Advertisement

ಗೂಡ್ಸೆ ನಮ್ಮ ದಾರಿಯಲ್ಲ, ಗಾಂಧಿ ನಮ್ಮ ಬೆಳಕು

11:57 AM Sep 13, 2017 | Team Udayavani |

ಮೈಸೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಗೌರಿ ಲಂಕೇಶ್‌ ಹತ್ಯೆಯನ್ನು ಖಂಡಿಸಿ ಗೂಡ್ಸೆ ನಮ್ಮ ದಾರಿಯಲ್ಲ, ಗಾಂಧಿ ನಮ್ಮ ಬೆಳಕು, ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಕೊಲ್ಲುವ ಹಕ್ಕಲ್ಲ, ಕೊಂದು ಕಟ್ಟಲಾಗದು, ನಮ್ಮೆಲ್ಲರ ನಾಡನ್ನು, ಪೆನ್‌ಗೆ ಗನ್‌ ಸವಾಲಲ್ಲ ಮೊದಲಾದ ಘೋಷಣೆಗಳನ್ನು ಕೂಗಿದರು. 

ಹತ್ಯೆ ಅಮಾನವೀಯ: ಪ್ರಗತಿಪರ ಚಿಂತಕ ಪ.ಮಲ್ಲೇಶ್‌ ಮಾತನಾಡಿ, ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಡಾ.ಎಂ.ಎಂ.ಕಲಬುರ್ಗಿ ಅವರು ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಧರ್ಮನಿರಪೇಕ್ಷತೆ, ವೈಚಾರಿಕ ಮನೋಭಾವಗಳನ್ನು ಅತ್ಯಂತ ನಿಖರ, ನಿಷೂuರ ಮತ್ತು ಪ್ರಖರವಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಆದರೆ ಇವರಿಬ್ಬರನ್ನು ಹತ್ಯೆ ಮಾಡಿರುವುದು ಬರ್ಬರ ಮತ್ತು ಅಮಾನವೀಯ ಕೃತ್ಯ.

ಈ ಹತ್ಯೆ ಹಿಂದಿರುವವರನ್ನು ತ್ವರಿತವಾಗಿ ಪತ್ತೆಹಚ್ಚಿ, ಹತ್ಯೆಗೆ ಪ್ರೇರೇಪಿಸಿದವರಿಗೆ ಕಾನೂನಾತ್ಮಕ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳು ಮುಂದೆ ಮರುಕಳಿಸದಂತೆ ಸರ್ಕಾರ ಮುಂಜಾಗ್ರತೆ ಕ್ರಮಕೈಗೊಂಡು, ಸಂವಿಧಾನದ ಆಶಯಗಳನ್ನು ನಿರ್ಭೀತಿಯಿಂದ ಅಭಿವ್ಯಕ್ತಿಸುವ ವಾತಾವರಣ ನಿರ್ಮಿಸಬೇಕು. ಅಲ್ಲದೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕೆಂದು ಮನವಿ ಮಾಡಿದರು.

ಪ್ರಧಾನಿ ಮೌನದಿಂದ ಅಪಮಾನ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅನಾದಿ ಕಾಲದಿಂದಲೂ ಸತ್ಯ ಹೇಳಿದವರನ್ನು ಕೊಲೆ ಮಾಡಿಕೊಂಡು ಬಂದಿರುವುದನ್ನು ಗಮನಿಸಿದರೆ ಇದು ಕೊಲೆಗಡುಕ ದೇಶವೇ? ಅಥವಾ ಪ್ರಬುದ್ಧ ದೇಶವೇ? ಎಂಬ ಅನುಮಾನ ಮೂಡುತ್ತದೆ. ಭಾರತದ ಮಣ್ಣಿನ ಗುಣ ವೈಚಾರಿಕತೆಯಿಂದ ಕೂಡಿದ್ದು, ಮೂರ್ಖರ ಗುಂಡಿನ ಮಾತು ನಮ್ಮ ಮುಂದೆ ನಿಲ್ಲೋದಿಲ್ಲ.

Advertisement

ಗೌರಿ ಹತ್ಯೆ ವಿಚಾರವಾಗಿ ಪ್ರಧಾನಿ ಮೌನವಹಿಸಿರುವುದು ದೇಶಕ್ಕೆ ಅವಮಾನ ಮಾಡಿದಂತಾಗಿದೆ. ತಮ್ಮ ಮನ್‌ ಕೀ ಬಾತ್‌ನಲ್ಲಿ ಒಂದೇ ಎಂಬ ಭಾವನೇ ಬಿಂಬಿಸಲಿ. ಮುಂದಿನ ದಿನದಲ್ಲಿ ಇದಕ್ಕೆ ತಕ್ಕ ಶಾಸ್ತಿಯಾಗಲಿದೆ. ದೇಶ ದೇಶವಾಗಬೇಕಾದರೆ ಸಂವಿಧಾನ ಆಶೋತ್ತರಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಇದಕ್ಕೂ ಮುನ್ನ ರಾಮಸ್ವಾಮಿ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಚಾಮರಾಜ ಜೋಡಿರಸ್ತೆ,

ಸಂಸ್ಕೃತ ಪಾಠಶಾಲೆ ವೃತ್ತ, ಸಯ್ನಾಜಿರಾವ್‌ ರಸ್ತೆ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಪ್ರತಿಭಟನೆಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್‌, ಜಿಪಂ ಸದಸ್ಯೆ ಡಾ.ಪುಷ್ಪಾ, ಎಐಟಿಯುಸಿ ರಾಜಾಧ್ಯಕ್ಷೆ ಉಮಾದೇವಿ, ನಂದಾ ಹಳೆಮನೆ ಸೇರಿದಂತೆ ದಸಂಸ, ಆರ್‌ಡಿಎಂಎಸ್‌, ಬಹುಮುಖೀ ಭಾರತ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗುಂಡಿನ ಉತ್ತರ ನಾಚಿಕೆಗೇಡಿತನ
ಸತ್ಯ ಹಾಗೂ ವಿಚಾರಗಳನ್ನು ಹೇಳುವ ಪೆನ್ನುಗಳಿಗೆ ಗುಂಡಿನ ಮೂಲಕ ಉತ್ತರ ಕೊಡುತ್ತಿರುವ ಸಂಸ್ಕೃತಿ ನಾಚಿಕೆಗೇಡಿನ ಸಂಗತಿ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಈ ಬೆಳವಣಿಗೆಯಿಂದ ದೇಶದ ವ್ಯವಸ್ಥೆಗೆ ನಾಚಿಕೆಯಾಗಬೇಕಿದ್ದು, ಸತ್ಯವನ್ನು ಗುಂಡಿನಿಂದ ಮುಚ್ಚಲು ಸಾಧ್ಯವೇ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next