ಬೆಂಗಳೂರು: ದೇಶಾದ್ಯಂತ ಜುಲೈ ಒಂದರಿಂದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಮೇಲೆ ಕೆಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂಬ ಆತಂಕವನ್ನು ಅಲ್ಲಗಳೆದಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಯಾವುದೇ ವಸ್ತುವಿನ ಮೇಲಿನ ತೆರಿಗೆ ಪ್ರಸ್ತುತ ದರಕ್ಕಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉದ್ಯಮಿಗಳಿಗೆ ಜಿಎಸ್‌ಟಿ ಕುರಿತು ಅರಿವು ಮೂಡಿಸಲು ಸಮನ್ವಯ ಸಾಮಾಜಿಕ ಸಂಸ್ಥೆ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್‌ಟಿಯಲ್ಲಿ ಪ್ರಸ್ತುತ ತೆರಿಗೆಯನ್ನು ಹೆಚ್ಚಿಸಲು ಅವಕಾಶವೇ ಇಲ್ಲ. ಜಿಎಸ್‌ಟಿ ಜಾರಿಗೆ ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳ ಸಹಮತ ಪಡೆಯಲು ಉನ್ನತ ಮಟ್ಟದ ಜಿಎಸ್‌ಟಿ ಮಂಡಳಿ ರಚಿಸಲಾಗಿತ್ತು.
ಇದರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿದ್ದರು. ಆ ಮಂಡಳಿಯಲ್ಲಿ ಕೆಲವು ನಿಯಮಗಳನ್ನು ಅಳವಡಿಸಿಕೊಂಡಿದ್ದು, ಅದರಲ್ಲಿ ತಟಸ್ಥ ಆದಾಯ ನೀತಿಯೂ (ರೆವೆನ್ಯೂ ನ್ಯೂಟ್ರಲ್ ಪಾಲಿಸಿ) ಒಂದು. ಈ ನೀತಿಯ ಪ್ರಕಾರ ಯಾವುದೇ ವಸ್ತುವಿನ ಮೇಲಿನ ತೆರಿಗೆಯನ್ನು ಪ್ರಸ್ತುತ ದರಕ್ಕಿಂತ ಹೆಚ್ಚಿಸುವಂತಿಲ್ಲ. ಒಂದೋ ಯತಾಸ್ಥಿತಿ ಕಾಯ್ದುಕೊಳ್ಳಬೇಕು ಇಲ್ಲವೇ ಕಡಿಮೆ ಮಾಡಬೇಕು ಎಂದರು.
ಗೊಂದಲ ಉಂಟಾದರೆ ಸಂಪರ್ಕಿಸಿ: ಜಿಎಸ್‌ಟಿ ಮಂಡಳಿಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳ ವಿಭಾಗದ ಸಹ ಸಂಚಾಲಕ ವಿನೋದ್ ಕುಮಾರ್ ಮಾತನಾಡಿ, “ಜಿಎಸ್‌ಟಿ ಜಾರಿಯಿಂದಾಗಿ ದೇಶಾದ್ಯಂತ ತೆರಿಗೆಗೆ ಸಂಬಂಧಿಸಿದಂತೆ ಒಂದೇ ತೆರನಾದ ಅರ್ಜಿ, ಕಾನೂನು ಇರಲಿದೆ. ತೆರಿಗೆಯಲ್ಲಿ ಸಂಕೀರ್ಣತೆಯನ್ನು ತೆಗೆದುಹಾಕಿ ಸರಳಗೊಳಿಸಲಾಗುತ್ತಿದೆ,’ ಎಂದರು.
ಪ್ರಸ್ತುತ ಇರುವ ತೆರಿಗೆ ವ್ಯವಸ್ಥೆಯಲ್ಲಿ ಪ್ಯಾನ್ ಸಂಖ್ಯೆ ತಪ್ಪಾಗಿ ನಮೂದಿಸುವಿಕೆ, ಮೊಬೈಲ್ ಸಂಖ್ಯೆ ನೋಂದಣಿಯಾಗಿದ್ದರೂ ಅದು ಅಸ್ತಿತ್ವದಲ್ಲಿ ಇಲ್ಲದೇ ಇರುವುದು ಮುಂತಾದ ಸಮಸ್ಯೆಗಳು ಎದುರಾಗಿವೆ. ಆದರೆ, ಜಿಎಸ್‌ಟಿಯಲ್ಲಿ ಇಂತಹ ಯಾವುದೇ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ. ಇಷ್ಟರ ಮಧ್ಯೆಯೂ ತೆರಿಗೆ ವ್ಯವಸ್ಥೆ ಬಗ್ಗೆ ಗೊಂದಲ ಉಂಟಾದರೆ ಟ್ವಿಟರ್ ಮೂಲಕ ಅಥವಾ ನೇರವಾಗಿ ಭೇಟಿಯಾದರೆ ಬಗೆಹರಿಸಲು ಇಲಾಖೆ ಅಧಿಕಾರಿಗಳು ಸಿದ್ಧರಿದ್ದಾರೆ ಎಂದರು.
ಆಗಸ್ಟ್ 20ಕ್ಕೆ ಮೊದಲ ಜಿಎಸ್‌ಟಿ ಪಾವತಿ: ಕೇಂದ್ರ ಸುಂಕ ಮತ್ತು ಅಬಕಾರಿ ಪ್ರಧಾನ ಆಯುಕ್ತ ಡಿ.ಪಿ.ನಾಗೇಂದ್ರ ಕುಮಾರ್ ಮಾತನಾಡಿ, ಎಲ್ಲಾ ಉದ್ಯಮಿಗಳೂ ಜೂನ್ 30ರೊಳಗೆ ಪ್ರಸ್ತುತ ತೆರಿಗೆ ಪದ್ಧತಿಯಿಂದ ಜಿಎಸ್‌ಟಿಗೆ ವರ್ಗಾವಣೆಯಾಗಿ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇದರಿಂದ ಉದ್ಯಮಿಗಳು ಇನ್‌ಪುಟ್ ಸಬ್ಸಿಡಿಯ ಲಾಭ ಪಡೆಯುವುದರೊಂದಿಗೆ ಗ್ರಾಹಕರಿಗೂ ಅದನ್ನು ವರ್ಗಾಯಿಸಬಹುದು ಎಂದರು.
ನೋಂದಣಿ ಪ್ರಕ್ರಿಯೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ಪ್ರಕ್ರಿಯೆ ಅತ್ಯಂತ ಸರಳವಾಗಿದೆ. 20ಕ್ಕೆ ಮೊದಲ ಬಾರಿ ಜಿಎಸ್‌ಟಿ ತೆರಿಗೆ ಪಾವತಿಸಬೇಕಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಉದ್ಯಮಿಗಳಿಗೆ ಅನುಕೂಲವಾದ ರೀತಿಯಲ್ಲಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಹಾಗೂ ಸಮನ್ವಯ ವೇದಿಕೆ ಅಧ್ಯಕ್ಷ ಲೆಹರ್ ಸಿಂಗ್ ಹಾಜರಿದ್ದರು.