರಾಜ್ಯದ ಪ್ರಥಮ ಕರಾವಳಿಯ ಪ್ರಥಮ ವ್ಯಕ್ತಿ. ಈ ಹಿಂದೆ ರಾಜ್ಯದ ಮೇರುನಟ ಡಾ| ರಾಜ್‌ಕುಮಾರ್‌ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಸಂದರ್ಭಗಳಲ್ಲೂ ಅವರ ಕುರಿತು ಗೂಗಲ್‌ ಡೂಡಲ್‌ ರಚಿಸಿ ಗೌರವ ಸೂಚಿಸಿತ್ತು.

Advertisement


ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಹಲವು ಪ್ರಥಮಗಳನ್ನು ಸಾಧಿಸಿದವರು; ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆಯ ಕುರಿತು ಪ್ರಖರವಾಗಿ ದನಿ ಎತ್ತಿದ್ದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಸ್ವತಂತ್ರ ಭಾರತದಲ್ಲಿ ಕರಕುಶಲ ಕಲೆ, ಕೈಮಗ್ಗ ಮತ್ತು ರಂಗಭೂಮಿಯ ಪುನರುತ್ಥಾನಕ್ಕೆ ಅವರೇ ಕಾರಣರು. ರಾಷ್ಟ್ರೀಯ ನಾಟಕಶಾಲೆ, ಸಂಗೀತ ನಾಟಕ ಅಕಾಡೆಮಿ, ಕೇಂದ್ರೀಯ ಕರಕುಶಲ ಕೈಗಾರಿಕೆಗಳ ನಿಗಮ ಮತ್ತು ಭಾರತೀಯ ಕರಕುಶಲ ಮಂಡಳಿಯಂತಹ ಸಂಸ್ಥೆಗಳು ಇಂದು ಅಸ್ತಿತ್ವದಲ್ಲಿ ಇರುವುದಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರೇ ಕಾರಣಕರ್ತರು.

ಕರಾವಳಿಯ ಹೆಮ್ಮೆ ಮಂಗಳೂರಿನ ನಲ್ಮೆ 


ಕಮಲಾದೇವಿ ಅವರು 1903ರ ಎಪ್ರಿಲ್‌ 3ರಂದು ಮಂಗಳೂರಿನಲ್ಲಿ ಜನಿಸಿದರು. ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದ ಅನಂತಯ್ಯ ಧಾರೇಶ್ವರ ಹಾಗೂ ಗಿರಿಜಾಬಾಯಿ ಇವರ ತಂದೆ – ತಾಯಿ. ಕಲೆ, ಶಿಕ್ಷಣ, ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಾಯಿಯ ಪ್ರಭಾವದಿಂದ ಬಾಲ್ಯದಲ್ಲೇ ಇವುಗಳತ್ತ ಕಮಲಾದೇವಿಯವರ ಮನಸ್ಸು ಹೊರಳಿತ್ತು. ಸಂಪ್ರದಾಯಸ್ಥ ಕುಟುಂಬವಾದ್ದರಿಂದ ಬಾಲ್ಯ ವಿವಾಹಕ್ಕೊಳಗಾದ ಕಮಲಾದೇವಿ ಬಳಿಕ ಹತ್ತು ಹಲವು ಕಷ್ಟಗಳನ್ನು ಎದುರಿಸಿದರು. ವಿವಾಹ ನಿಶ್ಚಯವಾದ ಕೆಲವೇ ದಿನಗಳಲ್ಲಿ ತಂದೆಯನ್ನು ಕಳೆದುಕೊಂಡರು. ತಂದೆ – ತಾಯಿಯ ಆಸ್ತಿ ತಂದೆಯ ಮೊದಲ ಪತ್ನಿಯ ಮಗನ ಪಾಲಾಯಿತು. ಇದರಿಂದಾಗಿ ಗಿರಿಜಾಬಾಯಿ ಮತ್ತು ಕಮಲಾದೇವಿ ಅಕ್ಷರಶಃ ಕಷ್ಟಕ್ಕೊಳಗಾದರು. ಕುಡುಕ ಪತಿಯಂದಿರಿಂದಾಗಿ ಕಮಲಾದೇವಿಯ ಸಹೋದರಿಯರಿಬ್ಬರ ಬಾಳು ದುರಂತದಲ್ಲಿ ಕೊನೆಯಾಗಿತ್ತು. ಇದು ಕಮಲಾದೇವಿಯವರನ್ನೂ ಕಂಗೆಡಿಸಿದರೂ ಅವರು ಧೃತಿಗೆಡಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯನ್ನು ಕಳೆದುಕೊಂಡ ಕಮಲಾದೇವಿಯವರಿಗೆ ವಿಧವೆಯಂತೆ ಬದುಕಲು ಅವರ ತಾಯಿ ಅವಕಾಶ ನೀಡಲಿಲ್ಲ. ಶಿಕ್ಷಣ ಮುಂದುವರಿಸಿದ ಅವರ ಬದುಕಿನಲ್ಲಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಪ್ರವೇಶವಾದರು. ಪ್ರೀತಿಸಿ ಮದುವೆಯಾದರೂ ವೈವಾಹಿಕ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ವೈಯಕ್ತಿಕ ಬದುಕಿನ ಏರಿಳಿತಗಳಲ್ಲಿ ಎಲ್ಲೂ ಸೋಲನ್ನೊಪ್ಪಿಕೊಳ್ಳದೆ ಕಮಲಾದೇವಿ ತಮ್ಮ ಬದುಕನ್ನು ತಾವೇ ರೂಪಿಸಿಕೊಂಡರು.

ಸ್ವಾತಂತ್ರ್ಯ ಹೋರಾಟದತ್ತ
ದೇಶದಲ್ಲಿರುವ ಆರ್ಥಿಕ- ಸಾಮಾಜಿಕ ಅಸಮಾನತೆಯನ್ನು ಕಂಡು ಕಮಲಾದೇವಿ ಸ್ವಾತಂತ್ರ್ಯಹೋರಾಟಕ್ಕೆ ಧುಮುಕಿದರು. ಗಾಂಧೀಜಿಯವರ ಭಾಷಣದಿಂದ ಪ್ರೇರಿತರಾದರು. 1920ರ ಬೆಳಗಾವಿ ಅಧಿವೇಶನ ಕಮಲಾ ಅವರ ರಾಜಕೀಯ ಬದುಕಿಗೆ ದಾರಿ ತೋರಿತು. ಅಲ್ಲೂ ಹಲವು ಸಂಕಷ್ಟಗಳೊಂದಿಗೆ ಕೊಂಕುನುಡಿಗಳನ್ನೂ ಎದುರಿಸಬೇಕಾಯಿತು. ಆದರೂ ಛಲಬಿಡದೇ ಬದುಕನ್ನು ಗೆದ್ದು ಉಳಿದವರಿಗೆ ಮಾದರಿಯಾದರು.

ದೊರೆತ ಪ್ರಶಸ್ತಿಗಳು 
1974: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
1966: ಮ್ಯಾಗ್ಸೆಸೆ
1955: ಪದ್ಮಭೂಷಣ 
1987: ಪದ್ಮವಿಭೂಷಣ ಪ್ರಶಸ್ತಿ 

Advertisement

ಎಲ್ಲ ಮಾಹಿತಿ ತುಳು ಭಾಷೆಯಲ್ಲಿ!
ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪೂರ್ಣ ಮಾಹಿತಿ ತುಳುವಿನಲ್ಲೇ ಲಭ್ಯವಿದೆ. ಈ ಮೂಲಕ ತುಳು ಭಾಷೆಗೂ ಗೂಗಲ್‌ ಗೌರವ ಸಲ್ಲಿಸಿದಂತಾಗಿದೆ. ಇದರಿಂದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ತುಳುವರ ಒತ್ತಾಸೆಗೆ ರೆಕ್ಕೆಪುಕ್ಕ ಬಂದಿದೆ.

ಮಂಗಳೂರಿನ ಸಾಧಕಿಗೆ ಮೊದಲ ಗೌರವ 
ಗೂಗಲ್‌ ಡೂಡಲ್‌ನಲ್ಲಿ ಗೌರವ ಸೂಚಿಸಿ ಮಂಗಳೂರಿನ ಸಾಧಕಿಯನ್ನು ವಿಶ್ವಾದ್ಯಂತ ಪ್ರಚುರಪಡಿಸಿದ ಕೀರ್ತಿ ಗೂಗಲ್‌ ಸಂಸ್ಥೆಯದ್ದು. ಈ ಹಿಂದೆ ಈ ಗೂಗಲ್‌ ವಿದೇಶಿ ಸಾಧಕರಿಗೆ ಮಾತ್ರ ಗೌರವ ಸೂಚಿಸುತ್ತಿತ್ತು. ಕೆಲ ವರ್ಷಗಳಿಂದ ಭಾರತದ ಸಾಧಕರನ್ನೂ ಅದು ಗೌರವಿಸುತ್ತಿದೆ. 

ಏನಿದು ಗೂಗಲ್‌ ಡೂಡಲ್‌? 
ಅಂತರ್ಜಾಲದಲ್ಲಿ ಶೋಧನೆಗೆ ಪ್ರಸಿದ್ಧವಾದ ಸರ್ಚ್‌ ಎಂಜಿನ್‌ ಗೂಗಲ್‌. ಕೆಲವು ವಿಶೇಷ ಆಚರಣೆ, ವಿಶೇಷ ದಿನ, ವ್ಯಕ್ತಿಗಳಿಗೆ ಗೌರವ ಸೂಚಿಸಲು ಆಯಾ ಸಂದರ್ಭಕ್ಕನುಸಾರವಾಗಿ ಗೂಗಲ್‌ ಸರ್ಚ್‌ ಇಂಜಿನ್‌ ತೆರೆದಾಗಲೇ ಕಾಣಿಸಿಕೊಳ್ಳುವಂತೆ ಆ್ಯನಿಮೇಶನ್‌ ಹೊಂದಿರುವ ಗೂಗಲ್‌ ಡೂಡಲ್‌ ರಚಿಸಿ, ಗೌರವಿಸುವ, ಆ ದಿನವನ್ನು ನೆನಪಿಸುವ ಪರಿಪಾಠವನ್ನಿಟ್ಟುಕೊಂಡಿದೆ. 

ಫಿನ್‌ ಲ್ಯಾನ್ಡ್ ಕಲಾವಿದೆಯಿಂದ ಕಮಲಾದೇವಿ ಡೂಡಲ್‌ 
ಭಾರತ ಸಂಜಾತೆ ಫಿನ್‌ ಲ್ಯಾನ್ಡ್ ಕಲಾವಿದೆ ಪಾರ್ವತಿ ಪಿಳ್ಳೆ ಅವರು ಕಮಲಾದೇವಿ ಚಟ್ಟೋಪಾಧ್ಯಾಯರ ಡೂಡಲ್‌ ರಚಿಸಿದ್ದಾರೆ. ಇದರಲ್ಲಿ ಹಲವು ಸಾಂಸ್ಕೃತಿಕ ವಿಚಾರಗಳನ್ನು ಅಡಕಗೊಳಿಸಲಾಗಿದೆ. ಕಲಾ ಪ್ರಕಾರಗಳು ಮತ್ತು ಪರಿಕರ ಗಳಾದ ಬಾಂಗ್ರಾ, ಸಿತಾರ್‌, ಸಾರಂಗಿ, ಕಥಕ್‌, ಛಾವು ನೃತ್ಯ, ಕಸೂತಿ, ಕರಕುಶಲ ಕಲೆ, ಬೊಂಬೆ ಯಾಟಗಳನ್ನು ಈ ಡೂಡಲ್‌ ಒಳಗೊಂಡಿದೆ. ಇವೆಲ್ಲವೂ ಕಮಲಾದೇವಿಯವರ ಇಷ್ಟದ ಮತ್ತು ಸಾರ್ಥಕ್ಯದ ಕ್ಷೇತ್ರಗಳಾಗಿದ್ದವು. 

— ಪುನೀತ್‌ ಸಾಲ್ಯಾನ್‌  ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next