ಮಂಗಳೂರು ವಿಶ್ವವಿದ್ಯಾನಿಲಯದ ಡಾ|ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ನೀಡುವ ಯಕ್ಷಮಂಗಳ ಪ್ರಶಸ್ತಿಗೆ 2018ನೇ ಸಾಲಿನಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಹಾಗೂ ಬಡಗುತಿಟ್ಟಿನ ಹಿರಿಯ ವೇಷಧಾರಿ ಗೋಡೆ ನಾರಾಯಣ ಹೆಗಡೆ ಆಯ್ಕೆಯಾಗಿದ್ದಾರೆ. ಪ್ರೊ|ಜಿ.ಎಸ್.ಭಟ್ಟ ಸಾಗರ ಅವರ “ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಯು ಯಕ್ಷಮಂಗಳ ಕೃತಿ ಪ್ರಶಸ್ತಿ ಲಭಿಸಿದೆ.
ಕುಂಬ್ಳೆ ಸುಂದರರಾವ್: ತೆಂಕುತಿಟ್ಟು ಯಕ್ಷ ಗಾನ ಕ್ಷೇತ್ರದಲ್ಲಿ ಕುಂಬ್ಳೆ ಸುಂದರ ರಾವ್ ಅಗ್ರ ಪಂಕ್ತಿಯ ಶ್ರೇಷ್ಠ ಕಲಾವಿದ ರಲ್ಲಿ ಒಬ್ಬರು. ಪ್ರಾಥ ಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಸುಂದರರಾಯರು ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾಗಿ ಪರಿಶ್ರಮದಿಂದ ಅರ್ಥಗಾರಿಕೆಯ ಸಾಧನೆಯನ್ನು ಮಾಡಿ ಶೇಣಿ, ಸಾಮಗ ಮೊದಲಾದ ಅರ್ಥಧಾರಿಗಳ ಕೂಟದಲ್ಲಿ ಮೆರೆದಿದ್ದಾರೆ. ಬಣ್ಣದ ಕುಟ್ಯಪ್ಪುರವರಲ್ಲಿ ಸ್ಥೂಲವಾದ ನಾಟ್ಯಾಭ್ಯಾಸವನ್ನು ಮಾಡಿ ರಂಗಪ್ರವೇಶ ಮಾಡಿರುವ ಇವರು ಕೂಡ್ಲು, ಇರಾ, ಸುರತ್ಕಲ್ ಮೇಳಗಳಲ್ಲಿ ಆರಂಭದ ತಿರುಗಾಟ ಹಾಗೂ ಅನಂತರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘವಾದ ತಿರುಗಾಟವನ್ನು ನಡೆಸಿರುವರು. ಭರತ, ಕರ್ಣ, ಭೀಷ್ಮ, ದುಷ್ಯಂತ, ಅಕ್ರೂರ, ಸಂಜಯ, ಪರೀಕ್ಷಿತ ಮೊದಲಾದವು ಇವರ ಪಾತ್ರಗಳು. ಪ್ರಾಸಬದ್ಧವಾದ ಮಾತಿನ ಪಾಂಡಿತ್ಯಕ್ಕೆ ಹೆಸರಾದ ಇವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಗೋಡೆ ನಾರಾಯಣ ಹೆಗಡೆ: ಬಡಗು ತಿಟ್ಟು ಯಕ್ಷಗಾನದಲ್ಲಿ ತಮ್ಮ ಅಪ್ರತಿಮ ಕಲಾಸಾಧನೆ ಯ ಮೂಲಕ ಪ್ರಸಿದ್ಧ ರಾದ ವರು ಗೋಡೆ ನಾರಾಯಣ ಹೆಗಡೆಯವರು. ರಸಾತ್ಮಕ ವಾಗ್ಮಿತೆ, ಪಾತ್ರಗಳ ನಾಡಿಮಿಡಿತವನ್ನರಿತ ಗರಿಷ್ಠ ಮಟ್ಟದ ಕಲಾಭಿವ್ಯಕ್ತಿ ಮೈಗೂಡಿಸಿಕೊಂಡ ಹೆಗಡೆಯವರು ಆರಂಭಿಕ ವೃತ್ತಿ ಬದುಕಿನಲ್ಲಿ ಸ್ತ್ರೀವೇಷಧಾರಿಯಾಗಿ ಮೆರೆದವರು. ಇವರ ತಾರೆ, ದಮಯಂತಿ, ಸೈರೇಂಧ್ರಿ, ದಾûಾಯಿಣಿ, ಪ್ರಭಾವತಿ ಪಾತ್ರಗಳು ಜನಮನ ರಂಜಿಸಿವೆ. ಕೌರವನ ಪಾತ್ರದ ಮೂಲಕ ತಾರಾಮೌಲ್ಯದ ವರ್ಚಸ್ಸು ಪಡೆದರು. ಕೌರವ, ರಾವಣ, ಋತುಪರ್ಣ, ಬ್ರಹ್ಮ, ಲಕ್ಷ್ಮಣ, ಅರ್ಜುನ, ಸಾಲ್ವ, ಜಾಂಬವ, ಕಾರ್ತವೀರ್ಯ, ಕೀಚಕ, ಸುಧನ್ವ ಪಾತ್ರಗಳು ಯಕ್ಷ ಪ್ರೇಕ್ಷಕರ ಮನದಾಳದಲ್ಲಿ ಸ್ಥಾಯಿಯಾದವರು. ಇಡಗುಂಜಿ , ಅಮೃತೇಶ್ವರಿ , ಮುಲ್ಕಿ , ಪೆರ್ಡೂರು , ಪಂಚಲಿಂಗ , ಶಿರಸಿ ಮಾರಿಕಾಂಬ ತಿರುಗಾಟ ಮಾಡಿರುವ ಗೋಡೆಯವರ ಕಲಾಕೃಷಿಗೆ ಸುವರ್ಣ ಸಂಭ್ರಮ. ಪ್ರಸ್ತುತ ಗೋಡೆ ವಿಶ್ರಾಂತ ಜೀವನದಲ್ಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮಾ.15ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ “ಮೋಹಿನೀ ಏಕಾದಶೀ ಹಾಗೂ ತಂಡದ ಹಿರಿಯ ವಿದ್ಯಾರ್ಥಿಗಳಿಂದ “ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಾ| ಧನಂಜಯ ಕುಂಬ್ಳೆ