Advertisement
ಶಿವಮೊಗ್ಗಕ್ಕೆ ಭೇಟಿ ನೀಡಿದವರು ಸ್ಥಳೀಯರಲ್ಲಿ ವಿಚಾರಿಸಿದರೆ ಬಾಲಾಜಿ ಟಿಫನ್ ರೂಂ ಚಿರಪರಿಚಿತ. ಜಿಲ್ಲಾಧಿಕಾರಿ ಕಚೇರಿಎದುರಿನಲ್ಲಿರುವ ಬಾಲಾಜಿ ಟಿಫನ್ ರೂಂ ಎಂದಾಕ್ಷಣ ನೆನಪಿಗೆ ಬರುವುದು ಅಲ್ಲಿ ದೊರಕುವ ಇಡ್ಲಿ ಸಾಂಬಾರ್. ಇಲ್ಲಿನ ಸಾಂಬಾರ್‌ನ್ನು ಒಮ್ಮೆ ಸವಿದವರು ಅದನ್ನು ಮರೆಯುವ ಸಾಧ್ಯತೆಯೇ ಇಲ್ಲ.
ಬಿಸಿಬಿಸಿ ಇಡ್ಲಿಗೆ ಸಾಂಬರ್‌ನ್ನು ಕಪ್‌ನಲ್ಲಿ ಕೊಡುವ ವಾಡಿಕೆ ಇಲ್ಲಿಲ್ಲ. ಬದಲಿಗೆ ಇಡ್ಲಿ ಮೇಲೆ ಸಾಂಬರ್‌ನ್ನು ಹಾಕಿಕೊಡುವುದೇ ಇಲ್ಲಿನ ಸ್ಪೆಷಲ್! ಇದರ ಜತೆಗೆ ಇಲ್ಲಿ ಸಿಗುವ ಮೊಸರು ವಡೆ ರುಚಿ ಸವಿಯಲು ಬರುವ ಗ್ರಾಹಕರದ್ದು ಉದ್ದನೆಯ ಪಟ್ಟಿ ಇದೆ. ಚಿತ್ರಾನ್ನ, ಮೊಸರನ್ನ, ಕಡ್ಲೆಬೇಳೆ ವಡೆ, ಉದ್ದಿನ ವಡೆ, ಚಹ, ಕಾಫಿ ಕೂಡ ಲಭ್ಯ. ಹೋಟೆಲ್‌ನ ಇನ್ನೊಂದು ವಿಶೇಷತೆ ಎಂದರೆ, ಬೆಳಗ್ಗೆ 7.30ರಿಂದ ಪ್ರಾರಂಭಗೊಂಡು ಸಂಜೆ 4ಕ್ಕೆ ಕ್ಲೋಸ್ ಆಗುತ್ತದೆ. ಅಷ್ಟರೊಳಗೆ ಗ್ರಾಹಕರು ಭೇಟಿ ನೀಡಬೇಕು.
Related Articles
ಮೂಲತಃ ಕುಂದಾಪುರದವರಾದ ಕೆ. ಶ್ರೀನಿವಾಸ್, ಈ ಹೊಟೆಲ್ ಸ್ಥಾಪಕರು. 6 ದಶಕದ ಹಿಂದೆ ಶಿವಮೊಗ್ಗಕ್ಕೆ ಬಂದು ಇಲ್ಲಿ ನ್ಯೂ ಇಂಡಿಯನ್ ಕಾಫಿ ಬಾರ್ ಹೆಸರಿನಲ್ಲಿ ಹೊಟೆಲ್ ಉದ್ಯಮ ಆರಂಭಿಸಿದ್ದ ಇವರು ನಂತರ ಅದನ್ನು ತಮ್ಮೊಂದಿಗೆ ಕೆಲಸಕ್ಕಿದ್ದ ತಮ್ಮ ಪತ್ನಿಯ ಸಹೋದರ (ಬಾಮೈದ) ಹೆಚ್. ಶ್ರೀನಿವಾಸ್‌ರಾವ್‌ರಿಗೆ ಇದರ ಜವಾಬ್ದಾರಿ ವಹಿಸಿದರು. ನಂತರದಲ್ಲಿ ನ್ಯೂ ಇಂಡಿಯನ್ ಕಾಫಿ ಬಾರ್ ಎಂದಿದ್ದ ಹೆಸರು ಬಾಲಾಜಿ ಟಿಫನ್ ರೂಂ ಎಂದು ಮಾರ್ಪಾಡುಗೊಂಡು ಅಂದಿನಿಂದ ಇಂದಿನವರೆಗೆ ಶಿವಮೊಗ್ಗದ ಜನತೆಗೆ ರುಚಿರುಚಿಯಾದ ತಿನಿಸುಗಳನ್ನು ತಿನಿಸುತ್ತಾ ಬಂದಿದೆ.
Advertisement
ಇದೀಗ ಮಾಲೀಕರಾದ ಹೆಚ್. ಶ್ರೀನಿವಾಸ್ ಜತೆಗೆ ಅವರ ಇಬ್ಬರು ಮಕ್ಕಳಾದ ಕಿರಣ್ ಕುಮಾರ್ ಹಾಗೂ ಸತೀಶ್ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಹೋಟೆಲ್‌ನಲ್ಲಿ 9 ಮಂದಿ ಕೆಲಸಕ್ಕಿದ್ದಾರೆ. ಪ್ರಸ್ತುತ ವಿದ್ಯಮಾನದಲ್ಲಿ ಹೋಟೆಲ್ ನಡೆಸುವುದು ನಿಜಕ್ಕೂ ಸವಾಲಿನ ಉದ್ಯಮ. ಕೆಲಸಗಾರರು ಸಿಗುವುದು ಕಷ್ಟ. ಅದೃಷ್ಟಕ್ಕೆ ಐವರು ಮಹಿಳೆಯರು ಕೆಲಸಕ್ಕೆ ಸಿಕ್ಕಿದ್ದಾರೆ. ಅವರೇ ನಮ್ಮ ಹೋಟೆಲ್‌ನ ನಿಜವಾದ ಆಧಾರಸ್ತಂಭ ಎನ್ನುತ್ತಾರೆ ಕಿರಣ್‌ಕುಮಾರ್.
ಬದಲಾವಣೆ ಇಲ್ಲಕಟ್ಟಡ ಆರು ದಶಕದ ಹಿಂದೆ ಹೇಗಿತ್ತೋ ಅದೇ ರೀತಿ ಇದೆ. ಶಿವಮೊಗ್ಗದಲ್ಲಿ ಇಷ್ಟು ಸುದೀರ್ಘ ವರ್ಷ ಯಾವುದೇ ಮಾರ್ಪಾಡು ಇಲ್ಲದೆ ನಡೆಯುತ್ತಿರುವ ಏಕೈಕ ಹೊಟೆಲ್ ತಮ್ಮದು ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ಕಿರಣ್ ಕುಮಾರ್ ಕೆ. ಮೋಹನ್