Advertisement
ಪ್ರಸ್ತುತ ಉಂಟಾಗಿರುವ ಸಂದಿಗ್ಧ ಸ್ಥಿತಿಯಲ್ಲೂ ಹೆಚ್ಚು-ಕಡಿಮೆ ವೈದ್ಯರು, ಪೊಲೀಸರಷ್ಟೇ ಈ ಸಿಬ್ಬಂದಿ ಕಳೆದ ಒಂದು ವಾರದಿಂದ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ತುರ್ತು ಸೇವಾ ಸಿಬ್ಬಂದಿಯ ಮನ ಗೆದ್ದಿದ್ದಾರೆ. ಇಡೀ ನಗರ ಸ್ತಬ್ದಗೊಂಡಿದೆ. ಸಮೂಹ ಸಾರಿಗೆಗಳಲ್ಲಿ ಕೋವಿಡ್ 19 ವೈರಸ್ ಹರಡುವಿಕೆಯ ಸಾಧ್ಯತೆ ಹೆಚ್ಚೆಂದು ಅದನ್ನು ನಿಲ್ಲಿಸಲಾಗಿದೆ. ಕೆಲವು ಬಸ್‌ಗಳನ್ನು ಮಾತ್ರ ತುರ್ತು ಸೇವೆಗೆ ಬೀದಿಗಿಳಿಸಲಾಗಿದೆ. ಅದರಲ್ಲಿ 300ಕ್ಕೂ ಅಧಿಕ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಲು ಮುಂದೆಬಂದಿದ್ದಾರೆ.
Related Articles
Advertisement
ಬಿಎಂಟಿಸಿ ವ್ಯಾಪ್ತಿಯಲ್ಲಿ ತುರ್ತು ಸೇವೆಗಳಿಗಾಗಿ 185ಕ್ಕೂ ಅಧಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ ಪಶ್ಚಿಮ ವಲಯದಿಂದ ನಿತ್ಯ 32-42 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ 300 ಟ್ರಿಪ್ ಪೂರೈಸುತ್ತಿವೆ. 65-80 ಚಾಲನಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಲ್ಲರೂ ಸ್ವಯಂಪ್ರೇರಿತವಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಶ್ಚಿಮ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ತಿಳಿಸಿದರು.
ಪಾಸ್ ಅವಧಿ ವಿಸ್ತರಣೆ : ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಾಸಿಕ ಪಾಸ್ ಅವಧಿಯನ್ನು ಬಿಎಂಟಿಸಿ ವಿಸ್ತರಣೆ ಮಾಡಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಸಿಕ ಪಾಸು ವಿತರಿಸುತ್ತಿಲ್ಲ. ಹಾಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದಿನ ತಿಂಗಳ (ಮಾರ್ಚ್ ಪಾಸು) ಪಾಸನ್ನು ಏ. 15ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರು ಮಾರ್ಚ್‌ನಲ್ಲಿ ಪಾಸು ಹಾಗೂ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವೆಗೆ ಉತ್ತಮ ಅವಕಾಶ : “ಕೆಲವರು ಬೇರೆ ಬೇರೆ ಕಡೆಗಳಿಂದ ಬಂದಿರುತ್ತಾರೆ. ರೋಗಿಯೊಂದಿಗೆ ವ್ಯವಹರಿಸಿರಬಹುದು. ಅದರ ಭಯ ಇದ್ದೇ ಇರುತ್ತದೆ. ಆದರೆ, ಈ ಸಮಯದಲ್ಲಿ ಸೇವೆ ಸಲ್ಲಿಸಲು ನಮಗೊಂದು ಅವಕಾಶ. ರಸ್ತೆಗಿಳಿಯುವ ಮುನ್ನ ಬಸ್ ಸಂಪೂರ್ಣ ಸ್ವಚ್ಛಗೊಳಿಸಲಾಗಿರುತ್ತದೆ. ನಮಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗಿದ್ದು, ಅಂತರ ಕಾಯ್ದುಕೊಳ್ಳುತ್ತೇವೆ. ಹಾಗಾಗಿ, ಸಮಸ್ಯೆ ಇಲ್ಲ’ ಎಂದು ಬನಶಂಕರಿ ಮಾರ್ಗದ ಚಾಲಕ ಸತೀಶ್ ತಿಳಿಸುತ್ತಾರೆ.