ಒಡಿಶಾ: ಪೂರ್ವ ಕರಾವಳಿ ರೈಲ್ವೆ ವ್ಯಾಪ್ತಿಯ ಜಾಜ್ ಪುರ್ ಜಿಲ್ಲೆಯ ಕೋರೈ ನಿಲ್ದಾಣ ಸಮೀಪ ಸೋಮವಾರ (ನವೆಂಬರ್ 21) ಸರಕು ಸಾಗಣೆ ರೈಲು ಹಳಿತಪ್ಪಿದ ಪರಿಣಾಮ ಇಬ್ಬರು ದುರಂತ ಅಂತ್ಯ ಕಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಹಾಗೂ ಬಿಡಿಎ ಗಳ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು: ಸಿಎಂ ಬೊಮ್ಮಾಯಿ
ಘಟನೆಯಲ್ಲಿ ಮೃತಪಟ್ಟಿರುವ ಕುಟುಂಬ ಸದಸ್ಯರಿಗೆ ಐದು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಲ್ಲದೇ ಸಣ್ಣ-ಪುಟ್ಟ ಗಾಯಗೊಂಡ ವ್ಯಕ್ತಿಗಳಿಗೆ 25,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಸರಕು ಸಾಗಣೆ ರೈಲು ಹಳಿ ತಪ್ಪಿದ ಪರಿಣಾಮ ರೈಲ್ವೆ ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಾಗಿ ವೈಷ್ಣವ್ ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಡಿವಿಷನಲ್ ರೈಲ್ವೆ ಮ್ಯಾನೇಜರ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಎರಡೂ ರೈಲ್ವೆ ಹಳಿಗಳು ಬ್ಲಾಕ್ ಆಗಿದ್ದು, ಕೆಲವು ಗಂಟೆಗಳವರೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ಹೇಳಿದೆ.