ಪಶ್ಚಿಮ ಬಂಗಾಳ: ಎರಡು ರೈಲುಗಳ ನಡುವೆ ಢಿಕ್ಕಿ ಸಂಭವಿಸಿ 12 ಬೋಗಿಗಳು ಹಳಿ ತಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಾಕುರದಲ್ಲಿ ಭಾನುವಾರ ಮುಂಜಾನೆ (ಜೂ.25 ರಂದು) ನಡೆದಿದೆ.
ಓಂಡಾ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು, ಒಂದು ಗೂಡ್ಸ್ ರೈಲು ಮತ್ತೊಂದು ಗೂಡ್ಸ್ ರೈಲಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಪಘಾತವಾದ ಎರಡೂ ರೈಲುಗಳು ಖಾಲಿ ಗೂಡ್ಸ್ ರೈಲುಗಳಾಗಿವೆ. ಸ್ಪಷ್ಟವಾಗಿ ಹೇಗೆ ರೈಲುಗಳ ನಡುವೆ ಅಪಘಾತವಾಗಿದೆ ಎನ್ನುವುದು ತಿಳಿದುಬಂದಿಲ್ಲ. ಈ ಅವಘಡದಿಂದ ಆದ್ರಾ ವಿಭಾಗದ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಆದ್ರಾ ವಿಭಾಗವು ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಿಗೆ ಸೇವೆ ಸಲ್ಲಿಸುತ್ತದೆ. ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ ಮತ್ತು ಬುರ್ದ್ವಾನ್ ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳಾದ ಧನ್‌ಬಾದ್, ಬೊಕಾರೊ ಮತ್ತು ಸಿಂಗ್‌ಭೂಮ್. ಇದು ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಸಮಯದ ಹಿಂದಷ್ಟೇ ಒಡಿಶಾದ ಬಾಲಸೋರ್ ಜಿಲ್ಲೆ ನಡೆದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ ಮೃತಪಟ್ಟಿದ್ದರು.