ಲಾಸ್ ಏಂಜಲೀಸ್: ಜಾಲತಾಣ ಕ್ಷೇತ್ರದ ದಿಗ್ಗಜ ಗೂಗಲ್ ಕಂಪೆನಿ, ಭಾರತ ಮೂಲದ ಎಂಜಿನಿಯರ್ ಮನು ಗುಲಾಟಿ ಅವರನ್ನು ಮುಖ್ಯ ಎಸ್‌ಒಸಿ ಆರ್ಕಿಟೆಕ್ಟ್ ಆಗಿ ನೇಮಕ ಮಾಡಿಕೊಂಡಿದೆ. ಇದುವರೆಗೆ ಆ್ಯಪಲ್ ಕಂಪೆನಿಯ ಐಫೋನ್ ಮತ್ತು ಐಪ್ಯಾಡ್‌ಗಳಿಗೆ ಮುಖ್ಯ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗುಲಾಟಿ, ಪ್ರಸ್ತುತ ಗೂಗಲ್‌ನ ಮುಂಬರುವ ಪಿಕ್ಸೆಲ್ ಫೋನ್ ನಿರ್ಮಾಣ ಮತ್ತು ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಗೂಗಲ್ ಮೂಲಗಳು ಹೇಳಿಕೊಂಡಿವೆ. 8 ವರ್ಷಗಳಿಂದ ಆ್ಯಪಲ್ ಸಂಸ್ಥೆಗೆ ದುಡಿಯುತ್ತಿರುವ ಮನು ಗುಲಾಟಿ ತಾವು ಸಂಸ್ಥೆ ಬದಲಿಸುತ್ತಿರುವುದಾಗಿ ಲಿಂಕ್ಡ್ಇನ್‌ನಲ್ಲಿ ಹೇಳಿಕೊಂಡಿದ್ದಾರೆ. ಮುಖ್ಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ಆ್ಯಪಲ್‌ನ ಸುಮಾರು 15 ಪೇಟೆಂಟ್‌ಗಳನ್ನು ಹೊಂದಿರುವ ಮನು, ಸ್ವಂತ ಪ್ರೊಸೆಸರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗೂಗಲ್‌ಗೆ ನೆರವಾಗಲಿದ್ದಾರೆ.
ಮುಂದಿನ ದಿನಗಳಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗಾಗಿ ಸ್ವತಃ ಚಿಪ್‌ಸೆಟ್‌ಗಳನ್ನು ರೂಪಿಸುವ ಉದ್ದೇಶ ಹೊಂದಿರುವ ಗೂಗಲ್, ಇದಕ್ಕೆಂದೇ ಒಂದು ತಂಡವನ್ನು ರೂಪಿಸುತ್ತಿದೆ. ಇದೀಗ ಆ್ಯಪಲ್ ಐಫೋನ್‌ಗಳಿಗೆ ಚಿಪ್ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮನು ಅವರ ಆಗಮನದಿಂದ ಗೂಗಲ್ ಬಲ ಹೆಚ್ಚಲಿದೆ ಎಂದು ಐಟಿ ಕ್ಷೇತ್ರದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸ್ವಂತ ಪ್ರೊಸೆಸರ್
ಗೂಗಲ್ ತನ್ನ ಪಿಕ್ಸೆಲ್ ಫೋನ್‌ಗಳಿಗೆ ಪ್ರಸ್ತುತ ಕ್ವಾಲ್‌ಕಾಮ್ ಪ್ರೊಸೆಸರ್ ಬಳಸುತ್ತಿದೆ. ಮನು ಗುಲಾಟಿ ಅವರ ಸೇರ್ಪಡೆಯೊಂದಿಗೆ ಇನ್ನು ಗೂಗಲ್ ಕೂಡ ಆ್ಯಪಲ್ ರೀತಿ ಸ್ವತಃ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಈಗಾಗಲೇ ಚಿಪ್‌ಗಳ ಅಭಿವೃದ್ಧಿಗೆ ಗೂಗಲ್ ಮುಂದಾಗಿದೆ.