ಚಂಡೀಗಢ : ಇಲ್ಲಿನ 16 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಅಂತರ್ಜಾಲ ದೈತ್ಯ ಕಂಪೆನಿಯಾದ ಗೂಗಲ್‌ನಲ್ಲಿ ಉನ್ನತ ಉದ್ಯೋಗ ಗಿಟ್ಟಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 16 ವರ್ಷ ಪ್ರಾಯದ ಹರ್ಷಿತ್ ಶರ್ಮಾ ಅಗಸ್ಟ್‌ನಲ್ಲಿ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದ್ದಾನೆ. ಸರ್ಕಾರಿ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿ ಆಗಿರುವ ಹರ್ಷಿತ್ ಗೂಗಲ್‌ನ ಗ್ರಾಫಿಕ್ ಡಿಸೈನರ್ ತಂಡಕ್ಕೆ ಸೇರ್ಪಡೆಯಾಗಲಿದ್ದು, ವಾರ್ಷಿಕ 1.44 ಕೋಟಿ ರೂಪಾಯಿ ಸಂಬಳ ಗೊತ್ತು ಮಾಡಲಾಗಿದೆ.
1 ವರ್ಷ ಕಾಲ ತರಬೇತಿ ಅವಧಿಯಾಗಿದ್ದು ಸ್ಟೈಪೆಂಡ್ ಆಗಿ ತಿಂಗಳಿಗೆ 4 ಲಕ್ಷ ರೂಪಾಯಿ ಸಿಗಲಿದೆ. ಆ ಬಳಿಕ ತಿಂಗಳಿಗೆ 12 ಲಕ್ಷ ರೂಪಾಯಿ ಸಂಬಳ ಸಿಗಲಿದೆ ಎಂದು ವರದಿಯಾಗಿದೆ.
ಹರ್ಷಿತ್ ಕುರುಕ್ಷೇತ್ರದ ಮಥಾನ ನಿವಾಸಿಗಳಾಗಿರುವ ಶಿಕ್ಷಕ ದಂಪತಿ ಪುತ್ರನಾಗಿದ್ದು ಪಿಯುಸಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ.
‘ನಾನು ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಾಟದಲ್ಲಿದ್ದೆ, ಆನ್‌ಲೈನ್‌ನಲ್ಲೇ ಸಂದರ್ಶನ ನೀಡಿದ್ದೆ,ಅದೃಷ್ಟವಷಾತ್ ಆಯ್ಕೆಯಾದೆ. ನನಗೆ ಮೊದಲಿನಿಂದಲೂ ಗ್ರಾಫಿಕ್ ಡಿಸೈನರ್ ಆಗುವ ಮಹತ್ವಾಕಾಂಕ್ಷೆ ಇತ್ತು’. ಎಂದು ಹರ್ಷಿತ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾನೆ.