Advertisement

Chat GPT ಗೆ ಸಡ್ಡು ಹೊಡೆಯಲು ಗೂಗಲ್‌ ಜೆಮಿನಿ ಸಜ್ಜು !

12:46 AM Jan 03, 2024 | Team Udayavani |

ಚಾಟ್‌ ಜಿಪಿಟಿ ಬಂದ ಬಳಿಕ ಇಡೀ ವಿಶ್ವವೇ ಅದರ ಸಾಮರ್ಥ್ಯ ಕಂಡು ನಿಬ್ಬೆರಗಾಗಿತ್ತು. ಯಾವ ಪ್ರಶ್ನೆ ಕೇಳಿದರೂ ಥಟ್ಟನೆ ಸಮರ್ಪಕ ಉತ್ತರ ಬಂದಾಯಿತು. ಹಾಗಿದ್ದರೂ ಚಾಟ್‌ಜಿಪಿಟಿ ಯಲ್ಲೂ ಸಾಕಷ್ಟು ಕುಂದುಕೊರತೆಗಳಿವೆ. ಕನ್ನಡ ಅಥವಾ ಇತರ ಕೆಲವು ಭಾಷೆಗಳನ್ನು ಅದು ಅರ್ಥೈಸಿಕೊಳ್ಳಲು ಮತ್ತು ನಿಖರವಾದ ಉತ್ತರಗಳನ್ನು ಕೊಡಲು ಚಾಟ್‌ಜಿಪಿಟಿ ವಿಫ‌ಲವಾಗಿದೆ. ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಇನ್ನೂ ಹೆಚ್ಚಿನ ದಕ್ಷತೆ ಮತ್ತು ಸಾಮರ್ಥ್ಯವನ್ನು ಹೊಂದಿದ ತಂತ್ರಜ್ಞಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿಗಳು ನಿರಂತರ ಅನ್ವೇಷಣೆಯಲ್ಲಿ ತೊಡಗಿವೆ. ಇಂತಹ ಆವಿಷ್ಕಾರಗಳಿಗೆ ಹೊಸ ಸೇರ್ಪಡೆ ಗೂಗಲ್‌ ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ “ಜೆಮಿನಿ’. ಗೂಗಲ್‌ ಜೆಮಿನಿಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

Advertisement

ಎಐ ಜಗತ್ತಿನ ಹೊಸ ಯುಗ
ಗೂಗಲ್‌, 2023ರ ತನ್ನ ಡೆವಲಪರ್ಸ್‌ ಕಾನ್ಫರೆನ್ಸ್‌ನಲ್ಲಿ ಬಿಡುಗಡೆಗೊಳಿಸಿದ “ಜೆಮಿನಿ’ಯು ಅತ್ಯಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿದ್ದು, ಅತೀ ಹೆಚ್ಚು ನಿಖರ ಮತ್ತು ಅರ್ಥಪೂರ್ಣ ಉತ್ತರಗಳನ್ನು ನೀಡಿದ ದಾಖಲೆಗಳನ್ನು ತನ್ನ ಪ್ರಾಯೋಗಿಕ ಹಂತದಲ್ಲಿಯೇ ನಿರೂಪಿಸಿದೆ. ಈ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದುಕೊಂಡಿರುವ ಗೂಗಲ್‌ನ ಸಿಇಒ ಸುಂದರ್‌ ಪಿಚೈ ಹಾಗೂ ಗೂಗಲ್‌ನ ಎಐ ಘಟಕವಾದ ಡೀಪ್‌ಮೈಂಡ್‌ ನ ಸಿಇಒ ಡೆಮಿಸ್‌ ಹಸ್ಸಾಬಿಸ್‌, ಸದ್ಯಕ್ಕೆ ಬಿಡುಗಡೆಗೊಂಡಿರುವ ಜೆಮಿನಿ 1.0 ಎಐ ಮಾದರಿಯು “ಹೊಸ ಜಗತ್ತಿನ ಪ್ರಾರಂಭ’ ಮತ್ತು ಇದು “ಎಐ ಮಾದರಿಗಳ ಹೊಸ ಯುಗ’ ಎಂದು ಹೇಳಿಕೊಂಡಿದ್ದಾರೆ.

ಏನಿದು ಜೆಮಿನಿ? ಇದರ ವೈಶಿಷ್ಟ್ಯಗಳೇನು?
ಗೂಗಲ್‌ ಜೆಮಿನಿಯು ಮೂಲ ಮಾದರಿಗಳನ್ನು ಒಳಗೊಂಡಿರುವ ಸಂಯೋಜಿತ ಬಹುಮಾದರಿ ಎಐ ಮಾದರಿ ಆಗಿದೆ. ಇದು ವಿವಿಧ ವಿಧಾನಗಳ ಮೇಲೆ ಪೂರ್ವ-ತರಬೇತಿ ಹೊಂದಿರುವ ಜತೆಗೆ ಉತ್ತಮ, ಟ್ಯೂನ್‌ ಮಾಡಲ್ಪಟ್ಟಿರುವುದರಿಂದ ಕೇಳುವ ಪ್ರಶ್ನೆಗಳನ್ನು ಅಥವಾ ನೀಡುವ ಇನ್‌ಪುಟ್‌ಗಳನ್ನು ಅಡೆತಡೆಗಳಿಲ್ಲದೆ ಅರ್ಥೈಸಿಕೊಂಡು, ತರ್ಕಿಸಿ ಸೂಕ್ತ ಉತ್ತರಗಳನ್ನು ನೀಡುತ್ತದೆ. ಜೆಮಿನಿಯು ತನ್ನ ಪ್ರೋಗ್ರಾಮಿಂಗ್‌ನಲ್ಲಿ ಸಾಕಷ್ಟು ಪ್ರಾವೀಣ್ಯವನ್ನು ಹೊಂದಿರುವ ಕಾರಣ ತನ್ನ ಈ ಹಿಂದಿನ ಎಲ್ಲ ಎದುರಾಳಿಗಳಿಗಿಂತ ಶೇ. 85ರಷ್ಟು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.
ಇನ್ನೊಂದು ಕಡೆ, ಗೂಗಲ್‌ ಕಂಪೆನಿಯು, ಜೆಮಿನಿಯನ್ನು ಸರ್ಚ್‌ ಎಂಜಿನ್‌ಗಳಲ್ಲಿ ಅಧಿಕೃತವಾಗಿ ಅಳವಡಿಸುವ ಮೊದಲೇ ಅದಕ್ಕೆ ಭಾಷಾ ಜ್ಞಾನಗಳು ಮತ್ತು ಸರ್ಚ್‌ ಜನರೇಟೀವ್‌ ಎಕ್ಸ್‌ಪೀರಿಯೆನ್ಸ್‌ ಸಿಗಲು ಗೂಗಲ್‌ನ ಸರ್ಚ್‌ ಎಂಜಿನ್‌ಗಳಲ್ಲಿ ನಿಧಾನವಾಗಿ ಅಳವಡಿಸುತ್ತಾ ಬಂದಿದ್ದರು. ಹಾಗಾಗಿಯೇ ಅಮೆರಿಕನ್‌ ಇಂಗ್ಲಿಷ್‌ ಅನ್ನು ಬಳಸಿ ಜೆಮಿನಿ ಬಳಿ ಪ್ರಶ್ನೆಗಳನ್ನಿತ್ತರೆ ಅದು ಶೇ.40 ಕಡಿಮೆ ಸಮಯವನ್ನು ಪ್ರಶ್ನೆ ಅರ್ಥ ಮಾಡಿಕೊಂಡು ಉತ್ತರ ನೀಡಲು ಬಳಸಿಕೊಳ್ಳುತ್ತದೆ.

ಗೂಗಲ್‌ ಜೆಮಿನಿಯ 3 ಮಾದರಿಗಳು
ಜೆಮಿನಿ ನ್ಯಾನೋ- ಇತರ ಮಾದರಿಗಳಿಗಿಂತ ಗಾತ್ರದಲ್ಲಿ ಸಂಕುಚಿತವಾಗಿದ್ದು, ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸ್ಮಾರ್ಟ್‌ಫೋನ್‌ಗಳಿಗಾಗಿ ರಚಿಸಲಾಗಿದೆ. ಪ್ರಾಯೋಗಿಕವಾಗಿ ಗೂಗಲ್‌ ಪಿಕ್ಸೆಲ್‌ 8 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಈ ಜೆಮಿನಿ ನ್ಯಾನೋವನ್ನು ಪರಿಚಯಿಸಲಾಗಿದೆ. ಅದರಂತೆ ಒಂದು ದೀರ್ಘ‌ ಪ್ರಶ್ನೆಯನ್ನು ಕೇಳಿದರೆ ಹೊರಗಿನ ಸರ್ವರ್‌ಗಳನ್ನು ಬಳಸಿಕೊಳ್ಳದೆ ಆ ಪ್ರಶ್ನೆಯ ಸಾರಾಂಶವನ್ನು ಮಾಡಿಕೊಂಡು, ಅರ್ಥೈಸಿಕೊಂಡು ಉತ್ತರಿಸುವಂತಹ ವೈಶಿಷ್ಟ್ಯವನ್ನು ಹೊಂದಿದೆ.

ಜೆಮಿನಿ ಪ್ರೋ- ಜೆಮಿನಿ ಎಐಯ ಅತ್ಯಂತ ಸುಧಾರಿತ ಮಾದರಿ. ಇದು ಎಲ್‌ಎಎಂಡಿಎ ಚಾಲಿತ ಬಾರ್ಡ್‌ನ “ಮುಂದುವರಿದ ಮಾದರಿ’ಯಾಗಿದೆ. ಇದು ಕಠಿನ ಪ್ರಶ್ನೆಗಳನ್ನೂ ತನ್ನಲ್ಲಿಯೇ ಅರ್ಥೈಸಿಕೊಂಡು ಕಡಿಮೆ ಸಮಯದಲ್ಲಿ ಉತ್ತರಿಸುವ ಶಕ್ತಿಯನ್ನು ಹೊಂದಿದೆ. ಜೆಮಿನಿ ಅಲ್ಟ್ರಾ- ಈ ಮಾದರಿಯು ಗೂಗಲ್‌ ನ ಅತ್ಯಂತ ಸಾಮರ್ಥ್ಯಯುತವಾದ “ವಿಶಾಲ ಭಾಷಾ ಮಾದರಿ’ , ಗಾತ್ರದಲ್ಲಿಯೂ ಉಳಿದ ಮಾದರಿಗಳಿಗಿಂತ ದೊಡ್ಡದಾಗಿದೆ. ಗೂಗಲ್‌ ಹೇಳುವಂತೆ ಜೆಮಿನಿ ಅಲ್ಟ್ರಾ ವು ನೀಡುವಂತಹ ಫ‌ಲಿತಾಂಶಕ್ಕೆ , “ವಿಶಾಲ ಭಾಷಾ ಮಾದರಿ’ ಗಳ ಸಂಶೋಧನೆಗಳಲ್ಲಿ ಅಂಕಗಳನ್ನು ನೀಡುವಂತೆ 32 ಅಂಕಗಳಲ್ಲಿ ಈ ಜೆಮಿನಿ ಅಲ್ಟ್ರಾ ಕ್ಕೆ 30 ಅಂಕಗಳನ್ನು ನೀಡುತ್ತದಂತೆ.

Advertisement

“ಭಾರತ್‌ ಜಿಪಿಟಿ’- ಎಐ ನಲ್ಲಿ ಭಾರತದ ಹೊಸಯುಗದ ಪ್ರಾರಂಭ?
ರಿಲಯನ್ಸ್‌ ಜಿಯೋ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಜಂಟಿಯಾಗಿ “ಭಾರತ್‌ ಜಿಪಿಟಿ’ಯನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಇತ್ತೀಚೆಗಷ್ಟೆ ರಿಲಯನ್ಸ್‌ ಜಿಯೋದ ಅಧ್ಯಕ್ಷ ಮುಖೇಶ್‌ ಅಂಬಾನಿಯವರ ಪುತ್ರ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ನ ಮುಖ್ಯಸ್ಥರಾದ ಆಕಾಶ್‌ ಅಂಬಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತ್‌ ಜಿಪಿಟಿ ಯನ್ನು “ಜಿಯೋ 2.0′ ಎಂದು ಕರೆದಿರುವ ಆಕಾಶ್‌ ಅಂಬಾನಿ, ಎಐ ಎಂದರೆ ಕೇವಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮಾತ್ರವಲ್ಲದೆ, ಆಲ್‌ ಇನ್‌ಕ್ಲೂಡೆಡ್‌(ಎಲ್ಲವೂ ಸೇರಿಕೊಂಡಿದೆ) ಎಂಬುದಾಗಿದೆ ಎಂದು ಹೇಳಿದ್ದಾರೆ. ಇದು ಭಾರತೀಯ ಭಾಷಾ ಕೇಂದ್ರಿತವಾಗಿ ಕೆಲಸ ನಿರ್ವಹಿಸುವ ಎಐ ವ್ಯವಸ್ಥೆಯಾಗಿದ್ದು, ತಂತ್ರಜ್ಞಾನದ ಮೂಲಕ ಭಾರತೀಯ ಭಾಷೆಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಒತ್ತು ನೀಡುವ ಪ್ರಯತ್ನ ಎನ್ನಬಹುದು.

ಜೆಮಿನಿಯ ಬಳಕೆ ಹೇಗೆ ಮತ್ತು ಎಲ್ಲಿ?
ಜೆಮಿನಿ ಎಐಯ ಬಳಕೆಗೆ ಜೆಮಿನಿ ನ್ಯಾನೋದಿಂದ ಪ್ರಾರಂಭವಾಗುತ್ತಿದ್ದು, ವಿನೂತನ ವೈಶಿಷ್ಟéಗಳನ್ನು ಹೊಂದಿರುವುದರಿಂದ ರೆಕಾರ್ಡರ್‌ ಆ್ಯಪ್‌ಗ್ಳಲ್ಲಿ, ಗೂಗಲ್‌ ಕೀಬೋರ್ಡ್‌ಗಳಲ್ಲಿ ಸ್ಮಾರ್ಟ್‌ ರಿಪ್ಲೆ„ ಕೊಡಲು, ವಾಟ್ಸ್‌ಆ್ಯಪ್‌ಗ್ಳಲ್ಲಿಯೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಅಷ್ಟೇ ಅಲ್ಲದೆ ಗೂಗಲ್‌ನ ಇತರ ವಿವಿಧ ಗ್ಯಾಜೆಟ್‌ಗಳಲ್ಲಿ, ಸರ್ಚ್‌ ಎಂಜಿನ್‌ ಕ್ರೋಮ್‌ನಲ್ಲಿ, ಜಾಹೀರಾತುಗಳಲ್ಲಿ ಹಾಗೂ ಡುಯೆಟ್‌ ಎಐಗಳಲ್ಲಿ ಅಳವಡಿಸಲಾಗುತ್ತಿದೆ. ಪ್ರಾರಂಭಿಕವಾಗಿ ಇದು ಗೂಗಲ್‌ ಪಿಕ್ಸೆಲ್‌ 8 ಪ್ರೋ ಮೂಲಕ ಬಳಕೆದಾರರಿಗೆ ಲಭ್ಯವಾಗಲಿದೆ. ಉಳಿದ ಆಂಡ್ರಾಯ್ಡ ಬಳಕೆದಾರರೂ ಮುಂದಿನ ದಿನಗಳಲ್ಲಿ ಜೆಮಿನಿಯನ್ನು ಬಳಸುವಂತಾಗಲಿದ್ದು, ಆಂಡ್ರಾಯ್ಡ 14 ಅನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಜೆಮಿನಿ ನ್ಯಾನೋವನ್ನು ಬಳಸಬಹುದಾಗಿದೆ.
ಡಿಸೆಂಬರ್‌ 13ರಂದು ಅಧಿಕೃತವಾಗಿ ಬಿಡುಗಡೆಯಾಗಿರುವ ಜೆಮಿನಿ ಪ್ರೋ ಮಾದರಿಯನ್ನು ಅಭಿವರ್ಧಕರು ಮತ್ತು ಉದ್ಯಮಗಳು  ಗೂಗಲ್‌ ಎಐ ಸ್ಟುಡಿಯೋ ಅಥವಾ ಗೂಗಲ್‌ ಕ್ಲೌಡ್‌ ವರ್ಟೆಕ್ಸ್‌ ಎಐಗಳಲ್ಲಿರುವ ಜೆಮಿನಿ ಎಪಿಐ(ಅಕಐ) ಮೂಲಕ ಬಳಸಬಹುದಾಗಿದೆ.

ಜೆಮಿನಿ ಅಲ್ಟ್ರಾ ಮಾದರಿಯು ಇನ್ನು ಕೂಡ ಪ್ರಾಯೋಗಿಕ ಹಂತದಲ್ಲಿದ್ದು, ಆಯ್ಕೆಯ ಗ್ರಾಹಕರಿಗೆ, ಡೆವಲಪರ್ಸ್‌ಗಳಿಗೆ, ಸೇಫ್ಟಿ ಎಕ್ಸ್‌ ಪರ್ಟ್‌ಗಳಿಗೆ ಬಳಕೆಗೆ ನೀಡಲಾಗಿದೆ ಮತ್ತು ಅವರಿಂದ ಬರುತ್ತಿರುವ ಅಭಿಪ್ರಾಯ ಮತ್ತು ಸಲಹೆಗಳ ಮೇರೆಗೆ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ತನ್ನ ಅಗಾಧ ಸಾಮಥ್ಯದ ಮೂಲಕ ವಿಶ್ವದ ಗರಿಷ್ಠ ಬಳಕೆದಾರರನ್ನು ಹೊಂದುವ ಎಲ್ಲ ಸಾಧ್ಯತೆಯನ್ನು ಹೊಂದಿರುವ ಜೆಮಿನಿ ಅಲ್ಟ್ರಾ ಮಾದರಿಯು 2024ರ ಜನವರಿಯ ಮೊದಲನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

 ಅವನೀಶ್‌ ಭಟ್‌, ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next